No menu items!
19.6 C
Munich
Thursday, July 23, 2026

ನೀಟ್ ಅಕ್ರಮ ದೇಶದ ಭವಿಷ್ಯದ ವಿಚಾರ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ: ಡಿಕೆ ಶಿವಕುಮಾರ್ ಆಗ್ರಹ

Must read

ನೀಟ್ ಅಕ್ರಮ ದೇಶದ ಭವಿಷ್ಯದ ವಿಚಾರ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಅಗತ್ಯ: ಡಿಕೆ ಶಿವಕುಮಾರ್ ಆಗ್ರಹ

ಬೆಂಗಳೂರು: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಈಗ ಮಾತನಾಡುವ ಬದಲು ಆರಂಭದಲ್ಲೇ ಸ್ಪಂದಿಸಬೇಕಿತ್ತು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಗ್ರಹಿಸಿದ್ದಾರೆ.

ಬೆಂಗಳೂರಿನ ಕೆ.ಜಿ. ರಸ್ತೆ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಸರ್ಕಾರದ ಮುಂದೆ ಇರಬಾರದು ಎಂದು ಹೇಳಿದ್ದಾರೆ.

ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸಿಎಂ, “ಬಿಜೆಪಿಯವರ ಮಕ್ಕಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ದೇಶದ ಯುವ ಜನತೆಯ ಭವಿಷ್ಯ ಹಾಳಾಗುತ್ತಿದೆ. ಸರ್ಕಾರ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು. ಪ್ರಶ್ನೆ ಪತ್ರಿಕೆ ಸೋರಿಕೆಯಾದಾಗ ಯಾರಾದರೂ ಜವಾಬ್ದಾರಿ ಹೊತ್ತುಕೊಳ್ಳಬೇಕಲ್ಲವೇ? ಇದಕ್ಕೆ ಯಾರು ಹೊಣೆ?” ಎಂದು ಪ್ರಶ್ನಿಸಿದರು.

ಒಬ್ಬ ವ್ಯಕ್ತಿಯ ರಾಜೀನಾಮೆಯಿಂದ ಮಾತ್ರ ಸಮಸ್ಯೆ ಬಗೆಹರಿಯುವುದಿಲ್ಲ. ಇಂತಹ ಘಟನೆಗಳು ಮರುಕಳಿಸದಂತೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಎಂದು ಹೇಳಿದರು.ಪ್ರಶ್ನೆ ಪತ್ರಿಕೆ ಸೋರಿಕೆ ಕುರಿತು ಸಂಸತ್ತಿನಲ್ಲಿ ಸಮಗ್ರ ಚರ್ಚೆ ನಡೆಯಬೇಕು ಎಂದು ಡಿ.ಕೆ. ಶಿವಕುಮಾರ್ ಒತ್ತಾಯಿಸಿದರು.

“ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆಯಾಗಬೇಕು. ಟೀಕೆ ಬಂದಾಗ ಅದನ್ನು ಸ್ವೀಕರಿಸಿ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು. ಯುವಕರ ಭವಿಷ್ಯದ ಬಗ್ಗೆ ನಾವು ಚಿಂತಿಸಬೇಕಿದೆ. ಈಗಾಗಲೇ ಸುಮಾರು 100ಕ್ಕೂ ಹೆಚ್ಚು ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ನಡೆದಿವೆ” ಎಂದು ಹೇಳಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಯಾವುದೇ ರಾಜಕೀಯ ಪಕ್ಷದ ವಿಚಾರವಲ್ಲ. ಇದು ದೇಶದ ಭವಿಷ್ಯದ ವಿಚಾರವಾಗಿದೆ. ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಗುಣಮಟ್ಟವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿ ಎಂದು ತಿಳಿಸಿದರು.

ನೀಟ್ ಅಕ್ರಮದ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವದ ಹಕ್ಕು. ಆದರೆ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ಮಾಡಿರುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮಾಧ್ಯಮಗಳ ಮೇಲೂ ನಿರ್ಬಂಧ ಹೇರಲಾಗಿದೆ ಎಂದು ಆರೋಪಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳು ಹರಿದಾಡಿದ ಬಳಿಕವೇ ಹಲವು ವಿಚಾರಗಳು ಬೆಳಕಿಗೆ ಬಂದಿವೆ ಎಂದರು.

“ಮಾಧ್ಯಮಗಳು ಪ್ರಜಾಪ್ರಭುತ್ವದ ಪ್ರಮುಖ ಅಂಗ. ಪ್ರಶ್ನೆ ಮಾಡುವುದು ಅವರ ಜವಾಬ್ದಾರಿ. ಇದು ಹೊಸ ತಲೆಮಾರಿನ ಹೋರಾಟ” ಎಂದು ಹೇಳಿದರು.

ಬಿಜೆಪಿ ನಾಯಕರ ಮೇಲೆ ಮೊಟ್ಟೆ ಎಸೆದ ಘಟನೆ ಕುರಿತು ಪ್ರತಿಕ್ರಿಯಿಸಿದ ಡಿ.ಕೆ. ಶಿವಕುಮಾರ್, “ಮೊಟ್ಟೆ ಎಸೆದಿರುವುದನ್ನು ನಾನು ಸಮರ್ಥಿಸುವುದಿಲ್ಲ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ಈಗಾಗಲೇ ತಿಳಿಸಿದ್ದಾರೆ” ಎಂದರು.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಂದಿನ ಘಟನೆಗಳನ್ನು ಬಿಜೆಪಿ ನಾಯಕರು ನೆನಪಿಸಿಕೊಳ್ಳಬೇಕು. ಅವರ ಆಡಳಿತದ ಅವಧಿಯಲ್ಲೂ ಹಲವು ಘಟನೆಗಳು ನಡೆದಿವೆ ಎಂದು ಆರೋಪಿಸಿದರು.

- Advertisement -spot_img

More articles

- Advertisement -spot_img

Latest article