No menu items!
24.1 C
Munich
Thursday, June 4, 2026

ನೀಟ್ ಪೇಪರ್ ಲೀಕ್‌ಗೆ ಬಲಿಯಾಯ್ತು ಮತ್ತೊಂದು ಬಡಜೀವ ;ಮತ್ತೆ ಪರೀಕ್ಷೆ ಬರೆಯೋ ಧೈರ್ಯ ನನಗಿಲ್ಲಪ್ಪ- 18ರ ಯುವತಿ ಆತ್ಮ*ಹತ್ಯೆ!

Must read

ನಾಗ್ಪುರ: ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಪರೀಕ್ಷಾ ಮಂಡಳಿಗಳ ಭೀಕರ ಬೇಜವಾಬ್ದಾರಿತನಕ್ಕೆ ಬಡ ಕುಟುಂಬದ ಮತ್ತೊಂದು ಜೀವ ಬಲಿಯಾಗಿದೆ. ವೈದ್ಯೆಯಾಗಿ ಸಮಾಜದ ಸೇವೆ ಮಾಡಬೇಕು, ಬಡತನದ ಬೇಗೆಯಿಂದ ತನ್ನ ಹೆತ್ತವರನ್ನು ಮೇಲೆತ್ತಬೇಕು ಎಂಬ ಕೋಟಿ ಕನಸು ಹೊತ್ತಿದ್ದ 18 ವರ್ಷದ ನೀಟ್ (NEET) ಆಕಾಂಕ್ಷಿ, ಆಕಾಂಕ್ಷಾ ಚತುರ್ವೇದಿ ಬದುಕು ಇದೀಗ ದುರಂತ ಅಂತ್ಯ ಕಂಡಿದೆ. ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷೆ ರದ್ದತಿಯಿಂದ ತೀವ್ರ ಖಿನ್ನತೆಗೆ ಒಳಗಾಗಿದ್ದ ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಈ ವಿದ್ಯಾರ್ಥಿನಿ ನಾಗ್ಪುರದ ತನ್ನ ಕೋಣೆಯ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಮಗಾನಿಯಾ ಎಂಬ ಪುಟ್ಟ ಗ್ರಾಮದ ಆಕಾಂಕ್ಷಾ, ನಾಗ್ಪುರದ ಖಾಸಗಿ ಕೋಚಿಂಗ್ ಸೆಂಟರ್‌ವೊಂದರಲ್ಲಿ ನೀಟ್-ಯುಜಿ (NEET-UG) ಪರೀಕ್ಷೆಗಾಗಿ ದಿನರಾತ್ರಿ ಎನ್ನದೆ ಕಠಿಣ ತರಬೇತಿ ಪಡೆಯುತ್ತಿದ್ದಳು. ಕಳೆದ ಮೇ 3ರಂದು ನಡೆದಿದ್ದ ಪರೀಕ್ಷೆಯನ್ನು ಆಕೆ ಅತ್ಯಂತ ಭಾರಿ ಆತ್ಮವಿಶ್ವಾಸದಿಂದ ಬರೆದು ಮುಗಿಸಿದ್ದಳು. ಪರೀಕ್ಷೆ ಮುಗಿದ ನಂತರ ತನಗೆ 650ಕ್ಕೂ ಹೆಚ್ಚು ಅಂಕಗಳು ಬರುವುದು ಗ್ಯಾರಂಟಿ ಎಂದು ಹೆತ್ತವರ ಬಳಿ ಖುಷಿಯಿಂದ ಹೇಳಿಕೊಂಡಿದ್ದಳು. ಈ ಬಾರಿ ಮಗಳು ಪಕ್ಕಾ ಮೆಡಿಕಲ್ ಸೀಟ್ ಗಿಟ್ಟಿಸಿಕೊಳ್ಳುತ್ತಾಳೆ, ನಮ್ಮ ಕಷ್ಟಗಳೆಲ್ಲ ತೀರುತ್ತವೆ ಎಂದು ಇಡೀ ಕುಟುಂಬವೇ ಆಕಾಶದಷ್ಟು ಆಶಾಭಾವನೆ ಹೊಂದಿತ್ತು. ಆದರೆ ವಿಧಿಯಾಟವೇ ಬೇರೆಯಾಗಿತ್ತು.

ಆಕಾಂಕ್ಷಾಳ ಕುಟುಂಬದ ಆರ್ಥಿಕ ಪರಿಸ್ಥಿತಿ ತೀರಾ ಕಡು ಬಡತನದಿಂದ ಕೂಡಿತ್ತು. ಆಕೆಯ ತಂದೆ ಕೃಷ್ಣ ಕುಮಾರ್ ಚತುರ್ವೇದಿ ಮೂಲತಃ ಓರ್ವ ಸಣ್ಣ ರೈತ. ಹಳ್ಳಿಯಲ್ಲಿರುವ ಸಣ್ಣ ತುಂಡು ಭೂಮಿಯಲ್ಲಿ ಬೇಸಾಯ ಮಾಡುತ್ತಿದ್ದ ಅವರು, ಮಗಳ ವೈದ್ಯೆಯಾಗುವ ಕನಸಿಗೆ ಆರ್ಥಿಕ ಹೊರೆ ಅಡ್ಡಿಯಾಗಬಾರದು ಎಂದು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬರೋಬ್ಬರಿ 3 ಲಕ್ಷ ರೂಪಾಯಿ ಸಾಲ ಮಾಡಿದ್ದರು.

ಅಷ್ಟೇ ಅಲ್ಲದೆ, ಮಗಳ ದುಬಾರಿ ಕೋಚಿಂಗ್ ಫೀಸ್ ಹಾಗೂ ನಾಗ್ಪುರದ ಮನೆ ಖರ್ಚನ್ನು ನಿಭಾಯಿಸಲು ತಾವೇ ಸ್ವತಃ ನಾಗ್ಪುರಕ್ಕೆ ಬಂದು ಅಡುಗೆಯವರಾಗಿಯೂ ಕೆಲಸ ಮಾಡುತ್ತಿದ್ದರು. ಇಷ್ಟೆಲ್ಲಾ ಕಷ್ಟಪಟ್ಟು ಮಗಳನ್ನು ಓದಿಸುತ್ತಿದ್ದ ಹೆತ್ತವರಿಗೆ ಸಿಕ್ಕಿದ್ದು ಮಾತ್ರ ಮಗಳ ಹೆಣ ಎನ್ನುವುದು ನಮ್ಮ ದೇಶದ ದುರಂತ.

ಮೇ 3ರಂದು ಪರೀಕ್ಷೆ ಮುಗಿದ ಕೆಲವೇ ದಿನಗಳಲ್ಲಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಭೀಕರ ಸತ್ಯ ಹೊರಬಿದ್ದಾಗ ಆಕಾಂಕ್ಷಾಳ ಕಾಲ ಕೆಳಗಿನ ಭೂಮಿ ಕುಸಿದಂತಾಗಿತ್ತು. ಈ ಅಕ್ರಮದ ಬೆನ್ನಲ್ಲೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮೇ 12ರಂದು ಇಡೀ ಪರೀಕ್ಷೆಯನ್ನೇ ಕಂಪ್ಲೀಟ್ ಆಗಿ ರದ್ದುಗೊಳಿಸಿ, ಜೂನ್ 21ಕ್ಕೆ ಮರು ಪರೀಕ್ಷೆ ನಡೆಸುವುದಾಗಿ ಘೋಷಣೆ ಮಾಡಿತು. ಈ ಹಠಾತ್ ಬೆಳವಣಿಗೆ, ಮರುಪರೀಕ್ಷೆಯ ತೀವ್ರ ಮಾನಸಿಕ ಒತ್ತಡ ಮತ್ತು ಮತ್ತೆ ನಾನು ಅಷ್ಟೇ ಅಂಕಗಳನ್ನು ಪಡೆಯಲು ಸಾಧ್ಯವೇ? ಎಂಬ ಭವಿಷ್ಯದ ಅನಿಶ್ಚಿತತೆ ಆಕಾಂಕ್ಷಾಳನ್ನು ಜೀವಂತವಾಗಿ ನರಕಕ್ಕೆ ತಳ್ಳಿತು. ಈ ಭೀಕರ ಖಿನ್ನತೆಯಿಂದಾಗಿ ಆಕೆ ಮೇ 20 ರಂದು ತನ್ನ ಕೋಣೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಳು.

ದುರಂತ ನಡೆದ ಕೆಲ ದಿನಗಳ ಬಳಿಕ ಪೊಲೀಸರಿಗೆ ಆಕೆ ಬರೆದಿದ್ದ ಕಣ್ಣೀರಿನ ಡೆತ್ ನೋಟ್ ಸಿಕ್ಕಿದ್ದು, ಅದರಲ್ಲಿರುವ ಸಾಲುಗಳು ಕಲ್ಲು ಹೃದಯವನ್ನೂ ಕರಗಿಸುವಂತಿವೆ. ಕ್ಷಮಿಸಿ ಅಮ್ಮ ಮತ್ತು ಅಪ್ಪಾ… ನೀವು ನನ್ನ ಮೇಲೆ ಇಟ್ಟಿದ್ದ ನಿರೀಕ್ಷೆಗಳನ್ನು ನಾನು ಪೂರೈಸಲು ಸಾಧ್ಯವಾಗುತ್ತಿಲ್ಲ. ಮತ್ತೆ ನೀಟ್ ಪರೀಕ್ಷೆ ಬರೆಯುವ ಕನಿಷ್ಠ ಧೈರ್ಯ ಕೂಡ ನನಗಿಲ್ಲ. ನನ್ನ ಮೊದಲ ಪ್ರಯತ್ನದಲ್ಲೇ ನನಗೆ ಉತ್ತಮ ಅಂಕಗಳು ಬರುತ್ತಿದ್ದವು. ಆದರೆ ಈಗ, ನಾನು ಮತ್ತೆ ಅದೇ ರೀತಿ ಉತ್ತಮ ಸಾಧನೆ ಮಾಡುತ್ತೇನೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ನಾನು ನಿಮ್ಮಿಬ್ಬರ ಬದುಕನ್ನೂ ಹಾಳು ಮಾಡಿದ್ದೇನೆ ಎಂದು ತನ್ನ ಕೊನೆಯ ಪತ್ರದಲ್ಲಿ ನೋವನ್ನು ತೋಡಿಕೊಂಡಿದ್ದಾಳೆ.

ಆಕಾಂಕ್ಷಾಳ ಚಿಕ್ಕಪ್ಪ ಜಗದೀಶ್ ಪ್ರಸಾದ್ ಚತುರ್ವೇದಿ ಹೇಳುವಂತೆ, ಪ್ರಶ್ನೆಪತ್ರಿಕೆ ಸೋರಿಕೆಯ ವರದಿಗಳು ಮತ್ತು ಪರೀಕ್ಷೆ ರದ್ದತಿಯ ಸುದ್ದಿ ಬರಲು ಪ್ರಾರಂಭಿಸಿದಾಗ ಆಕೆ ತೀವ್ರ ಆಘಾತಕ್ಕೊಳಗಾಗಿದ್ದಳು. ಸರಿಯಾಗಿ ಊಟ ಮಾಡುವುದನ್ನು ಬಿಟ್ಟಿದ್ದಳು, ಯಾರ ಜೊತೆಯೂ ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ಮತ್ತು ಸದಾ ಒಂದು ರೀತಿಯ ಭೀಕರ ಆತಂಕದಲ್ಲೇ ಮುಳುಗಿರುತ್ತಿದ್ದಳು. ವಿಷಯ ಈ ಮಟ್ಟಕ್ಕೆ ಹೋಗಿ ನಮ್ಮ ಮನೆ ಮಗಳು ಹೆಣವಾಗುತ್ತಾಳೆ ಎಂದು ನಾವು ಕನಸಿನಲ್ಲೂ ಊಹಿಸಿರಲಿಲ್ಲ ಎಂದು ಕಣ್ಣೀರಿಟ್ಟಿದ್ದಾರೆ. ಪರೀಕ್ಷಾ ಮಂಡಳಿಗಳ ಭ್ರಷ್ಟಾಚಾರಕ್ಕೆ ಒಬ್ಬ ಪ್ರತಿಭಾವಂತ ವಿದ್ಯಾರ್ಥಿನಿ ಬಲಿಯಾಗುವಂತಾಯಿತು.

ಅಸಲಿಗೆ ಈ ಒಟ್ಟು ದುರಂತಕ್ಕೆ ಕಾರಣ ಮೇ 3 ರಂದು ನಡೆದ ನೀಟ್ ಯುಜಿ ಪರೀಕ್ಷೆಯ ಸುತ್ತ ನಡೆದಿರುವ ಭೀಕರ ಅಕ್ರಮದ ಜಾಲ. ಪರೀಕ್ಷೆ ಮುಗಿದ ತಕ್ಷಣವೇ ದೇಶಾದ್ಯಂತ ಪೇಪರ್ ಲೀಕ್ ದಂಧೆಯ ದಟ್ಟ ಅನುಮಾನಗಳು ವ್ಯಕ್ತವಾಗಿದ್ದವು. ಕೆಲವು ಕೇಂದ್ರಗಳಲ್ಲಿ ಭಾರಿ ಅಕ್ರಮ ನಡೆದಿರುವ ಮಾಹಿತಿ ದೊರೆತ ನಂತರ, ಇಡೀ ಪ್ರಕರಣವನ್ನು ಸಿಬಿಐ (CBI) ತನಿಖೆಗೆ ಹಸ್ತಾಂತರಿಸಲಾಗಿದ್ದು, ತನಿಖಾ ಸಂಸ್ಥೆ ಇದುವರೆಗೆ ಈ ದಂಧೆಗೆ ಸಂಬಂಧಿಸಿದಂತೆ 13 ಮಂದಿ ಖದೀಮರನ್ನು ಅರೆಸ್ಟ್ ಮಾಡಿದೆ. ಆದರೆ ಇಡೀ ಶಿಕ್ಷಣ ವ್ಯವಸ್ಥೆಯ ಈ ಕೆಟ್ಟ ವೈಫಲ್ಯಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಲೇ ಇದ್ದಾರೆ.

- Advertisement -spot_img

More articles

- Advertisement -spot_img

Latest article