No menu items!
20.2 C
Munich
Monday, June 1, 2026

ಡ್ರೈವರ್ ಬದಲಾದರೂ ಬಸ್ ಕೆಟ್ಟದ್ದೇ ಇದೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

Must read

ಡ್ರೈವರ್ ಬದಲಾದರೂ ಬಸ್ ಕೆಟ್ಟದ್ದೇ ಇದೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಮುಖ್ಯಮಂತ್ರಿ ಮಾತ್ರ ಬದಲಾಗಿದ್ದಾರೆ, ಆದರೆ ಆಡಳಿತದ ಸಮಸ್ಯೆಗಳು ಹಾಗೆಯೇ ಉಳಿದಿವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಈ ಸರ್ಕಾರದಲ್ಲಿ ಡ್ರೈವರ್ ಮಾತ್ರ ಬದಲಾಗಿದ್ದಾನೆ. ಆದರೆ ಬಸ್ ಮತ್ತು ಎಂಜಿನ್ ಈಗಾಗಲೇ ಹಾಳಾಗಿವೆ. ಡ್ರೈವರ್ ಬದಲಾದರೆ ಮಾತ್ರ ಸಮಸ್ಯೆ ಪರಿಹಾರವಾಗುವುದಿಲ್ಲ. ಕೆಟ್ಟುಹೋದ ವಾಹನ ಸರಿಯಾಗಿ ಓಡಲಾರದು. ಸಿದ್ದರಾಮಯ್ಯ ಅವರು ಸಾಲದ ಮೇಲೆ ಡೀಸೆಲ್ ಹಾಕಿಸಿಕೊಂಡು ಓಡುತ್ತಿರುವ ಬಸ್ಸನ್ನೇ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಿದ್ದಾರೆ” ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದಿರುವ ಸಿದ್ದರಾಮಯ್ಯ ಅವರನ್ನು ಉಲ್ಲೇಖಿಸಿದ ಅಶೋಕ್, “ನಾನು ಅಹಿಂದ ನಾಯಕ, ದೇಶದಲ್ಲೇ ಏಕೈಕ ಅಹಿಂದ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುತ್ತಿದ್ದ ಸಿದ್ದರಾಮಯ್ಯ ಅವರಿಗೆ ತಮ್ಮ ಸ್ಥಾನ ಸುರಕ್ಷಿತವಾಗಿದೆ ಎಂಬ ವಿಶ್ವಾಸ ಇತ್ತು. ಆದರೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರದಿಂದ ಅವರು ಅಧಿಕಾರ ಕಳೆದುಕೊಂಡಿದ್ದಾರೆ” ಎಂದು ಹೇಳಿದರು.
ಇದೇ ವೇಳೆ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, “ಕಾಂಗ್ರೆಸ್ ಪಕ್ಷದಲ್ಲಿ ನಾಯಕರನ್ನು ಮಧ್ಯದಲ್ಲೇ ಬದಲಿಸುವ ಸಂಸ್ಕೃತಿ ಹೊಸದಲ್ಲ. ಹಿಂದೆ ರಾಜೀವ್ ಗಾಂಧಿ ಅವರು ವೀರೇಂದ್ರ ಪಾಟೀಲ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರು. ಹಾಗೆಯೇ ಇಂದಿರಾ ಗಾಂಧಿ ಅವರ ಕಾಲದಲ್ಲೂ ದೇವರಾಜ್ ಅರಸ್ ಮತ್ತು ಎಸ್. ಬಂಗಾರಪ್ಪ ಅವರನ್ನು ಸ್ಥಾನದಿಂದ ತೆಗೆದುಹಾಕಲಾಗಿತ್ತು” ಎಂದು ಆರೋಪಿಸಿದರು.
ಹಿಂದುಳಿದ ವರ್ಗಗಳ ನಾಯಕರಿಗೆ ಕಾಂಗ್ರೆಸ್ ನ್ಯಾಯ ಒದಗಿಸುತ್ತಿಲ್ಲ ಎಂದು ದೂರಿದ ಅಶೋಕ್, “ದೇವರಾಜ್ ಅರಸ್, ಬಂಗಾರಪ್ಪ ಮತ್ತು ಸಿದ್ದರಾಮಯ್ಯ ಎಲ್ಲರೂ ಹಿಂದುಳಿದ ಸಮುದಾಯದ ನಾಯಕರು. ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಗಳ ಪರ ಎಂದು ಹೇಳಿಕೊಳ್ಳುತ್ತದೆಯಾದರೂ, ಅದರ ನಡೆ ಅದಕ್ಕೆ ವಿರುದ್ಧವಾಗಿದೆ” ಎಂದು ಟೀಕಿಸಿದರು.

- Advertisement -spot_img

More articles

- Advertisement -spot_img

Latest article