ಮತದಾರರ ಪಟ್ಟಿ ಪರಿಷ್ಕರಣೆಗೆ ಹೊಸ ವೇಳಾಪಟ್ಟಿ; ಅರ್ಜಿ ಸಲ್ಲಿಕೆ ಅವಧಿ ಆಗಸ್ಟ್ 8ರವರೆಗೆ ವಿಸ್ತರಣೆ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಗೆ ಸಂಬಂಧಿಸಿ ಕೇಂದ್ರ ಚುನಾವಣಾ ಆಯೋಗ ಹೊಸ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸಿ ಅರ್ಜಿಗಳನ್ನು ಸ್ವೀಕರಿಸುವ ಅವಧಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಜುಲೈ 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದ್ದರೆ, ಪರಿಷ್ಕೃತ ವೇಳಾಪಟ್ಟಿಯಂತೆ ಈಗ ಮತದಾರರು ಆಗಸ್ಟ್ 8ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.
ಹೊಸ ವೇಳಾಪಟ್ಟಿಯ ಪ್ರಕಾರ, ಆಗಸ್ಟ್ 17ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಗಸ್ಟ್ 17ರಿಂದ ಸೆಪ್ಟೆಂಬರ್ 16ರವರೆಗೆ ಆಕ್ಷೇಪಣೆಗಳು ಮತ್ತು ಹಕ್ಕು-ದಾವೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದರ ನಂತರ ಆಗಸ್ಟ್ 17ರಿಂದ ಅಕ್ಟೋಬರ್ 15ರವರೆಗೆ ಅಗತ್ಯ ದಾಖಲೆ ಸಲ್ಲಿಸದ ಮತದಾರರಿಗೆ ನೋಟಿಸ್ ನೀಡುವುದು ಹಾಗೂ ಬಂದಿರುವ ಆಕ್ಷೇಪಣೆಗಳ ವಿಲೇವಾರಿ ಪ್ರಕ್ರಿಯೆ ನಡೆಯಲಿದೆ. ಅಂತಿಮವಾಗಿ ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಈ ಹಿಂದೆ ಪ್ರಕಟಿಸಿದ್ದ ವೇಳಾಪಟ್ಟಿಯಲ್ಲಿ ಕರಡು ಪಟ್ಟಿ ಆಗಸ್ಟ್ 5ರಂದು, ಆಕ್ಷೇಪಣೆ ಸಲ್ಲಿಕೆಗೆ ಸೆಪ್ಟೆಂಬರ್ 4ರವರೆಗೆ ಅವಕಾಶ ಹಾಗೂ ಅಕ್ಟೋಬರ್ 7ರಂದು ಅಂತಿಮ ಪಟ್ಟಿ ಪ್ರಕಟಿಸುವುದಾಗಿ ತಿಳಿಸಲಾಗಿತ್ತು. ಇದೀಗ ಆಯೋಗ ಈ ದಿನಾಂಕಗಳಲ್ಲಿ ಬದಲಾವಣೆ ಮಾಡಿದೆ.
ಇನ್ನೊಂದೆಡೆ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿ, ರಾಜ್ಯದಲ್ಲಿ ಇದುವರೆಗೆ 5.28 ಕೋಟಿ ಗಣತಿ ನಮೂನೆಗಳನ್ನು ವಿತರಿಸಲಾಗಿದ್ದು, ಶೇ.95ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಭರ್ತಿ ಮಾಡಿದ ಅರ್ಜಿಗಳ ಡಿಜಿಟಲೀಕರಣ ಕಾರ್ಯವೂ ವೇಗವಾಗಿ ನಡೆಯುತ್ತಿದ್ದು, ಶೇ.40ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ. 13 ಜಿಲ್ಲೆಗಳಲ್ಲಿ ಶೇ.100 ಹಾಗೂ ಉಳಿದ ಜಿಲ್ಲೆಗಳಲ್ಲಿ ಶೇ.99ರಷ್ಟು ನಮೂನೆ ವಿತರಣೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಂಪೂರ್ಣ ಗುರಿ ತಲುಪುವ ನಿರೀಕ್ಷೆಯಿದೆ ಎಂದರು.
ವಿಳಾಸ ಬದಲಾವಣೆ, ಮತದಾರರ ಮರಣ, ಸಹಿ ಮಾಡಲು ನಿರಾಕರಣೆ ಸೇರಿದಂತೆ ವಿವಿಧ ಕಾರಣಗಳಿಂದ 13.14 ಲಕ್ಷ ಮತದಾರರಿಗೆ ಅರ್ಜಿ ವಿತರಿಸಲು ಸಾಧ್ಯವಾಗಿಲ್ಲ ಎಂಬ ಮಾಹಿತಿಯನ್ನೂ ಅವರು ನೀಡಿದರು.
ಇದಲ್ಲದೆ, 2002ರ ಎಸ್ಐಆರ್ ಪಟ್ಟಿಯಲ್ಲಿ ಹೆಸರು ಹುಡುಕುವುದು, ಕ್ಷೇತ್ರ ಬದಲಾವಣೆಗೆ ಸಂಬಂಧಿಸಿದ ಮಾಹಿತಿ, ಬಿಎಲ್ಒಗಳನ್ನು ಸಂಪರ್ಕಿಸುವ ವಿಧಾನ ಸೇರಿದಂತೆ ಮತದಾರರ ಅನುಮಾನಗಳನ್ನು ನಿವಾರಿಸಲು ಪ್ರತಿ ಶನಿವಾರ ಮತ್ತು ಭಾನುವಾರ ವಿಶೇಷ ಶಿಬಿರಗಳನ್ನು ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.



