No menu items!
13.5 C
Munich
Sunday, May 24, 2026

ರಸ್ತೆಗೆ ಬಿದ್ದಿದ್ದ ಬೇವಿನ ಮರಕ್ಕೆ ಬೈಕ್ ಡಿಕ್ಕಿ: ಯುವಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

Must read

ರಸ್ತೆಗೆ ಬಿದ್ದಿದ್ದ ಬೇವಿನ ಮರಕ್ಕೆ ಬೈಕ್ ಡಿಕ್ಕಿ: ಯುವಕ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಕೊಪ್ಪಳ: ಜಿಲ್ಲೆಯಲ್ಲಿ ಸುರಿದ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ರಸ್ತೆಗೆ ಉರುಳಿಬಿದ್ದಿದ್ದ ಬೃಹತ್ ಬೇವಿನ ಮರಕ್ಕೆ ಬೈಕ್ ಡಿಕ್ಕಿಯಾದ ಪರಿಣಾಮ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕೊಪ್ಪಳ ತಾಲೂಕಿನ ಕಾಮನೂರ ಗ್ರಾಮದ ಬಳಿ ಭಾನುವಾರ ಬೆಳಗಿನ ಜಾವ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ಯುವಕನನ್ನು ಕಿರಣ್ ಕರಬಡಗಿ (30) ಎಂದು ಗುರುತಿಸಲಾಗಿದೆ. ಬೈಕ್‌ನಲ್ಲಿ ಜೊತೆಯಲ್ಲಿದ್ದ ಮಹೇಶ್ ಎಂಬುವವರಿಗೆ ತೀವ್ರ ಗಾಯಗಳಾಗಿದ್ದು, ಅವರನ್ನು ಕೊಪ್ಪಳ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಭಾನುವಾರ ಬೆಳಿಗ್ಗೆ ಸುಮಾರು 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕಿರಣ್ ಹಾಗೂ ಮಹೇಶ್ ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿಗೆ ಕೆಲಸ ನಿಮಿತ್ತ ತೆರಳುತ್ತಿದ್ದರು. ಕಾಮನೂರಿನಿಂದ ಗಿಣಿಗೇರಿಗೆ ಬೈಕ್‌ನಲ್ಲಿ ತೆರಳಿ, ಅಲ್ಲಿಂದ ಕ್ರಷರ್ ವಾಹನದ ಮೂಲಕ ಕೆಲಸದ ಸ್ಥಳಕ್ಕೆ ಹೋಗುವ ಯೋಜನೆ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.
ಕತ್ತಲೆ ಮತ್ತು ಕಡಿಮೆ ಬೆಳಕು ಅಪಘಾತಕ್ಕೆ ಕಾರಣ
ರಾತ್ರಿ ಸುರಿದ ಭಾರಿ ಗಾಳಿ-ಮಳೆಯಿಂದ ಕಾಮನೂರ ಸಮೀಪ ಬೃಹತ್ ಬೇವಿನ ಮರವೊಂದು ರಸ್ತೆಗೆ ಅಡ್ಡವಾಗಿ ಬಿದ್ದಿತ್ತು. ಬೆಳಗಿನ ಜಾವ ಕತ್ತಲೆ ವಾತಾವರಣ ಹಾಗೂ ಕಡಿಮೆ ಬೆಳಕಿನ ಕಾರಣ ರಸ್ತೆಯಲ್ಲಿದ್ದ ಮರ ಕಾಣಿಸದೆ, ಬೈಕ್ ನೇರವಾಗಿ ಮರಕ್ಕೆ ಡಿಕ್ಕಿಯಾಗಿದೆ.
ಡಿಕ್ಕಿಯ ತೀವ್ರತೆಗೆ ಕಿರಣ್ ತಲೆಗೆ ಗಂಭೀರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಹೇಶ್ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ರಸ್ತೆಗೆ ಬಿದ್ದಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

- Advertisement -spot_img

More articles

- Advertisement -spot_img

Latest article