ತ್ರಿಷಾ ಕುರಿತು ವಿವಾದಾತ್ಮಕ ಹೇಳಿಕೆ ಪ್ರಕರಣ: ಉದಯನಿಧಿ ಸ್ಟಾಲಿನ್ʼಗೆ ಮದ್ರಾಸ್ ಹೈಕೋರ್ಟ್ನಿಂದ ಮಧ್ಯಂತರ ರಿಲೀಫ್
ಚೆನ್ನೈ: ತಮಿಳುನಾಡಿನ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಮದ್ರಾಸ್ ಹೈಕೋರ್ಟ್ ಮಹತ್ವದ ಮಧ್ಯಂತರ ಆದೇಶ ನೀಡಿದೆ. ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿದ ಬಳಿಕ ಮಂಗಳವಾರವೇ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡುವಂತೆ ನ್ಯಾಯಾಲಯ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ.
ಮದ್ರಾಸ್ ಹೈಕೋರ್ಟ್ನಲ್ಲಿ ನಡೆದ ವಿಚಾರಣೆ ವೇಳೆ ತಮಿಳುನಾಡು ಸರ್ಕಾರದ ಪರ ಹಾಜರಾದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್, ತಂಜಾವೂರು ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಿದ್ದಾರೆ. ಆದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಉದ್ದೇಶ ಸರ್ಕಾರಕ್ಕಿಲ್ಲ. ವಿಚಾರಣೆ ಪೂರ್ಣಗೊಂಡ ಬಳಿಕ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗುತ್ತದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ರಾಜ್ಯ ಸರ್ಕಾರದ ಈ ಭರವಸೆಯನ್ನು ದಾಖಲಿಸಿಕೊಂಡ ಹೈಕೋರ್ಟ್, ಬಂಧನದ ನಂತರವೇ ಸ್ಟೇಷನ್ ಬೇಲ್ ನೀಡುವಂತೆ ಪೊಲೀಸರಿಗೆ ಸೂಚನೆ ನೀಡಿತು.
ಏನಿದು ವಿವಾದ?
ತಂಜಾವೂರಿನಲ್ಲಿ ಕಾವೇರಿ ನೀರಿನ ಹಂಚಿಕೆ ವಿಚಾರವಾಗಿ ನಡೆದ ಡಿಎಂಕೆ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಮುಖ್ಯಮಂತ್ರಿ ವಿಜಯ್ ಅವರನ್ನು ಟೀಕಿಸುತ್ತಾ, ಕಾವೇರಿ ಸಮಸ್ಯೆಯ ಬಗ್ಗೆ ಸರ್ಕಾರ ಮೌನವಾಗಿದೆ ಎಂದು ಆರೋಪಿಸಿದ್ದರು.
ಈ ವೇಳೆ ಸಭೆಯಲ್ಲಿ ಇದ್ದ ಕೆಲವರು ನಟಿ ತ್ರಿಷಾ ಅವರ ಹೆಸರನ್ನು ಕೂಗಿದ್ದು, ಅದಕ್ಕೆ ಪ್ರತಿಕ್ರಿಯಿಸಿದ ಉದಯನಿಧಿ ಸ್ಟಾಲಿನ್ ತಮಿಳಿನಲ್ಲಿ ದ್ವಂದ್ವಾರ್ಥದ ಅರ್ಥ ಬರಬಹುದಾದ ಹೇಳಿಕೆ ನೀಡಿದ್ದರು ಎನ್ನಲಾಗಿದೆ. ಈ ಹೇಳಿಕೆ ನಟಿ ತ್ರಿಷಾ ಅವರನ್ನು ಪರೋಕ್ಷವಾಗಿ ಉದ್ದೇಶಿಸಿದ್ದು, ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿದೆ ಎಂದು ಆರೋಪಿಸಿ ಹಲವು ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು.
ಈ ಸಂಬಂಧ ಉದಯನಿಧಿ ಸ್ಟಾಲಿನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರ ಕಾನೂನು ಪ್ರಕ್ರಿಯೆ ಮುಂದುವರಿದಿದೆ. ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



