No menu items!
31.1 C
Munich
Friday, July 31, 2026

ಐದೇ ಐದು ನಿಮಿಷ ಮನೆ ಒಳಗೆ ಬರ್ಲಾ ? ಬೆಂಗಳೂರಿನಲ್ಲಿ ಜೆಪ್ಟೋ ಡೆಲಿವರಿ ಬಾಯ್‌ನಿಂದ ಮಹಿಳೆಗೆ ಕಿರುಕುಳ

Must read

ಇತ್ತೀಚಿನ ದಿನಗಳಲ್ಲಿ ದಿನಸಿ ಸಾಮಗ್ರಿಗಳಿಗಾಗಿ ಕ್ವಿಕ್ ಕಾಮರ್ಸ್ ಆ್ಯಪ್‌ಗಳನ್ನು ಬಳಸುವುದು ಸಾಮಾನ್ಯವಾಗಿದೆ. ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಸಾಮಗ್ರಿ ಮನೆ ಬಾಗಿಲಿಗೆ ಬಂದೇನೋ ತಲುಪುತ್ತೆ. ಆದರೆ, ಈ ಡೆಲಿವರಿ ಬಾಯ್‌ಗಳಿಂದ ಒಂಟಿ ಮಹಿಳೆಯರ ಸುರಕ್ಷತೆಗೆ ಕಂಟಕ ಎದುರಾಗುತ್ತಿರುವುದು ಈಗ ತೀವ್ರ ಆತಂಕ ಸೃಷ್ಟಿಸಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇದೀಗ ಇಂತಹದ್ದೇ ಒಂದು ತೀರಾ ಭಯಾನಕ ಘಟನೆ ಬೆಳಕಿಗೆ ಬಂದಿದ್ದು, ಪ್ರತಿಯೊಬ್ಬ ಆನ್‌ಲೈನ್ ಗ್ರಾಹಕರೂ ಬೆಚ್ಚಿಬೀಳುವಂತಾಗಿದೆ.

ನೀರಿನ ನೆಪದಲ್ಲಿ ಪೀಡಿಸಲು ಶುರುಮಾಡಿದ

ಬೆಂಗಳೂರಿನ ನಿವಾಸಿಯಾಗಿರುವ ಮಹಿಳೆಯೊಬ್ಬರು ಇತ್ತೀಚೆಗಷ್ಟೇ ‘Zepto’ ಆ್ಯಪ್ ಮೂಲಕ ದಿನಸಿ ಸಾಮಗ್ರಿಗಳನ್ನು ಆರ್ಡರ್ ಮಾಡಿದ್ದರು. ಸಾಮಗ್ರಿ ತಲುಪಿಸಲು ಬಂದ ಡೆಲಿವರಿ ಪಾರ್ಟ್ನರ್, ಆರ್ಡರ್ ಹ್ಯಾಂಡೋವರ್ ಮಾಡಿದ ಬಳಿಕ ಕುಡಿಯಲು ನೀರು ಕೇಳಿದ್ದಾನೆ. ಮಾನವೀಯತೆಯಿಂದ ಮಹಿಳೆ ಆತನಿಗೆ ಒಂದು ಬಾಟಲ್ ನೀರು ನೀಡಿ, ಆ ಬಾಟಲಿಯನ್ನು ನೀವೇ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.

5 ನಿಮಿಷ ಒಳಗೆ ಬರ್ಲಾ? ಎಂದು ಹಠ ಹಿಡಿದ ಡೆಲಿವರಿ ಬಾಯ್

ಬಾಟಲಿಯಲ್ಲಿದ್ದ ನೀರು ಕುಡಿದ ನಂತರ ಆತ ಮತ್ತೆ ವಾಪಸ್ ಬಂದು ಇನ್ನಷ್ಟು ನೀರು ಕೇಳಿದ್ದಾನೆ. ಅಷ್ಟಕ್ಕೇ ನಿಲ್ಲದೆ, ಬರೀ 5 ನಿಮಿಷ ಮನೆ ಒಳಗೆ ಬರಲು ಅವಕಾಶ ಕೊಡಿ ಎಂದು ಪದೇ ಪದೇ ಹಠ ಹಿಡಿದಿದ್ದಾನೆ. ಹೊರಗಡೆಯಲ್ಲಿ ಕುಳಿತುಕೊಳ್ಳಲು ಸಾಕಷ್ಟು ಜಾಗವಿದೆ, ಅಲ್ಲಿ ಕುಳಿತುಕೊಳ್ಳಿ ಎಂದು ಮಹಿಳೆ ಎಷ್ಟೇ ವಿನಂತಿಸಿದರೂ ಆತ ಕೇಳದೆ, ಮನೆ ಒಳಗೆ ಪ್ರವೇಶಿಸಲು ಸತತವಾಗಿ ಒತ್ತಾಯಿಸುತ್ತಲೇ ಇದ್ದದ್ದು ಮಹಿಳೆಯನ್ನು ತೀವ್ರ ಭಯಕ್ಕೆ ದೂಡಿದೆ.

ಬಾಗಿಲು ಮುಚ್ಚಿದರೂ ಬಿಡದ ಕಾಟ: ಡೋರ್ ಬೆಲ್ ಬಡಿದು ಗದ್ದಲ

ಆತನ ಈ ಅಸಭ್ಯ ವರ್ತನೆಯಿಂದ ತೀವ್ರವಾಗಿ ಹೆದರಿದ ಮಹಿಳೆ, ಕೂಡಲೇ ಜಾಗರೂಕರಾಗಿ ಮನೆಯ ಮುಖ್ಯ ಬಾಗಿಲನ್ನು ಮುಚ್ಚಿಕೊಂಡು ಒಳಗೇ ಉಳಿದಿದ್ದಾರೆ. ಆದರೆ, ಆ ಡೆಲಿವರಿ ಬಾಯ್ ಅಲ್ಲಿಂದ ಕಾಲ್ಕಿಳಿಯದೆ ಗೇಟ್ ಬಡಿದು, ಪದೇ ಪದೇ ಡೋರ್ ಬೆಲ್ ಬಾರಿಸಿ ರಂಪಾಟ ಮಾಡಿದ್ದಾನೆ. ಕೊನೆಗೆ ಮಹಿಳೆ ಒಳಗಿನಿಂದಲೇ ಗದರಿದಾಗಲೂ ಆತ ಅಲ್ಲಿಂದ ಕದಲಲಿಲ್ಲ. ಈ ಇಡೀ ಘಟನೆಯಿಂದ ಮಹಿಳೆ ಅಕ್ಷರಶಃ ನಡುಗಿಹೋಗಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡ ತಕ್ಷಣವೇ ಜೆಪ್ಟೋ ಆ್ಯಪ್ ಆಕ್ಷನ್

ತಮಗಾದ ಈ ಭಯಾನಕ ಅನುಭವವನ್ನು ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಜೆಪ್ಟೋ (Zepto) ಸಂಸ್ಥೆ, ತಕ್ಷಣವೇ ಆ ನಿರ್ದಿಷ್ಟ ಡೆಲಿವರಿ ಪಾರ್ಟ್ನರ್ ಮೇಲೆ ನಿರ್ಬಂಧ ಹೇರಿದ್ದು, ಆತನ ಐಡಿಯನ್ನು (ID) ಕಂಪ್ಲೀಟ್ ಆಗಿ ರದ್ದುಪಡಿಸಿದೆ. ಆತನ ವೈಯಕ್ತಿಕ ವಿವರಗಳು ತಕ್ಷಣಕ್ಕೆ ಸಿಗದ ಕಾರಣ ತಾವು ಪೊಲೀಸರಿಗೆ ದೂರು ನೀಡಲು ಸಾಧ್ಯವಾಗಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.

ಫ್ಲಿಪ್‌ಕಾರ್ಟ್ ಘಟನೆ ಮಾಸುವ ಮುನ್ನವೇ ಮತ್ತೊಂದು ಆಘಾತ

ಬೆಂಗಳೂರಿನಲ್ಲಿ ಡೆಲಿವರಿ ಬಾಯ್‌ಗಳಿಂದ ಇಂತಹ ದೌರ್ಜನ್ಯ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗಷ್ಟೇ ಫ್ಲಿಪ್‌ಕಾರ್ಟ್ ಡೆಲಿವರಿ ಸಿಬ್ಬಂದಿಯೊಬ್ಬ ವಾಶ್‌ರೂಮ್ ಬಳಸುವ ನೆಪದಲ್ಲಿ ಫ್ಲ್ಯಾಟ್‌ ಒಳಗೆ ಅನುಮತಿಯಿಲ್ಲದೆ ನುಗ್ಗಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿಯಲ್ಲಿ ಬಂಧಿತನಾಗಿದ್ದ. ಆ ಘಟನೆ ಕಣ್ಣಮುಂದೆ ಹಸಿಯಾಗಿರುವಾಗಲೇ, ಈಗ ಜೆಪ್ಟೋ ಡೆಲಿವರಿ ಬಾಯ್ ಮಾಡಿರುವ ಈ ಕೃತ್ಯ ನಗರದಾದ್ಯಂತ ಮಹಿಳೆಯರ ಸುರಕ್ಷತೆಯ ಕುರಿತು ಸಾಲು ಸಾಲು ಪ್ರಶ್ನೆಗಳನ್ನು ಎತ್ತುವಂತೆ ಮಾಡಿದೆ.

ಗ್ರಾಹಕರ ಸುರಕ್ಷತೆ ಬಗ್ಗೆ ಕಂಪನಿಗಳ ಜವಾಬ್ದಾರಿ ಏನು?

ಬೆಂಗಳೂರು, ದೆಹಲಿ, ಮುಂಬೈ, ಪುಣೆಯಂತಹ ದೊಡ್ಡ ನಗರಗಳಲ್ಲಿ ದಿನದಿಂದ ದಿನಕ್ಕೆ ಇಂತಹ ಘಟನೆಗಳು ಹೆಚ್ಚುತ್ತಿರುವುದು ಆನ್‌ಲೈನ್ ಶಾಪಿಂಗ್ ಆ್ಯಪ್‌ಗಳ ಭದ್ರತಾ ಲೋಪವನ್ನು ಎತ್ತಿ ತೋರಿಸುತ್ತಿದೆ. ಡೆಲಿವರಿ ಪಾರ್ಟ್ನರ್‌ಗಳನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ಸೂಕ್ತ ಹಿನ್ನೆಲೆ ತನಿಖೆ (Background Verification) ನಡೆಸುತ್ತಿದ್ದಾರೆಯೇ? ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಮನೆಯಲ್ಲಿ ಒಬ್ಬರೇ ಇರುವಾಗ ಅಪರಿಚಿತ ಡೆಲಿವರಿ ಸಿಬ್ಬಂದಿಯೊಂದಿಗೆ ಎಚ್ಚರಿಕೆಯಿಂದ ಇರುವುದು ಒಳಿತು ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

- Advertisement -spot_img

More articles

- Advertisement -spot_img

Latest article