No menu items!
16.8 C
Munich
Thursday, July 23, 2026

ಹುಷಾರ್..! ನೀವು ದಿನಾ ತಿನ್ನೋ ತಿಂಡಿ ಎಣ್ಣೆಯಲ್ಲೇ ಇದೆ ಅಪಾಯಕಾರಿ ಅಂಶ, ಬೆಂಗಳೂರಿನ 40ಕ್ಕೂ ಹೆಚ್ಚು ಹೋಟೆಲ್‌ಗಳಲ್ಲಿ ಭೀಕರ ಜಾಲ ಪತ್ತೆ!

Must read

ವಾರಾಂತ್ಯ ಬಂತು ಅಂದರೆ ಸಾಕು, ಹೋಟೆಲ್‌, ರೆಸ್ಟೋರೆಂಟ್‌, ಪಬ್‌, ಬಾರ್‌ ಅಥವಾ ರಸ್ತೆಬದಿಯ ಫಾಸ್ಟ್ ಫುಡ್ ಅಂಗಡಿಗಳಿಗೆ ಮುಗಿಬಿದ್ದು ಕರಿದ ತಿಂಡಿಗಳನ್ನು ತಿನ್ನುವುದು ನಮಗೆ ರೂಢಿಯಾಗಿಬಿಟ್ಟಿದೆ. ಆದರೆ, ಆ ಗರಿಗರಿಯಾದ ಸಮೋಸಾ, ಬಜ್ಜಿಯ ಹಿಂದೆ ಎಷ್ಟು ದೊಡ್ಡ ಅಪಾಯ ಅಡಗಿದೆ ಗೊತ್ತಾ? ಇತ್ತೀಚೆಗೆ ಆಹಾರ ಸುರಕ್ಷತಾ ಇಲಾಖೆ (FSSAI) ಬೆಂಗಳೂರಿನಾದ್ಯಂತ ದಿಢೀರ್ ದಾಳಿ ನಡೆಸಿ ಪರೀಕ್ಷೆ ಮಾಡಿದಾಗ ಸಿಕ್ಕಿದ ರಿಪೋರ್ಟ್ ನೋಡಿ ಸ್ವತಃ ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಬೆಂಗಳೂರಿನ ವಿವಿಧ ಹೋಟೆಲ್‌ಗಳು ಮತ್ತು ರಸ್ತೆಬದಿ ಮಳಿಗೆಗಳಿಂದ ಸಂಗ್ರಹಿಸಿದ ಅಡುಗೆ ಎಣ್ಣೆಯ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿದಾಗ, ಬರೋಬ್ಬರಿ 40ಕ್ಕೂ ಹೆಚ್ಚು ಕಡೆಗಳಲ್ಲಿ ತೀವ್ರ ಅಪಾಯಕಾರಿ ಮಟ್ಟದ ಎಣ್ಣೆ ಬಳಕೆಯಾಗುತ್ತಿರೋದು ಬೆಳಕಿಗೆ ಬಂದಿದೆ. ಒಮ್ಮೆ ಬಳಸಿದ ಎಣ್ಣೆಯನ್ನೇ ಪದೇ ಪದೇ ಕಾಯಿಸಿ, ಅದಕ್ಕೆ ಕೆಮಿಕಲ್ ಮಿಕ್ಸ್ ಮಾಡಿ ಮತ್ತೆ ತಿಂಡಿ ಕರಿಯಲು ಬಳಸಲಾಗುತ್ತಿದ್ದು, ಈ ಬೆನ್ನಲ್ಲೇ ಆ ಎಲ್ಲ ಹೋಟೆಲ್ ಮಾಲೀಕರಿಗೆ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಬರೋಬ್ಬರಿ ₹28.91 ಲಕ್ಷಕ್ಕೂ ಹೆಚ್ಚು ದಂಡ ವಿಧಿಸಿದೆ.

ಕಪ್ಪು ಎಣ್ಣೆಗೆ ಕೆಮಿಕಲ್ ಟಚ್: ಹೇಗೆ ನಡೆಯುತ್ತೆ ಈ ಜಾಲ?

ಆಹಾರ ಭದ್ರತಾ ಇಲಾಖೆಯ ಆಯುಕ್ತರಾದ ಶ್ರೀನಿವಾಸ್ ಕೆ. ನೀಡಿರುವ ಮಾಹಿತಿ ಪ್ರಕಾರ, ದೊಡ್ಡ ದೊಡ್ಡ ಹೋಟೆಲ್‌ಗಳು ತಮ್ಮ ಬಳಕೆಯಾದ ಕಪ್ಪು ಎಣ್ಣೆಯನ್ನು ತಕ್ಷಣವೇ ಚೆಲ್ಲುವುದಿಲ್ಲ. ಬದಲಿಗೆ ಅದಕ್ಕೆ ಕೆಲವು ಕೆಮಿಕಲ್‌ಗಳನ್ನು ಹಾಕಿ, ಅದು ನೋಡಲು ಮತ್ತೆ ಫ್ರೆಶ್ ಆಗಿ ಕಾಣುವಂತೆ ಮಾಡುತ್ತಾರೆ. ನಂತರ ಅದನ್ನು ತೀರಾ ಕಡಿಮೆ ಬೆಲೆಗೆ ರಸ್ತೆಬದಿಯ ಸಣ್ಣಪುಟ್ಟ ಅಂಗಡಿಗಳಿಗೆ ಮಾರಾಟ ಮಾಡುತ್ತಾರೆ.

ಈಗ ಇಂತಹ ದಂದೆಗೆ ಬ್ರೇಕ್ ಹಾಕಲು ಅಧಿಕಾರಿಗಳು ರಂಗಕ್ಕಿಳಿದಿದ್ದಾರೆ. ಹೋಟೆಲ್‌ಗಳಿಗೆ ನೇರವಾಗಿ ತೆರಳಿ ‘ಟಿಪಿಸಿ (TPC) ಮೀಟರ್’ ಎಂಬ ವಿಶೇಷ ಸಾಧನದ ಮೂಲಕ ಎಣ್ಣೆಯ ಗುಣಮಟ್ಟವನ್ನು ಅಲ್ಲೇ ಸ್ಪಾಟ್‌ ನಲ್ಲೇ ಚೆಕ್ ಮಾಡುತ್ತಿದ್ದಾರೆ. ₹30,000 ದಿಂದ ₹50,000 ಬೆಲೆಬಾಳುವ ಈ ಮೀಟರ್ ಎಣ್ಣೆ ಎಷ್ಟು ಹಾಳಾಗಿದೆ ಎಂಬುದನ್ನು ಕ್ಷಣಾರ್ಧದಲ್ಲಿ ತಿಳಿಸುತ್ತದೆ. ಎಣ್ಣೆಯಲ್ಲಿ ಟಿಪಿಸಿ ಮಟ್ಟ ಶೇ. 25 ಮೀರಿದರೆ ಅದು ತಕ್ಷಣವೇ ಕಸದ ತೊಟ್ಟಿಗೆ ಹೋಗಬೇಕು.

ಸ್ಲೋ ಪಾಯ್ಸನ್ ‘ಟ್ರಾನ್ಸ್ ಫ್ಯಾಟ್’ : ಜೀವಕ್ಕೇ ಕುತ್ತು

ಕರಿದ ಎಣ್ಣೆಯನ್ನು ಪದೇ ಪದೇ ಬಿಸಿ ಮಾಡಿ ಬಳಸುವುದರಿಂದ ಅದರಲ್ಲಿ ‘ಟ್ರಾನ್ಸ್ ಫ್ಯಾಟ್’ (Trans Fats) ಎಂಬ ವಿಷಕಾರಿ ಅಂಶ ದಟ್ಟವಾಗಿ ಬೆಳೆಯುತ್ತದೆ. ತಜ್ಞರ ಪ್ರಕಾರ, ಇಂತಹ ಎಣ್ಣೆಯಲ್ಲಿ ಮಾಡಿದ ಆಹಾರ ಸೇವಿಸುವುದರಿಂದ ಹೃದಯಾಘಾತ, ರಕ್ತನಾಳಗಳ ಬ್ಲಾಕೇಜ್, ಫ್ಯಾಟಿ ಲಿವರ್, ವಿಪರೀತ ಬೊಜ್ಜು ಮತ್ತು ಕೆಲ ಮಾದರಿಯ ಕ್ಯಾನ್ಸರ್‌ಗಳಂತಹ ಭೀಕರ ರೋಗಗಳು ತಗಲುವ ಅಪಾಯವಿರುತ್ತದೆ. ಕೇವಲ ನಾಲಿಗೆಯ ರುಚಿಗಾಗಿ ನಾವು ತಿನ್ನುವ ಈ ಆಹಾರ ದೇಹದೊಳಗೆ ಸ್ಲೋ ಪಾಯ್ಸನ್ ಆಗಿ ಕೆಲಸ ಮಾಡುತ್ತದೆ.

ಪ್ರಸ್ತುತ ಕರ್ನಾಟಕ ಸರ್ಕಾರವು ಇಡೀ ರಾಜ್ಯದ ಆಹಾರ ಪೂರೈಕೆ ವ್ಯವಸ್ಥೆಯಿಂದ ಈ ಅಪಾಯಕಾರಿ ಟ್ರಾನ್ಸ್ ಫ್ಯಾಟ್‌ ಅನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮಾಸ್ಟರ್ ಪ್ಲಾನ್ ರೂಪಿಸಿದೆ. ಈಗಾಗಲೇ 52,000ಕ್ಕೂ ಹೆಚ್ಚು ಆಹಾರ ವ್ಯಾಪಾರಿಗಳಿಗೆ ಸುರಕ್ಷಿತ ಆಹಾರ ತಯಾರಿಕೆಯ ಬಗ್ಗೆ ಕಠಿಣ ತರಬೇತಿಯನ್ನೂ ನೀಡಲಾಗಿದೆ.

ಬರೋಬ್ಬರಿ 45.9 ಲಕ್ಷ ಲೀಟರ್ ವೇಸ್ಟ್ ಆಯಿಲ್ ಸಂಗ್ರಹ!

ಹೋಟೆಲ್‌ಗಳ ಈ ಎಣ್ಣೆ ಜಾಲವನ್ನು ಕಂಟ್ರೋಲ್ ಮಾಡಲು ‘ರೂಕೊ’ (RUCO – Repurpose Used Cooking Oil) ಎಂಬ ಯೋಜನೆಯನ್ನು ಜಾರಿಗೆ ತರಲಾಗಿದೆ. 2024ರಿಂದ 2026ರ ನಡುವೆ FSSAI ನಿಂದ ಗುರುತಿಸಲ್ಪಟ್ಟ 4 ವಿಶೇಷ ಏಜೆನ್ಸಿಗಳು ಸೇರಿ ಇಡೀ ರಾಜ್ಯದಿಂದ ಬರೋಬ್ಬರಿ 45.9 ಲಕ್ಷ ಲೀಟರ್ ಬಳಕೆಯಾದ ಅಡುಗೆ ಎಣ್ಣೆಯನ್ನು ಸಂಗ್ರಹಿಸಿವೆ!

ಸಣ್ಣ ಮತ್ತು ದೊಡ್ಡ ಹೋಟೆಲ್‌ಗಳಿಂದ ಈ ಹಳೆಯ ಎಣ್ಣೆಯನ್ನು ಸಂಗ್ರಹಿಸಿ, ಅದನ್ನು ಮತ್ತೆ ಅಡುಗೆಗೆ ಬಳಸದಂತೆ ನೇರವಾಗಿ ‘ಬಯೋಡೀಸೆಲ್’ (Bio-Diesel) ತಯಾರಿಕಾ ಕಂಪನಿಗಳಿಗೆ ಕಳುಹಿಸಿಕೊಡಲಾಗುತ್ತಿದೆ. ಇದರಿಂದ ಪರಿಸರಕ್ಕೂ ಒಳಿತಾಗುತ್ತಿದ್ದು, ನಕಲಿ ಎಣ್ಣೆ ಮಾರುಕಟ್ಟೆಗೆ ಬರುವುದಕ್ಕೂ ತಡೆ ಬಿದ್ದಂತಾಗಿದೆ.

ಪಬ್, ಬಾರ್, ರೆಸ್ಟೋರೆಂಟ್‌ಗಳಿಗೆ ಹೊಸ ರೂಲ್ಸ್

ಬೆಂಗಳೂರಿನಲ್ಲಿ ಕಳಪೆ ಎಣ್ಣೆಯ ಹಾವಳಿ ಹೆಚ್ಚಾಗುತ್ತಿದ್ದಂತೆ ಆಹಾರ ಸುರಕ್ಷತಾ ಇಲಾಖೆಯು ನಗರದ ಪಬ್‌, ಬಾರ್‌, ಕ್ಲಬ್‌, ಹೋಟೆಲ್‌ ಹಾಗೂ ರೆಸ್ಟೋರೆಂಟ್‌ಗಳಿಗೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಲು ಸಜ್ಜಾಗಿದೆ.

ಇನ್ಮುಂದೆ ಪ್ರತಿಯೊಂದು ಕಮರ್ಷಿಯಲ್ ಕಿಚನ್‌ಗಳೂ ತಮ್ಮ ಎಣ್ಣೆಯ ಬಳಕೆಯ ವರದಿಯನ್ನು ಇಟ್ಟುಕೊಳ್ಳುವುದು ಕಡ್ಡಾಯ. ನಿಯಮ ಮೀರಿ ವಿಷಕಾರಿ ಎಣ್ಣೆ ಬಳಸುವುದು ಕಂಡುಬಂದರೆ ಅಂತಹ ಹೋಟೆಲ್‌ಗಳ ಲೈಸೆನ್ಸ್ ರದ್ದುಗೊಳಿಸುವುದರ ಜೊತೆಗೆ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆಯನ್ನೂ ನೀಡಲಾಗಿದೆ.

ಮನೆಯಲ್ಲಿ ಅಡುಗೆ ಮಾಡುವವರೂ ಎಚ್ಚರ ವಹಿಸಿ!

ಹೋಟೆಲ್‌ನವರಷ್ಟೇ ಅಲ್ಲ, ಮನೆಯಲ್ಲಿ ಅಡುಗೆ ಮಾಡುವಾಗ ನಾವೂ ಕೂಡ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ. ಒಮ್ಮೆ ಪೂರಿ ಅಥವಾ ಬಜ್ಜಿ ಕರಿದ ಎಣ್ಣೆಯನ್ನು ಮತ್ತೆ ಮತ್ತೆ ಅದನ್ನೇ ಬಿಸಿ ಮಾಡಿ ಬಳಸುವ ಅಭ್ಯಾಸ ನಮಗಿರುತ್ತದೆ. ಆದರೆ, ಯಾವುದೇ ಅಡುಗೆ ಎಣ್ಣೆಯನ್ನು 2 ರಿಂದ 3 ಬಾರಿಗಿಂತ ಹೆಚ್ಚು ಬಳಸಲೇಬಾರದು.

ಎಣ್ಣೆ ಕಪ್ಪಗಾದರೆ ಅಥವಾ ಅದರ ಸುವಾಸನೆ ಬದಲಾದರೆ ಅದನ್ನು ತಕ್ಷಣವೇ ಬಿಸಾಡಬೇಕು. ಅಲ್ಲದೆ, ಬಳಸಿ ಉಳಿದ ಹಳೆಯ ಎಣ್ಣೆಯನ್ನು ಸಿಂಕ್ ಅಥವಾ ಚರಂಡಿಗೆ ಚೆಲ್ಲುವಂತಿಲ್ಲ. ಮನೆಗೆ ಬರುವ ಕಸ ಸಂಗ್ರಹಕಾರರಿಗೆ “ಅಪಾಯಕಾರಿ ತ್ಯಾಜ್ಯ” (Domestic Hazardous Waste) ಎಂದು ಹೇಳಿ ಪ್ರತ್ಯೇಕವಾಗಿ ನೀಡಬೇಕು ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಹೆಜ್ಜೆ ಹೆಜ್ಜೆಗೂ ಇರಲಿ ಎಚ್ಚರ

ಹೊರಗಡೆ ಸಿಗುವ ಬಿಸಿಯಾದ, ಗರಿಗರಿಯಾದ ತಿಂಡಿಗಳು ನೋಡಲು ಎಷ್ಟೇ ಆಕರ್ಷಕವಾಗಿದ್ದರೂ, ಅವುಗಳನ್ನು ತಯಾರಿಸುವ ಎಣ್ಣೆ ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಪ್ರಶ್ನೆ ಪ್ರತಿಯೊಬ್ಬರಲ್ಲೂ ಇರಬೇಕು. ಶುಚಿತ್ವ ಮತ್ತು ಗುಣಮಟ್ಟ ಇಲ್ಲದ ಕಡೆಗಳಲ್ಲಿ ಆಹಾರ ಸೇವಿಸುವುದನ್ನು ಸಂಪೂರ್ಣವಾಗಿ ತಡೆದಾಗ ಮಾತ್ರ ಇಂತಹ ನಕಲಿ ದಂದೆಗೆ ಶಾಶ್ವತವಾಗಿ ಪೂರ್ಣವಿರಾಮ ಇಡಲು ಸಾಧ್ಯ.

- Advertisement -spot_img

More articles

- Advertisement -spot_img

Latest article