ಬೆಂಗಳೂರು ಕೇವಲ ತಂತ್ರಜ್ಞಾನದ ಹಬ್ ಮಾತ್ರ ಅಲ್ಲ. ಸೈಬರ್ ವಂಚಕರ ಅಡ್ಡೆಯೂ ಹೌದು. ಇಲ್ಲಿ ಚೂರು ಯಾಮಾರಿದರೂ ಸಾಕು, ನಿಮ್ಮ ಬ್ಯಾಂಕ್ ಅಕೌಂಟ್ ಖಾಲಿಯಾಗುವುದರ ಜೊತೆಗೆ ಮರ್ಯಾದೆಯೂ ಹರಾಜಾಗುತ್ತೆ. ಇಂತಹದ್ದೇ ಒಂದು ಶಾಕಿಂಗ್ ಘಟನೆ ಈಗ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ. ಬಿಸಿಸಿಐ (BCCI) ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್‌ಗಾಗಿ ಬೆಂಗಳೂರಿಗೆ ಬಂದಿದ್ದ ಮಹಾರಾಷ್ಟ್ರ ಮೂಲದ 20 ವರ್ಷದ ಉದಯೋನ್ಮುಖ ಆಟಗಾರರೊಬ್ಬರು, ಸೈಬರ್ ಕಳ್ಳರ ‘ಹನಿಟ್ರ್ಯಾಪ್’ ಬಲೆಗೆ ಬಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಡೇಟಿಂಗ್ ಆ್ಯಪ್‌ನಲ್ಲಿ ಬಲೆ ಬೀಸಿದ ‘ರಶಿಕಾ’
ಘಟನೆ ನಡೆದದ್ದು ಉತ್ತರ ಬೆಂಗಳೂರಿನ ಫೈವ್ ಸ್ಟಾರ್ ಹೋಟೆಲ್‌ನಲ್ಲಿ. ದಿನವಿಡೀ ಮೈದಾನದಲ್ಲಿ ಬೆವರು ಸುರಿಸಿ, ರಾತ್ರಿ ಹೋಟೆಲ್ ರೂಮ್‌ಗೆ ಬಂದ ಯುವ ಕ್ರಿಕೆಟರ್ ಟೈಮ್‌ಪಾಸ್ ಮಾಡಲು ‘ಡೇಟಿಂಗ್ ಆ್ಯಪ್’ ಓಪನ್ ಮಾಡಿದ್ದಾರೆ. ಇಲ್ಲೇ ಇವರು ಎಡವಿದ್ದು. ‘ಡೇಟಿಂಗ್ ಆ್ಯಪ್’ ಓಪನ್ ಮಾಡಿದ ತಕ್ಷಣವೇ ಕ್ರಿಕೆಟರ್ ಗೆ ‘ರಶಿಕಾ’ ಎಂಬ ಪ್ರೊಫೈಲ್‌ನಿಂದ ಮೆಸೇಜ್ ಬಂದಿದೆ. ಮಾತು ಕಥೆ ಶುರುವಾಗಿದೆ. ಆಕೆಯ ಬಣ್ಣ ಬಣ್ಣದ ಮಾತುಗಳಿಗೆ ಮಾರುಹೋದ ಕ್ರಿಕೆಟರ್ ಗೆ ಆ ನಂತರ ವಾಟ್ಸಾಪ್ ವಿಡಿಯೋ ಕಾಲ್ ಮಾಡುವಂತೆ ಆಕೆ ಪುಸಲಾಯಿಸಿದ್ದಾಳೆ.
30 ಸೆಕೆಂಡ್‌ನ ವಿಡಿಯೋ ಕಾಲ್ , ಮರ್ಯಾದೆ ಹರಾಜು
ಕಾಲ್ ಕನೆಕ್ಟ್ ಆಗುತ್ತಿದ್ದಂತೆಯೇ, ಆ ಕಡೆಯಿಂದ ಮಹಿಳೆ ತನ್ನ ಬಟ್ಟೆಗಳನ್ನು ಒಂದೊಂದಾಗಿ ಕಳಚಿ ಉದ್ರೇಕಕಾರಿಯಾಗಿ ವರ್ತಿಸಲು ಶುರುಮಾಡಿದ್ದಾಳೆ. ಕೇವಲ 20 ವರ್ಷದ ಈ ಯುವ ಆಟಗಾರ, ಆಕೆಯ ಈ ಹಸಿಬಿಸಿ ವರ್ತನೆಗೆ ಮರುಳಾಗಿ ತಾನೂ ಪ್ರಚೋದನೆಗೆ ಒಳಗಾಗಿದ್ದಾರೆ. ಆಕೆಯ ಮಾತು ಕೇಳಿ ಕ್ರಿಕೆಟಿಗ ಕೂಡ ತನ್ನ ಉಡುಪುಗಳನ್ನು ಕಳಚಿದ್ದಾರೆ. ಸರಿಯಾಗಿ 30 ಸೆಕೆಂಡ್‌ಗಳ ಈ ಖಾಸಗಿ ಕ್ಷಣಗಳನ್ನು ವಂಚಕರ ಗ್ಯಾಂಗ್ ಸ್ಕ್ರೀನ್ ರೆಕಾರ್ಡ್ ಮಾಡಿಕೊಂಡಿದೆ. ಕೆಲಸ ಮುಗಿಯುತ್ತಿದ್ದಂತೆಯೇ ಆ ಕಡೆಯಿಂದ ಕಾಲ್ ತಟ್ಟನೆ ಕಟ್ ಆಗಿದೆ.
ವೈರಲ್ ಮಾಡ್ತೀವಿ: ಕರಿಯರ್ ಹಾಳುಮಾಡುವ ಬೆದರಿಕೆ
ಕಟ್ ಆದ ಕೆಲವೇ ನಿಮಿಷಗಳಲ್ಲಿ ಕ್ರಿಕೆಟಿಗನ ವಾಟ್ಸಾಪ್‌ಗೆ ಬಂದದ್ದು ಪ್ರೈವೇಟ್ ವಿಡಿಯೋದ ಕ್ಲಿಪ್ ಮತ್ತು ಬೆದರಿಕೆಯ ಸಂದೇಶ. ನಿನ್ನ ಅಶ್ಲೀಲ ವಿಡಿಯೋ ನಮ್ಮ ಬಳಿಯಿದೆ, ತಕ್ಷಣ ನಾವು ಹೇಳಿದಷ್ಟು ಹಣ ಟ್ರಾನ್ಸ್‌ಫರ್ ಮಾಡದಿದ್ದರೆ ಇದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇವೆ, ನಿನ್ನ ಕ್ರಿಕೆಟ್ ಕರಿಯರ್ ಮುಗಿಸಿಹಾಕುತ್ತೇವೆ ಎಂದು ಹೆದರಿಸಲು ಶುರುಮಾಡಿದ್ದಾರೆ. ಭವಿಷ್ಯದ ಭಯ ಹಾಗೂ ಮರ್ಯಾದೆಯ ಆತಂಕದಲ್ಲಿದ್ದ ಕ್ರಿಕೆಟರ್, ತಕ್ಷಣವೇ ₹1,500 ಹಣವನ್ನು ಯುಪಿಐ ಮೂಲಕ ಕಳುಹಿಸಿದ್ದಾರೆ. ಆದರೆ, ಸೈಬರ್ ಕಳ್ಳರಿಗೆ ಇಷ್ಟೆಲ್ಲ ಹಣ ಎಲ್ಲಿ ಸಾಲಬೇಕು..? ಮರುದಿನ ಮಧ್ಯಾಹ್ನದವರೆಗೂ ನಿರಂತರವಾಗಿ ಬೆದರಿಕೆ ಹಾಕಿ, ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಡಲು ಶುರುಮಾಡಿದ್ದಾರೆ.
ಸೈಬರ್ ಕ್ರೈಂ ಠಾಣೆ ಮೆಟ್ಟಿಲೇರಿದ ಆಟಗಾರ
ಕೊನೆಗೆ ತಾಳ್ಮೆಗೆಟ್ಟು, ವಿಷಯ ಕೈಮೀರಿ ಹೋಗುತ್ತಿದೆ ಎಂದು ಅರಿತ ಯುವ ಕ್ರಿಕೆಟರ್, ಧೈರ್ಯ ಮಾಡಿ ತನ್ನ ಸ್ನೇಹಿತರ ಬಳಿ ವಿಷಯ ಹೇಳಿಕೊಂಡಿದ್ದಾರೆ. ಸ್ನೇಹಿತರು ತಿಳಿಹೇಳಿ, ಪೊಲೀಸರಿಗೆ ದೂರು ನೀಡುವಂತೆ ಧೈರ್ಯ ತುಂಬಿದ್ದಾರೆ. ಕೂಡಲೇ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿದ ಆಟಗಾರ, ವಂಚಕರ ನಂಬರ್ ಸಮೇತ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಐಟಿ ಆಕ್ಟ್ ಹಾಗೂ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು, ವಂಚಕರ ಜಾಲಕ್ಕಾಗಿ ಬಲೆ ಬೀಸಿದ್ದಾರೆ.
ವಿಡಿಯೋ ಕಾಲ್ ಬಂದರೆ ಹೀಗೆ ಮಾಡಿ – ಡಿಸಿಪಿ ಖಡಕ್ ಸೂಚನೆ
ಇನ್ನು ಈ ಬಗ್ಗೆ ಗಂಭೀರವಾಗಿ ಮಾತನಾಡಿರುವ ಅಪರಾಧ ವಿಭಾಗದ ಡಿಸಿಪಿ ರಾಜಾ ಇಮಾಮ್ ಕಾಸಿಮ್ ಪಿ, ಇತ್ತೀಚೆಗೆ ಸೈಬರ್ ಅಪರಾಧಿಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮತ್ತು ಸಿಂಥೆಟಿಕ್ ವಾಯ್ಸ್ ಬಳಸಿ ನಿಜವಾದ ಹೆಂಗಸರೇ ಮಾತನಾಡುತ್ತಿದ್ದಾರೆ ಎನ್ನುವಂತೆ ನಕಲಿ ವಿಡಿಯೋ ಕ್ರಿಯೇಟ್ ಮಾಡುತ್ತಿದ್ದಾರೆ. ಯಾರಾದರೂ ಅಪರಿಚಿತರಿಂದ ವಿಡಿಯೋ ಕಾಲ್ ಬಂದರೆ ಅಟೆಂಡ್ ಮಾಡಬೇಡಿ. ಒಂದು ವೇಳೆ ಬೈಮಿಸ್ಟೇಕ್ ಅಟೆಂಡ್ ಮಾಡಿದರೂ, ತಕ್ಷಣ ಫೋನ್ ಕ್ಯಾಮೆರಾವನ್ನು ಫ್ರಂಟ್‌ನಿಂದ ಬ್ಯಾಕ್ ಕ್ಯಾಮರಾಗೆ ಬದಲಿಸಿ, ಇದರಿಂದ ನಿಮ್ಮ ಮುಖ ಕ್ಯಾಪ್ಚರ್ ಆಗುವುದಿಲ್ಲ. ಒಂದು ವೇಳೆ ವಂಚಕರ ಕೈಗೆ ಸಿಲುಕಿದರೆ, ಹಣ ಕೊಟ್ಟು ಅವರಿಗೆ ಆಹಾರವಾಗಬೇಡಿ. ಧೈರ್ಯವಾಗಿ ಪೊಲೀಸ್‌ಗೆ ಕಂಪ್ಲೇಂಟ್ ಕೊಡ್ತೀನಿ ಎಂದು ಹೇಳಿ ಬ್ಲಾಕ್ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಉದ್ಯಮಿಗೆ ₹10 ಲಕ್ಷ, ಟೆಕ್ಕಿಗೆ ₹1 ಲಕ್ಷ ಲಾಸ್!
ವಿಶೇಷವೆಂದರೆ, ಇಂತಹ ಪ್ರಕರಣಗಳಲ್ಲಿ ಫೋಟೋ ಅಥವಾ ವಿಡಿಯೋ ಲೀಕ್ ಆಗಿದ್ದರೆ, ಅದನ್ನು ಡಿಲೀಟ್ ಮಾಡಲು https://stopncii.org ಎಂಬ ಜಾಗತಿಕ ಪ್ಲಾಟ್‌ಫಾರ್ಮ್ ಇರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಇಷ್ಟೇ ಅಲ್ಲದೆ, ಇತ್ತೀಚೆಗೆ ವಾಟ್ಸಾಪ್ ಕಾಲ್‌ನಲ್ಲಿ ಬಟ್ಟೆ ಕಳಚಿದ ಮಹಿಳೆಯನ್ನು ನೋಡಿ ಕಾಲ್ ಡಿಸ್ಕನೆಕ್ಟ್ ಮಾಡಿದ 42 ವರ್ಷದ ಉದ್ಯಮಿಯೊಬ್ಬರ ಮುಖವನ್ನು ಮಾರ್ಫಿಂಗ್ ಮಾಡಿ, ‘ನಾವು ದೆಹಲಿ ಪೊಲೀಸರು’ ಎಂದು ಹೆದರಿಸಿ ಬರೋಬ್ಬರಿ ₹10 ಲಕ್ಷ ಲೂಟಿ ಮಾಡಲಾಗಿದೆ! ಇನ್ನೊಂದೆಡೆ, 29 ವರ್ಷದ ಟೆಕ್ಕಿಯೊಬ್ಬರು ₹1 ಲಕ್ಷ ಕಳೆದುಕೊಂಡಿದ್ದಾರೆ. ಒಟ್ಟಿನಲ್ಲಿ, ಸ್ಕ್ರೀನ್ ಮೇಲಿನ ಕಾಂಟ್ಯಾಕ್ಟ್ ಯಾರದ್ದೇ ಇರಲಿ, ಸ್ವಲ್ಪ ಮೈಮರೆತರೂ ಲಕ್ಷಾಂತರ ಹಣದ ಜೊತೆಗೆ ನಿಮ್ಮ ಇಡೀ ಜೀವನವೇ ಸೈಬರ್ ವಂಚಕರ ಕೈಯಲ್ಲಿ ಆಟದ ವಸ್ತುವಾಗುವುದಂತೂ ಖಂಡಿತ.



