No menu items!
26.9 C
Munich
Monday, June 8, 2026

ಪೋಕ್ಸೋ ಪ್ರಕರಣ: ಬಿಎಸ್ ಯಡಿಯೂರಪ್ಪಗೆ ಹೈಕೋರ್ಟ್ ರಿಲೀಫ್

Must read

ಪೋಕ್ಸೋ ಪ್ರಕರಣ: ಬಿಎಸ್ ಯಡಿಯೂರಪ್ಪಗೆ ಹೈಕೋರ್ಟ್ ರಿಲೀಫ್

ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಮಹತ್ವದ ರಿಲೀಫ್ ನೀಡಿದೆ. ಜಾಮೀನು ಮಂಜೂರು ಮಾಡುವ ವೇಳೆ ವಿಧಿಸಲಾಗಿದ್ದ ‘ನ್ಯಾಯಾಲಯದ ಅನುಮತಿ ಇಲ್ಲದೆ ವ್ಯಾಪ್ತಿ ಬಿಟ್ಟು ತೆರಳಬಾರದು’ ಎಂಬ ಷರತ್ತನ್ನು ಹೈಕೋರ್ಟ್ ಸಡಿಲಗೊಳಿಸಿ ಆದೇಶ ಹೊರಡಿಸಿದೆ.
ಈ ಆದೇಶದೊಂದಿಗೆ ಯಡಿಯೂರಪ್ಪ ಅವರು ಯಾವುದೇ ಮುಂಚಿತ ಅನುಮತಿ ಪಡೆಯದೇ ದೇಶದ ವಿವಿಧ ಭಾಗಗಳಿಗೆ ಪ್ರವಾಸ ಕೈಗೊಳ್ಳಲು ಅವಕಾಶ ದೊರೆತಿದೆ. ಜಾಮೀನು ಷರತ್ತಿನಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರಿ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಪ್ರಕರಣದ ಸನ್ನಿವೇಶಗಳನ್ನು ಪರಿಗಣಿಸಿ ಜಾಮೀನು ಷರತ್ತನ್ನು ಸಡಿಲಿಸಲು ಒಪ್ಪಿಗೆ ಸೂಚಿಸಿದೆ. ಇದರೊಂದಿಗೆ ಕೋರ್ಟ್ ವ್ಯಾಪ್ತಿ ಬಿಟ್ಟು ತೆರಳುವ ಕುರಿತ ನಿರ್ಬಂಧದಿಂದ ಯಡಿಯೂರಪ್ಪ ಅವರು ಮುಕ್ತರಾಗಿದ್ದಾರೆ.
ಪ್ರಕರಣದ ವಿವರಗಳ ಪ್ರಕಾರ, 2024ರ ಫೆಬ್ರವರಿ 2ರಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಬಾಲಕಿಯ ತಾಯಿ ಮಾರ್ಚ್ 14, 2024ರಂದು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹಳೆಯ ಲೈಂಗಿಕ ದೌರ್ಜನ್ಯ ಪ್ರಕರಣವೊಂದಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಲು ತಾಯಿ ಮತ್ತು ಮಗಳು ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದ ವೇಳೆ ಈ ಘಟನೆ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರು ದಾಖಲಾದ ಬಳಿಕ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು. ತನಿಖೆ ಪೂರ್ಣಗೊಳಿಸಿದ ಸಿಐಡಿ, ಯಡಿಯೂರಪ್ಪ ಸೇರಿದಂತೆ ನಾಲ್ವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದೆ. ಈ ನಡುವೆ ಯಡಿಯೂರಪ್ಪ ಅವರಿಗೆ ಈಗಾಗಲೇ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು.
ಇದೀಗ ಜಾಮೀನು ಷರತ್ತಿನಲ್ಲಿದ್ದ ಪ್ರಯಾಣ ನಿರ್ಬಂಧವನ್ನು ಸಡಿಲಗೊಳಿಸಿರುವ ಹೈಕೋರ್ಟ್ ಆದೇಶವು ಪ್ರಕರಣದ ಬೆಳವಣಿಗೆಗಳಲ್ಲಿ ಮತ್ತೊಂದು ಮಹತ್ವದ ಹಂತವೆಂದು ಪರಿಗಣಿಸಲಾಗಿದೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಮುಂದುವರಿದಿದೆ.

- Advertisement -spot_img

More articles

- Advertisement -spot_img

Latest article