ಉಪಸಭಾಪತಿ ಎಂಕೆ ಪ್ರಾಣೇಶ್ʼಗೆ ಸುಪ್ರೀಂನಲ್ಲಿ ಭಾರೀ ಹಿನ್ನಡೆ: ವಿಧಾನ ಪರಿಷತ್ ಸದಸ್ಯತ್ವ ರದ್ದು
ನವದೆಹಲಿ: ಕರ್ನಾಟಕ ವಿಧಾನ ಪರಿಷತ್ ಉಪಸಭಾಪತಿ ಹಾಗೂ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಸದಸ್ಯ ಎಂಕೆ ಪ್ರಾಣೇಶ್ ಅವರಿಗೆ ಸುಪ್ರೀಂಕೋರ್ಟ್ನಲ್ಲಿ ಭಾರೀ ಹಿನ್ನಡೆಯಾಗಿದೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಅವರು ಆಯ್ಕೆಯಾಗಿದ್ದ ವಿಧಾನ ಪರಿಷತ್ ಸದಸ್ಯತ್ವವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಈ ಮೂಲಕ ಪ್ರಾಣೇಶ್ ಸಲ್ಲಿಸಿದ್ದ ಮೇಲ್ಮನವಿಯನ್ನು ತಿರಸ್ಕರಿಸಿ, ಕರ್ನಾಟಕ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
ಪ್ರಕರಣದ ಮೂಲದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ನಾಮನಿರ್ದೇಶಿತ ಸದಸ್ಯರ ಮತದಾನದ ಹಕ್ಕಿನ ಪ್ರಶ್ನೆ ಇತ್ತು. ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ನಡೆಯುವ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಈ ಹಿಂದೆ ಮಹತ್ವದ ತೀರ್ಪು ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಎಂಕೆ ಪ್ರಾಣೇಶ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ಇದೀಗ ಸುಪ್ರೀಂಕೋರ್ಟ್ ಅವರ ಅರ್ಜಿಯನ್ನು ವಜಾಗೊಳಿಸುವ ಮೂಲಕ ಹೈಕೋರ್ಟ್ ತೀರ್ಪನ್ನು ಯಥಾಸ್ಥಿತಿಯಲ್ಲಿ ಉಳಿಸಿದೆ.
2021ರ ಡಿಸೆಂಬರ್ನಲ್ಲಿ ನಡೆದ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯಲ್ಲಿ ಒಟ್ಟು 2,410 ಮತಗಳು ಚಲಾವಣೆಯಾಗಿದ್ದು, ಅವುಗಳಲ್ಲಿ 39 ಮತಗಳು ಅಸಿಂಧುವಾಗಿದ್ದವು. ಪ್ರಾಣೇಶ್ 1,188 ಮತಗಳನ್ನು ಪಡೆದಿದ್ದರೆ, ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದಿದ್ದರು. ಕೇವಲ ಆರು ಮತಗಳ ಅಂತರದಲ್ಲಿ ಪ್ರಾಣೇಶ್ ಜಯಗಳಿಸಿದ್ದರು.
ಆದರೆ, ಶೃಂಗೇರಿ, ಕೊಪ್ಪ, ಎನ್.ಆರ್.ಪುರ ಹಾಗೂ ಮೂಡಿಗೆರೆ ಪಟ್ಟಣ ಪಂಚಾಯಿತಿಗಳ 12 ನಾಮನಿರ್ದೇಶಿತ ಸದಸ್ಯರು ಚುನಾವಣೆಯಲ್ಲಿ ಮತಚಲಾಯಿಸಿದ್ದನ್ನು ಪ್ರಶ್ನಿಸಿ ಗಾಯತ್ರಿ ಶಾಂತೇಗೌಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕಿಲ್ಲ ಎಂದು ಹೈಕೋರ್ಟ್ ತೀರ್ಪು ನೀಡಿದ್ದಲ್ಲದೆ, ಆ ಮತಗಳನ್ನು ಹೊರತುಪಡಿಸಿ ಮರು ಮತಎಣಿಕೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿತ್ತು.
ಈ ಆದೇಶವನ್ನು ಪ್ರಶ್ನಿಸಿ ಪ್ರಾಣೇಶ್ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ವೇಳೆ ಚುನಾವಣಾ ಆಯೋಗದಿಂದ ಮರು ಮತಎಣಿಕೆ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸುಪ್ರೀಂಕೋರ್ಟ್ ಸೂಚಿಸಿತ್ತು. ಇದೀಗ ಅಂತಿಮ ತೀರ್ಪು ಪ್ರಕಟಿಸಿರುವ ಸುಪ್ರೀಂಕೋರ್ಟ್, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದು ಪ್ರಾಣೇಶ್ ಅವರ ಅರ್ಜಿಯನ್ನು ವಜಾಗೊಳಿಸಿದೆ. ಇದರೊಂದಿಗೆ ಅವರ ವಿಧಾನ ಪರಿಷತ್ ಸದಸ್ಯತ್ವ ರದ್ದಾಗಿದ್ದು, ಗಾಯತ್ರಿ ಶಾಂತೇಗೌಡ ಅವರಿಗೆ ಕಾನೂನಾತ್ಮಕ ಮೇಲುಗೈ ದೊರೆತಿದೆ.



