ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ಬಾಬಾಗಳು ಹಾಗೂ ಮಧ್ಯವರ್ತಿಗಳ ಮಾಯಾಜಾಲಕ್ಕೆ ಬಿದ್ದು ಆಸ್ತಿ-ಪಾಸ್ತಿ ಕಳೆದುಕೊಳ್ಳುವ ಘಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಚಾಮರಾಜಪೇಟೆಯಲ್ಲಿ ದುಷ್ಟಶಕ್ತಿ ನಿವಾರಣೆ ಮತ್ತು ಆರ್‌ಬಿಐನಿಂದ ಕೋಟ್ಯಂತರ ರೂಪಾಯಿ ಕೊಡಿಸುವುದಾಗಿ ನಂಬಿಸಿ, ಮಹಿಳೆಯೊಬ್ಬರಿಂದ ಬರೋಬ್ಬರಿ 2.5 ಕೋಟಿ ರೂಪಾಯಿ ನಗದು ಹಾಗೂ ಚಿನ್ನಾಭರಣವನ್ನು ದೋಚಿರುವ ಭೀಕರ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಮೋಸ ಹೋದದ್ದು ತಿಳಿಯುತ್ತಿದ್ದಂತೆಯೇ ಸಂತ್ರಸ್ತೆ ಸಿಸಿಬಿ (CCB) ಪೊಲೀಸರ ಬಾಗಿಲು ತಟ್ಟಿದ್ದಾರೆ.
ಮಗನ ಬೈಕ್ ಅಪಘಾತವೇ ಆಯ್ತು ವಂಚಕರಿಗೆ ಮೊದಲ ಅಸ್ತ್ರ
ಮೂಲತಃ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರ್ ನಿವಾಸಿಯಾಗಿರುವ ಎಂ. ಕುಮುದಾ ಎಂಬುವವರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ವಾಸವಾಗಿದ್ದರು. 2022ರಲ್ಲಿ ತಮ್ಮ ಪತಿ ಹಾಗೂ ಅತ್ತೆಗೆ ಸೇರಿದ ಆಸ್ತಿಯ ಮೇಲೆ ಬ್ಯಾಂಕ್ ಸಾಲ ಪಡೆಯಲು ಮುಂದಾಗಿದ್ದಾಗ ಶಂಕರ್ ಮತ್ತು ಭರತ್ ಎಂಬ ಇಬ್ಬರು ಮಧ್ಯವರ್ತಿಗಳ ಪರಿಚಯವಾಗಿತ್ತು. ಇದೇ ವೇಳೆ ನವೆಂಬರ್2023ರಲ್ಲಿ ಕುಮುದಾ ಅವರ ಮಗ ಬೈಕ್ ಅಪಘಾತಕ್ಕೀಡಾಗಿದ್ದ. ಇದನ್ನೇ ಬಂಡವಾಳ ಮಾಡಿಕೊಂಡ ಈ ಮಧ್ಯವರ್ತಿಗಳು, ನಿಮ್ಮ ಮನೆಯಲ್ಲಿ ದುಷ್ಟಶಕ್ತಿಗಳ ಹಾಗೂ ನಕಾರಾತ್ಮಕ ಶಕ್ತಿಯ ಹಾವಳಿಯಿದೆ, ಅದಕ್ಕೆಂದೇ ಈ ಅನಾಹುತ ನಡೆದಿದೆ ಎಂದು ಮಹಿಳೆಯಲ್ಲಿ ಭಯ ಹುಟ್ಟಿಸಿದ್ದರು.
ವಿಶೇಷ ಪೂಜೆ ನೆಪದಲ್ಲಿ ‘ಅಫ್ಸರ್ ಬಾಬಾ’ನ ಎಂಟ್ರಿ, ಆರಂಭದಲ್ಲೇ 8 ಲಕ್ಷ ರೂ. ಗುಳುಂ
ಕುಮುದಾ ಅವರ ಭಯವನ್ನೇ ಬಳಸಿಕೊಂಡ ಮಧ್ಯವರ್ತಿಗಳು, ತಮ್ಮ ಪರಿಚಯದ ಸ್ವಯಂಘೋಷಿತ ದೇವಮಾನವ ಅಫ್ಸರ್ ಪಾಷಾ ಎಂಬ ನಕಲಿ ಬಾಬಾನನ್ನು ಪರಿಚಯಿಸಿದ್ದರು. ಈ ಬಾಬಾನಿಂದ ಪೂಜೆ ಮಾಡಿಸಿದರೆ ನಿಮ್ಮ ಸಕಲ ಕಷ್ಟಗಳೂ ತೀರುತ್ತವೆ ಎಂದು ನಂಬಿಸಿದ್ದರು. ಮನೆಗೆ ಬಂದ ಅಫ್ಸರ್ ಪಾಷಾ, ಮನೆಯಲ್ಲಿದ್ದ ಕೆಟ್ಟ ಶಕ್ತಿಯನ್ನು ಓಡಿಸುತ್ತೇನೆ ಎಂದು ಹೇಳಿ ಧಾರ್ಮಿಕ ವಿಧಿವಿಧಾನಗಳ ನೆಪದಲ್ಲಿ ಆರಂಭದಲ್ಲೇ ಬರೋಬ್ಬರಿ 8 ಲಕ್ಷ ರೂಪಾಯಿ ಹಣವನ್ನು ದೋಚಿದ್ದ.
ಆರ್‌ಬಿಐನಿಂದ 500 ಕೋಟಿ ಬರುತ್ತೆ, 2.5 ಕೋಟಿ ಕೊಟ್ರೆ 10 ಕೋಟಿ ವಾಪಸ್: ಅಸಲಿ ವಂಚನೆ ಶುರು
ಇಷ್ಟಕ್ಕೇ ನಿಲ್ಲದ ನಕಲಿ ಬಾಬಾ ಮತ್ತು ಮಧ್ಯವರ್ತಿಗಳು, ಕುಮುದಾ ಅವರ ಬಳಿ ಇನ್ನೂ ದೊಡ್ಡ ಮಟ್ಟದ ಹಣ ಪೀಕಲು ಸ್ಕೀಮ್ ಹಾಕಿದ್ದರು. ತಮಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ (RBI) ಬರೋಬ್ಬರಿ 500 ಕೋಟಿ ರೂಪಾಯಿ ಬರಬೇಕಿದೆ ಎಂದು ಸುಳ್ಳು ಕಥೆ ಕಟ್ಟಿದ್ದರು. ಆರ್‌ಬಿಐ ನಿಂದ ಹಣ ಬಿಡುಗಡೆಯಾಗಲು ತುರ್ತಾಗಿ 2.5 ಕೋಟಿ ರೂ. ಬೇಕಿದ್ದು, ಈಗ ಸಾಲವಾಗಿ 2.5 ಕೋಟಿ ರೂ. ನೀಡಿದರೆ, ಆರ್‌ಬಿಐದಿಂದ ಹಣ ಬಂದ ತಕ್ಷಣ 10 ಕೋಟಿ ರೂಪಾಯಿ ವಾಪಸ್ ಕೊಡುವುದಾಗಿ ವಾಟ್ಸಾಪ್ ಮೆಸೇಜ್‌ಗಳ ಮೂಲಕ ಭರವಸೆ ನೀಡಿದ್ದರು.
ಆರ್‌ಬಿಐ ಫೋಟೋ ಸರ್ಟಿಫಿಕೇಟ್ ನಂಬಿ ಮನೆ ಮಾರಾಟ ಮಾಡಿದ ಸಂತ್ರಸ್ತೆ
ಆರ್‌ಬಿಐ ಕಳುಹಿಸಿದೆ ಎನ್ನಲಾದ ನಕಲಿ ಪ್ರಮಾಣಪತ್ರ ಹಾಗೂ ಬಾಬಾನ ಫೋಟೋ ನೋಡಿದ ಕುಮುದಾ, ಆತನ ಮಾತನ್ನು ಕಣ್ಣು ಮುಚ್ಚಿ ನಂಬಿದ್ದರು. ಕೊನೆಗೆ ಚಾಮರಾಜಪೇಟೆಯಲ್ಲಿದ್ದ ತಮ್ಮ ಮನೆ ಹಾಗೂ ಆಸ್ತಿಯನ್ನು ಬರೋಬ್ಬರಿ 8.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು. ಮನೆ ಮಾರಾಟದಿಂದ ಬಂದ ಹಣದಲ್ಲಿ ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ಕಂತುಗಳ ರೂಪದಲ್ಲಿ ನಕಲಿ ಬಾಬಾ ಅಫ್ಸರ್ ಪಾಷಾಗೆ ತಲುಪಿಸಿದ್ದರು.
ಹಣ ವಾಪಸ್ ಕೇಳಿದಾಗ ಬೆದರಿಕೆ: ಮಧ್ಯವರ್ತಿಗಳು ಎಸ್ಕೇಪ್
ತಿಂಗಳುಗಳು ಕಳೆದರೂ ಅಫ್ಸರ್ ಪಾಷಾ ಮಾತು ಕೊಟ್ಟಂತೆ 10 ಕೋಟಿ ರೂಪಾಯಿಯನ್ನೂ ಕೊಡಲಿಲ್ಲ, ಕೊಟ್ಟಿದ್ದ 2.5 ಕೋಟಿ ರೂಪಾಯಿಯನ್ನೂ ವಾಪಸ್ ನೀಡಲಿಲ್ಲ. ಸಂಶಯಗೊಂಡು ಕುಮುದಾ ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ ನಕಲಿ ಬಾಬಾ ಅಫ್ಸರ್ ಪಾಷಾ, ಹಣ ಕೇಳಿದರೆ ಜೀವ ಸಹಿತ ಉಳಿಸುವುದಿಲ್ಲ ಎಂದು ಕೊಲೆ ಬೆದರಿಕೆ ಹಾಕಲು ಶುರು ಮಾಡಿದ್ದ. ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ಅವರನ್ನು ಕೇಳಿದರೆ ಅವರಿಬ್ಬರೂ ಜಾರಿಕೊಂಡು ಯಾವುದೇ ಪ್ರತಿಕ್ರಿಯೆ ನೀಡದೆ ಕೈ ತೊಳೆದುಕೊಂಡಿದ್ದರು.
ಸಿಸಿಬಿಯಿಂದ ಸ್ವಯಂಘೋಷಿತ ದೇವಮಾನವ ಸೇರಿ ಮೂವರ ವಿರುದ್ಧ ಎಫ್‌ಐಆರ್
ತಾನು ಪಕ್ಕಾ ವಂಚನೆಗೆ ಒಳಗಾಗಿರುವುದು ಖಚಿತವಾಗುತ್ತಿದ್ದಂತೆಯೇ ಸಂತ್ರಸ್ತೆ ಕುಮುದಾ ಸಿಸಿಬಿ (CCB) ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸ್ವಯಂಘೋಷಿತ ದೇವಮಾನವ ಅಫ್ಸರ್ ಪಾಷಾ ಹಾಗೂ ಮಧ್ಯವರ್ತಿಗಳಾದ ಶಂಕರ್ ಮತ್ತು ಭರತ್ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಮೂವರೂ ಆರೋಪಿಗಳು ಸದ್ಯ ತಲೆಮರೆಸಿಕೊಂಡಿದ್ದು, ಸಿಸಿಬಿ ಪೊಲೀಸರು ಜಾಲ ಬೀಸಿ ಅವರಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.



