ಕಾಲ ಬದಲಾದಂತೆ ಚಿತ್ರರಂಗದ ವ್ಯಾಖ್ಯಾನ ಕೂಡ ಬದಲಾಗಿದೆ. ಈ ಹಿಂದೆ ಕಾಣಿಸುತ್ತಿದ್ದ ಭಕ್ತಿ ಮತ್ತು ಭಾವ ಇಂದು ಚಿತ್ರರಂಗದಲ್ಲಿ ಕಣ್ಮರೆಯಾಗಿದೆ. ಬದಲಾದ ಈ ಕಾಲದಲ್ಲಿ ಬರೀ ಹೊಡೆದಾಟ, ರಕ್ತಪಾತ ಮತ್ತು ತಲೆ ಕೆಡಿಸುವ ಕಮರ್ಷಿಯಲ್ ಸಿನಿಮಾಗಳೇ ಆಕ್ರಮಿಸಿಕೊಂಡಿವೆ. ಪ್ರೇಕ್ಷಕ ಕೂಡ ಅನಿವಾರ್ಯವಾಗಿ ಇಂತಹ ಸಿನಿಮಾಗಳ ಜಾಲದಲ್ಲಿ ಸಿಲುಕಿ ಬೇಸತ್ತಿದ್ದಾನೆ. ಹೀಗಿರುವಾಗ ಆಕ್ಷನ್ ಸಿನಿಮಾಗಳ ಅಬ್ಬರದ ನಡುವೆ, ಮನಸ್ಸಿಗೆ ನಿಜವಾದ ನೆಮ್ಮದಿ ಮತ್ತು ಭಕ್ತಿಯ ಅನುಭೂತಿ ನೀಡಲು ”ಲಕ್ಷ್ಮೀ ಗಣೇಶ ಪ್ರೊಡಕ್ಷನ್” ಮತ್ತು ”ದಿ ನ್ಯೂ ಇಂಡಿಯನ್ ಟೈಮ್ಸ್” ಸಂಸ್ಥೆ ಅಡಿ ನಟ, ನಿರ್ದೇಶಕ, ನಿರ್ಮಾಪಕ ರಘು ಭಟ್ ಮತ್ತು ಅವರ ಪತ್ನಿ ಸುಗುಣ ಒಂದು ವಿಭಿನ್ನ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಆ ಅದ್ಭುತ ಪ್ರಯತ್ನದ ಹೆಸರೇ ”ರಾಯರ ದರ್ಶನ”.
ಹೌದು, ”ರಾಯರ ದರ್ಶನ”.. ರಘು ಭಟ್ ಮತ್ತು ಸುಗುಣ ಅವರ ಅಪರೂಪದ ಕನಸು. ರ್‍ಯಾಪ್ ಮತ್ತು ಸಿನಿಮಾ ಹಾಡುಗಳ ಅಬ್ಬರದ ನಡುವೆ ಹೊರ ತರಲಾಗುತ್ತಿರುವ ದೈವಿಕ ಆಲ್ಬಂ. ಇದು ಇವತ್ತಿನವರೆಗೆ ಬಂದಿರುವ ಮಾಮೂಲಿ ಭಕ್ತಿಗೀತೆಗಳ ತರಹ ಅಲ್ಲವೇ ಅಲ್ಲ. ಯಾಕೆಂದರೆ ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೆ ಖ್ಯಾತರಾದ ಶ್ರೀ ರಾಘವೇಂದ್ರ ಸ್ವಾಮಿಗಳ ಕುರಿತು ಈಗಾಗಲೇ ಸಾವಿರಾರು ಹಾಡುಗಳು ಬಂದಿವೆ. ಆದರೆ, ”ರಾಯರ ದರ್ಶನ” ಸಂಪೂರ್ಣ ಭಿನ್ನ. ರಘು ಭಟ್ ಮತ್ತು ಸುಗುಣ ನೇತೃತ್ವದ ಈ ತಂಡ ಮಂತ್ರಾಲಯದ ಇತಿಹಾಸದಲ್ಲೇ ಯಾರೂ ಮಾಡದ ಒಂದು ಸಾಹಸಕ್ಕೆ ಕೈಹಾಕಿದೆ.

ಮಂತ್ರಾಲಯ ಮಠದ ಒಳಗೆ ವರ್ಷಪೂರ್ತಿ ನಡೆಯುವ ವಿಶೇಷ ಆಚರಣೆಗಳು, ಸಾಮಾನ್ಯ ಜನರಿಗೆ ಸುಲಭವಾಗಿ ಕಾಣಿಸದ ರಾಯರ ಸನ್ನಿಧಿಯ ಅತ್ಯಂತ ಪವಿತ್ರ ಉತ್ಸವಗಳನ್ನು ಈ ಆಲ್ಬಂನಲ್ಲಿ ಕಣ್ಣಿಗೆ ಕಟ್ಟುವಂತೆ ಸೆರೆಹಿಡಿಯಲಾಗಿದೆ. ಇದಕ್ಕೆ ಕೈಗನ್ನಡಿಯೇ ಇತ್ತೀಚೆಗೆ ಹಿರಿಯ ನಟಿ ತಾರಾ ಅನುರಾಧ ಬಿಡುಗಡೆ ಮಾಡಿರುವ ಈ ಆಲ್ಬಂನ ಟೀಸರ್.
ವಿಶೇಷ ಅಂದರೆ ಈ ದೈವಿಕ ಪ್ರಯತ್ನಕ್ಕೆ ಸ್ಯಾಂಡಲ್‌ವುಡ್‌ನ ಸ್ಟಾರ್ ತಂತ್ರಜ್ಞರೇ ಸಾಥ್ ಕೊಟ್ಟಿದ್ದಾರೆ. ”ಕಾಂತಾರ” ಸಿನಿಮಾದ ಮ್ಯೂಸಿಕ್ ಮೂಲಕ ಇಡೀ ದೇಶವನ್ನೇ ಬೆರಗಾಗಿಸಿದ್ದ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಹಾಗೂ ಸಿ.ಆರ್. ಬಾಬಿ ಜೊತೆಗೂಡಿ ಈ ಭಕ್ತಿಗೀತೆ ಸಂಗೀತ ಸಂಯೋಜಿಸಿದ್ದಾರೆ. ನಾಗಾರ್ಜುನ ಶರ್ಮಾ ಅವರ ಅದ್ಭುತ ಸಾಹಿತ್ಯಕ್ಕೆ, ಅದೇ ”ಕಾಂತಾರ”ದ ಬ್ರಹ್ಮಕಳಶ ಹಾಡಿನ ಖ್ಯಾತಿಯ ಕೆನಡಾ ಮೂಲದ ಗಾಯಕ ಅಬ್ಬಿ ವಿ ತಮ್ಮ ಕಂಚಿನ ಕಂಠ ಕುಣಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಯೇ ಗಾಯಕ ಅಬ್ಬಿ ವಿ ಎಲ್ಲರೆದುರು ಹಾಡಿದ ಹಾಡಿನ ಕೆಲವು ಸಾಲುಗಳು ಅಲ್ಲಿ ನೆರೆದಿದ್ದವರ ಮೈಮನ ರೋಮಾಂಚನಗೊಳ್ಳುವಂತೆ ಮಾಡಿದ್ದು ಸುಳ್ಳಲ್ಲ.

ಈ ಹಾಡಿಗಾಗಿ ಇಡೀ ತಂಡ ಬರೋಬ್ಬರಿ ಒಂದು ವರ್ಷಗಳ ಕಾಲ ಮಂತ್ರಾಲಯದಲ್ಲಿ ಶ್ರಮಪಟ್ಟಿದೆ. ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಕಾಲ ಸನ್ನಿಹಿತವಾದ ಹಿನ್ನೆಲೆ, ಮಂತ್ರಾಲಯದ ಈಗಿನ ಪೀಠಾಧಿಪತಿಗಳಾದ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದಾಗಿ ಮಠದ ಒಳಗಿನ ನೈಜ ಧಾರ್ಮಿಕ ಆಚರಣೆಗಳನ್ನು ಶೂಟ್ ಮಾಡಲು ಸಾಧ್ಯವಾಗಿದೆ ಎಂದು ನಿರ್ದೇಶಕ ರಘು ಭಟ್ ಹೇಳಿದ್ದಾರೆ. ಜೂನ್ 20ರಂದು ಮಂತ್ರಾಲಯದ ರಾಯರ ಸನ್ನಿಧಿಯಲ್ಲೇ ಈ ಆಲ್ಬಂ ಅದ್ದೂರಿಯಾಗಿ ಲಾಂಚ್ ಆಗಲಿದ್ದು, ಅಂದೇ ಅಜನೀಶ್ ಲೋಕನಾಥ್ ಅವರಿಂದ ಭವ್ಯ ಭಕ್ತಿ ಸಂಗೀತ ಸಂಜೆ ಕೂಡ ನಡೆಯಲಿದೆ. ದಕ್ಷಿಣ ಭಾರತದ ಮೂರು ರಾಜ್ಯಗಳ ಉಪಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಇದೆ ಎಂದು ಕೂಡ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಇನ್ನು ಎಲ್ಲರಿಗೆ ಗೊತ್ತಿರುವಂತೆ ದಕ್ಷಿಣ ಭಾರತದ ಮಾಧ್ಯಮ ರಂಗದ ಸಾಧಕರನ್ನು ಗೌರವಿಸುವ ಪ್ರಖ್ಯಾತ “TNIT ಮೀಡಿಯಾ ಅವಾರ್ಡ್ಸ್ 2026” (TNIT Media Awards 2026) ಪ್ರಶಸ್ತಿ ಕಾರ್ಯಕ್ರಮವನ್ನೂ ಇದೇ ರಘು ಭಟ್ ಮತ್ತು ಸುಗುಣ ದಂಪತಿ ಕಳೆದ 09 ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ. ಈ ಮೂಲಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆದ ಮತ್ತು ಎಲೆಮರೆ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿರುವ ಹಲವರ ಬೆವರಿಗೆ ಸಲ್ಲಬೇಕಾದ ಗೌರವವನ್ನು ನೀಡುತ್ತಾ ಬಂದಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲ, ಅಕ್ಕ-ಪಕ್ಕದ ರಾಜ್ಯದ ಪತ್ರಕರ್ತರನ್ನು ಕಳೆದ ಎರಡ್ಮೂರು ವರ್ಷಗಳಿಂದ TNIT ಮೀಡಿಯಾ ಗುರುತಿಸಿ ಬೆಂಬಲಿಸುತ್ತಾ ಬಂದಿರುವುದು ವಿಶೇಷ.

ಈ ವರ್ಷ ಕೂಡ ಈ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆಯಲಿದ್ದು, ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಟಿವಿ ಮಾಧ್ಯಮದ ಸಾಧಕರ ಜೊತೆಗೆ, ಈ ವರ್ಷದಿಂದ ಮೊದಲ ಬಾರಿಗೆ ಮುದ್ರಣ ಮಾಧ್ಯಮದವರ {ಪ್ರಿಂಟ್ ಮೀಡಿಯಾ} ಸಾಧಕರಿಗೆ ಕೂಡ ಗೌರವ ಸಲ್ಲಿಸಲಾಗುತ್ತಿದೆ. ಈ ಗ್ರ್ಯಾಂಡ್ ಅವಾರ್ಡ್ ಫಂಕ್ಷನ್ ಆಗಸ್ಟ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಅದ್ದೂರಿಯಾಗಿ ಜರುಗಲಿದೆ. ಈ ವಿಷಯವನ್ನು ಕೂಡ ಇದೇ ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಹಿರಿಯ ಪತ್ರಕರ್ತ ಗಣೇಶ್ ಕಾಸರಗೋಡು ಹಾಗೂ ಮಹೇಶ್ ಗೌಡ ಅವರು, ಇಂದಿನ ಕಮರ್ಷಿಯಲ್ ದುನಿಯಾದಲ್ಲಿ ಇಂತಹದೊಂದು ದೈವಿಕ ಪ್ರಯತ್ನಕ್ಕೆ ಕೈಹಾಕಿದ ರಘು ಭಟ್ ದಂಪತಿಯ ಶ್ರಮವನ್ನು ಕೊಂಡಾಡಿದ್ದಾರೆ. ಎರಡು ಕಾರ್ಯಕ್ರಮಗಳು ಯಶಸ್ವಿಯಾಗಲಿ ಎಂದು ಹಾರೈಸಿದ್ದಾರೆ. ಮಂತ್ರಾಲಯ ಮಠದಿಂದ ಬಂದಿದ್ದ ಶ್ರೀನಿಧಿ ಕರಣಂ ಹಾಗೂ ಶ್ರೀಶ ಜೋಯಿಸ್ ಅವರು ಜೂನ್ 20ರಂದು ಮಂತ್ರಾಲಯದ ಪವಿತ್ರ ಕ್ಷೇತ್ರದಲ್ಲಿ ನಡೆಯಲಿರುವ ಈ ದಿವ್ಯ ಗಾನ ಸೌರಭದ ಧಾರ್ಮಿಕ ಉತ್ಸವಕ್ಕೆ ಅಸಂಖ್ಯಾತ, ಅಗಣಿತ ರಾಯರ ಭಕ್ತರಿಗೆ ಮಠದ ಪರವಾಗಿ ಪ್ರೀತಿಯ ಆಹ್ವಾನ ನೀಡಿದ್ದಾರೆ.




