ಮಳೆಯ ಅಬ್ಬರ: ಕೊಯ್ನಾ ಜಲಾಶಯದಿಂದ 34 ಸಾವಿರ ಕ್ಯೂಸೆಕ್ ನೀರು ಬಿಡುಗಡೆ, ಕೃಷ್ಣಾ ನದಿ ಪಾತ್ರದಲ್ಲಿ ಪ್ರವಾಹ ಭೀತಿ
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯ ಅಬ್ಬರ ಮುಂದುವರಿದಿರುವ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ಸುರಕ್ಷತಾ ದೃಷ್ಟಿಯಿಂದ ಜಲಾಶಯಗಳಿಂದ ನೀರನ್ನು ನದಿಗಳಿಗೆ ಬಿಡುಗಡೆ ಮಾಡಲಾಗುತ್ತಿದ್ದು, ಇದರ ಪರಿಣಾಮ ಕೃಷ್ಣಾ ನದಿ ಹಾಗೂ ಅದರ ಉಪನದಿಗಳಲ್ಲಿ ನೀರಿನ ಮಟ್ಟ ವೇಗವಾಗಿ ಏರಿಕೆಯಾಗಿದೆ. ಇದರಿಂದ ನದಿ ತೀರದ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಮಹಾರಾಷ್ಟ್ರದ ಸಾತಾರಾ ಜಿಲ್ಲೆಯಲ್ಲಿರುವ ಪ್ರಮುಖ ಕೊಯ್ನಾ ಜಲಾಶಯಕ್ಕೆ ಪ್ರಸ್ತುತ ಸುಮಾರು 49 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದಿಂದ 34 ಸಾವಿರ ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಒಟ್ಟು 105 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಈ ಜಲಾಶಯದಲ್ಲಿ ಈಗಾಗಲೇ 91 ಟಿಎಂಸಿ ನೀರು ಸಂಗ್ರಹವಾಗಿದೆ.
ಇದರ ಜೊತೆಗೆ ಮಹಾರಾಷ್ಟ್ರದ ರಾಧಾನಗರಿ, ಪಾಟಗಾಂವ ಹಾಗೂ ಧೂಮ ಜಲಾಶಯಗಳು ಕೂಡ ಬಹುತೇಕ ಭರ್ತಿಯ ಹಂತ ತಲುಪಿದ್ದು, ಅಲ್ಲಿಂದಲೂ ನಿರಂತರವಾಗಿ ನೀರನ್ನು ಹೊರಬಿಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾದರೆ ಜಲಾಶಯಗಳಿಂದ ಇನ್ನಷ್ಟು ನೀರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ನಿರಂತರ ಮಳೆಯ ಪರಿಣಾಮವಾಗಿ ಕೃಷ್ಣಾ ನದಿಯ ಪ್ರಮುಖ ಉಪನದಿಗಳಾದ ದೂದಗಂಗಾ, ವೇದಗಂಗಾ, ಹೀರಣ್ಯಕೇಶಿ ಹಾಗೂ ಘಟಪ್ರಭಾ ನದಿಗಳಲ್ಲೂ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆ ಹೆಚ್ಚಿದ್ದು, ನದಿ ತೀರದ ನಿವಾಸಿಗಳು ಎಚ್ಚರಿಕೆಯಿಂದಿರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಅಗತ್ಯವಿದ್ದಲ್ಲಿ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ.



