ಹುಬ್ಬಳ್ಳಿ-ಧಾರವಾಡದ ಹೈಟೆಕ್ ಹೆಗ್ಗುರುತು ಅಂತಾನೇ ಬಿಂಬಿತವಾಗಿದ್ದ ‘ಚಿಗರಿ’ ಬಿಆರ್‌ಟಿಎಸ್ ಬಸ್‌ಗಳು ಇವತ್ತು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (NWKRTC) ಪಾಲಿಗೆ ಬಿಸಿ ತುಪ್ಪವಾಗಿವೆ.
ಸಾವಿರ ಕೋಟಿ ಸುರಿದು ಶುರುಮಾಡಿದ ಈ ಕನಸಿನ ಯೋಜನೆ ಈಗ ಸಾರಿಗೆ ಸಂಸ್ಥೆಯನ್ನ ಆರ್ಥಿಕವಾಗಿ ಹೈರಾಣು ಮಾಡಿದೆ. ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ನಷ್ಟ ಆಗ್ತಿದ್ರೂ, ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ ಕುಳಿತಿದ್ದಾರೆ.
ಕಿಲೋಮೀಟರ್‌ಗೆ ₹30 ಲಾಸ್: ಹೆಜ್ಜೆ ಹೆಜ್ಜೆಗೂ ಜೇಬಿಗೆ ಕನ್ನ!
ಚಿಗರಿ ಬಸ್‌ಗಳ ಲೆಕ್ಕಾಚಾರ ತೆರೆದು ನೋಡಿದರೆ ಎಂತವರಿಗೂ ತಲೆ ತಿರುಗುತ್ತೆ. ಒಂದು ಕಿಲೋಮೀಟರ್ ಬಸ್ ಓಡಿಸೋಕೆ ಸಂಸ್ಥೆಗೆ ಸರಿಸುಮಾರು 80 ರೂಪಾಯಿ ಖರ್ಚಾದರೆ, ಬರ್ತಿರೋ ಆದಾಯ ಮಾತ್ರ ಬರಿ 50 ರೂಪಾಯಿ. ಅಂದರೆ ಪ್ರತಿಯೊಂದು ಕಿಲೋಮೀಟರ್‌ಗೂ ₹30 ರೂಪಾಯಿ ನಷ್ಟ ಆಗ್ತಿದೆ. ಬಸ್ ದಿನವಿಡೀ ಓಡಿದಷ್ಟು ಸಂಸ್ಥೆಯ ಸಾಲದ ಹೊರೆ ಬೆಳೆಯುತ್ತಲೇ ಇದೆಯೇ ವಿನಃ ಖಜಾನೆ ತುಂಬುತ್ತಿಲ್ಲ.
₹150 ಕೋಟಿ ಹಿಂಬಾಕಿ ಕೊಟ್ಟಿಲ್ಲ ನಗರಾಭಿವೃದ್ಧಿ ಇಲಾಖೆ
ರಸ್ತೆ ಮತ್ತು ಮೂಲಸೌಕರ್ಯ ನಿರ್ವಹಣೆಯನ್ನು ಬಿಆರ್‌ಟಿಎಸ್ ನೋಡಿಕೊಂಡರೆ, ಬಸ್ ಓಡಿಸೋ ಉಸ್ತುವಾರಿ ಮಾತ್ರ ಎನ್‌ಡಬ್ಲ್ಯೂಕೆಆರ್‌ಟಿಸಿ ಹೆಗಲ ಮೇಲಿದೆ. ಈ ನಷ್ಟವನ್ನು ನಮಗೆ ಭರಿಸಿಕೊಡಿ ಅಂತ ನಗರಾಭಿವೃದ್ಧಿ ಇಲಾಖೆಗೆ ಸಂಸ್ಥೆ ಸಾಲು ಸಾಲು ಪತ್ರ ಬರೆದಿದೆ. 2018ರಿಂದ ಇಲ್ಲಿಯವರೆಗೆ ಬರೊಬ್ಬರಿ 150 ಕೋಟಿ ರೂಪಾಯಿಗೂ ಹೆಚ್ಚು ಹಿಂಬಾಕಿ ಬಾಕಿ ಉಳಿಸಿಕೊಂಡಿದೆ. ಆದರೆ, ಈ ಬಾಕಿ ಹಣ ಬಿಡುಗಡೆ ಮಾಡಲು ಇಲಾಖೆ ಮಾತ್ರ ಮನಸ್ಸು ಮಾಡುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಖರ್ಚು ಸಾವಿರ ಕೋಟಿ, ರಿಸಲ್ಟ್ ಮಾತ್ರ ಶೂನ್ಯ
2018ರಲ್ಲಿ ಬರೋಬ್ಬರಿ ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ಹುಬ್ಬಳ್ಳಿ-ಧಾರವಾಡ ನಡುವೆ ಚಿಗರಿ ಯೋಜನೆಯನ್ನು ತರಲಾಗಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿದಿನ 100 ಎಸಿ ಬಸ್‌ಗಳು ರೋಡ್‌ಗೆ ಇಳಿಯುತ್ತಿವೆ. ಆಟೋಪೋಸ್, ಪ್ರತ್ಯೇಕ ಟ್ರ್ಯಾಕ್ ಅಂತ ಏನೇನೋ ಹೈಪ್ ಕ್ರಿಯೇಟ್ ಮಾಡಲಾಗಿತ್ತಾದರೂ, ಬಿಆರ್‌ಟಿಎಸ್‌ನ ಹದಗೆಟ್ಟ ಸಿಸ್ಟಮ್‌ನಿಂದಾಗಿ ಈಗ ಪೂರ ಉಲ್ಟಾಪಲ್ಟಾ ಆಗಿದೆ.
ಎಲ್ಲೆಂದರಲ್ಲಿ ಕೆಟ್ಟು ನಿಲ್ಲೋ ತಾಂತ್ರಿಕ ಕಿರಿಕಿರಿ
ನಷ್ಟ ಒಂದ್ಕಡೆಯಾದ್ರೆ, ಬಸ್‌ಗಳ ಮೇಂಟನೆನ್ಸ್ ಪೂರ್ತಿ ಅಧೋಗತಿಗೆ ಹೋಗಿದೆ. ಇತ್ತೀಚಿನ ದಿನಗಳಲ್ಲಂತೂ ಈ ಚಿಗರಿ ಬಸ್‌ಗಳು ರಸ್ತೆ ಮಧ್ಯದಲ್ಲೇ ತಾಂತ್ರಿಕ ದೋಷದಿಂದ ಕೆಟ್ಟು ನಿಲ್ಲೋದು ತೀರಾ ಮಾಮೂಲಾಗಿಬಿಟ್ಟಿದೆ. ಬಸ್‌ಗಳ ಮೆಕ್ಯಾನಿಕಲ್ ಪ್ರಾಬ್ಲಮ್‌ನಿಂದಾಗಿ ಪ್ರಯಾಣಿಕರು ಅಂದುಕೊಂಡ ಸಮಯಕ್ಕೆ ತಲುಪಲಾಗದೆ ನಿತ್ಯ ಪೇಚಾಡುವಂತಾಗಿದೆ.
ಹೆಚ್ಚಿದ ಅಪಘಾತಗಳು: ಜನಾಕ್ರೋಶ
ಕೇವಲ ಲೇಟ್ ಆಗೋದು ಅಷ್ಟೇ ಅಲ್ಲ, ರಸ್ತೆಯಲ್ಲಿ ಈ ಬಸ್‌ಗಳ ಹಾವಳಿ ಮತ್ತು ಅಪಘಾತಗಳ ಸಂಖ್ಯೆಯೂ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಸ್ಪೀಡ್ ಗವರ್ನರ್ ಕಿತ್ತುಬಿದ್ದಿದೆಯೋ ಅಥವಾ ಡ್ರೈವರ್‌ಗಳ ನಿರ್ಲಕ್ಷ್ಯವೋ ಗೊತ್ತಿಲ್ಲ, ಆದರೆ ಸಾರ್ವಜನಿಕರ ಜೀವದ ಜೊತೆ ಚಿಗರಿ ಆಟವಾಡುತ್ತಿದೆ. ಇದರಿಂದ ರೋಸಿಹೋಗಿರೋ ಅವಳಿ ನಗರದ ಜನತೆ ಈಗ ಸಾರಿಗೆ ಇಲಾಖೆ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.



