ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ: kRS ನೀರಿನ ಮಟ್ಟ 100 ಅಡಿಯತ್ತ, 2 ದಿನದಲ್ಲಿ 5 ಅಡಿ ಹೆಚ್ಚಳ
ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಕೃಷ್ಣರಾಜಸಾಗರ (ಕೆಆರ್ಎಸ್) ಜಲಾಶಯಕ್ಕೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ಒಳಹರಿವು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಇದರಿಂದ ಜಲಾಶಯದ ನೀರಿನ ಮಟ್ಟ ವೇಗವಾಗಿ ಏರಿಕೆಯಾಗುತ್ತಿದ್ದು, ಶೀಘ್ರದಲ್ಲೇ 100 ಅಡಿ ತಲುಪುವ ಸಾಧ್ಯತೆ ಕಂಡುಬಂದಿದೆ.
ಕಳೆದ ಎರಡು ದಿನಗಳ ಹಿಂದೆ 92 ಅಡಿಯಷ್ಟಿದ್ದ ಕೆಆರ್ಎಸ್ ಜಲಾಶಯದ ನೀರಿನ ಮಟ್ಟ, ಭಾರೀ ಒಳಹರಿವಿನ ಪರಿಣಾಮ ಇದೀಗ 97 ಅಡಿಗೆ ಏರಿಕೆಯಾಗಿದೆ. ಜಲಾಶಯದಲ್ಲಿ ನೀರಿನ ಸಂಗ್ರಹವೂ ಗಮನಾರ್ಹವಾಗಿ ಹೆಚ್ಚಾಗಿದ್ದು, ಮೊನ್ನೆ 17 ಟಿಎಂಸಿಯಷ್ಟಿದ್ದ ಸಂಗ್ರಹ ಇದೀಗ 20.477 ಟಿಎಂಸಿಗೆ ತಲುಪಿದೆ.
ಕಾವೇರಿ ಕಣಿವೆಯಲ್ಲಿ ಇದೇ ರೀತಿಯ ಮಳೆ ಮುಂದುವರಿದರೆ, ಇನ್ನೂ ಕೆಲವೇ ದಿನಗಳಲ್ಲಿ ಕೆಆರ್ಎಸ್ ಜಲಾಶಯ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆ ಇದೆ. ಮತ್ತೊಂದೆಡೆ, ಕಬಿನಿ ಜಲಾಶಯ ಈಗಾಗಲೇ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಪರಿಣಾಮವಾಗಿ ತಮಿಳುನಾಡಿನತ್ತ ಸಹಜವಾಗಿಯೇ ನೀರು ಹರಿದು ಹೋಗುತ್ತಿದೆ.
ಜಲಾಶಯಗಳಿಗೆ ನಿರಂತರವಾಗಿ ನೀರು ಹರಿದು ಬರುತ್ತಿರುವ ಬೆಳವಣಿಗೆಯಿಂದ ಕಾವೇರಿ ನೀರಿನ ಹಂಚಿಕೆ ಕುರಿತ ಚರ್ಚೆಗಳಿಗೆ ಸದ್ಯ ತಾತ್ಕಾಲಿಕ ವಿರಾಮ ದೊರೆತಂತಾಗಿದೆ. ಜೊತೆಗೆ, ಜಲಾಶಯಗಳು ಭರ್ತಿಯಾಗುತ್ತಿರುವುದು ರೈತರು ಹಾಗೂ ಜಲಾನಯನ ಪ್ರದೇಶದ ಜನರಲ್ಲಿ ಸಂತಸ ಮೂಡಿಸಿದೆ.



