ಬೆಂಗಳೂರಿನಿಂದ ತಮಿಳುನಾಡಿಗೆ ಸಾಗಿಸುತ್ತಿದ್ದ ₹9 ಕೋಟಿ ನಗದು ಸೀಜ್: ಇಬ್ಬರು ವಶಕ್ಕೆ
ಬೆಂಗಳೂರು: ಬೆಂಗಳೂರಿನಿಂದ ತಮಿಳುನಾಡಿಗೆ ಅಕ್ರಮವಾಗಿ ಅಪಾರ ಪ್ರಮಾಣದ ನಗದು ಸಾಗಿಸುತ್ತಿದ್ದ ಆರೋಪದ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ಹಾಗೂ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ₹9 ಕೋಟಿ ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಮೂಲದ ಜ್ಯುವೆಲ್ಲರಿ ಅಂಗಡಿಗೆ ಸಂಬಂಧಿಸಿದ ಸಚಿನ್ (42) ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.
ವಶಕ್ಕೆ ಪಡೆದ ಇಬ್ಬರು ಆರೋಪಿಗಳನ್ನು ಮುಂದಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಎಂ. ನಾರಾಯಣ್ ತಿಳಿಸಿದ್ದಾರೆ.
ಆಗಸ್ಟ್ 18ರಂದು ರಾತ್ರಿ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರು ಕಡೆಗೆ ‘KL 20 T 8629’ ನೋಂದಣಿ ಸಂಖ್ಯೆಯ ಹ್ಯುಂಡೈ ಕ್ರೇಟಾ ಕಾರಿನಲ್ಲಿ ಭಾರೀ ಪ್ರಮಾಣದ ನಗದು ಸಾಗಿಸಲಾಗುತ್ತಿದೆ ಎಂಬ ಬಗ್ಗೆ ಐಟಿ ವಿಭಾಗದ ಉಪ ನಿರ್ದೇಶಕ ಜಗದೀಶ್ ಅವರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು.
ಮಾಹಿತಿ ದೊರೆತ ಕೂಡಲೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದು, ಕಾರನ್ನು ತಡೆದು ಪರಿಶೀಲನೆ ನಡೆಸುವಂತೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರಿಗೆ ಸೂಚನೆ ನೀಡಿದ್ದರು.
ಅದರಂತೆ, ಆಗಸ್ಟ್ 18ರ ರಾತ್ರಿ ಸುಮಾರು 10.30ರ ವೇಳೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ನೈಟ್ ಬೀಟ್ ಸಿಬ್ಬಂದಿ ಹೊಸೂರು ರಸ್ತೆಯ ಬಿಇಟಿಎಲ್ ಟೋಲ್ ದಾಟಿದ ಬಳಿಕ ಸಿಗ್ನಲ್ ಬಳಿ ಅನುಮಾನಾಸ್ಪದವಾಗಿ ತೆರಳುತ್ತಿದ್ದ ಕಾರನ್ನು ತಡೆದಿದ್ದಾರೆ.
ಕಾರಿನಲ್ಲಿ ಇಬ್ಬರು ವ್ಯಕ್ತಿಗಳು ಇದ್ದು, ಪರಿಶೀಲನೆ ನಡೆಸಿದಾಗ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ. ಬಳಿಕ ಕಾರು ಹಾಗೂ ಅದರಲ್ಲಿದ್ದ ಇಬ್ಬರನ್ನು ಐಟಿ ಅಧಿಕಾರಿಗಳ ತಂಡಕ್ಕೆ ಹಸ್ತಾಂತರಿಸಲಾಗಿದೆ.
ವಶಪಡಿಸಿಕೊಂಡಿರುವ ₹9 ಕೋಟಿ ಹಣ ಎಲ್ಲಿಂದ ಬಂದಿದೆ? ಇದನ್ನು ಯಾರಿಗೆ ತಲುಪಿಸಲು ಸಾಗಿಸಲಾಗುತ್ತಿತ್ತು? ಹಣಕ್ಕೆ ಸೂಕ್ತ ದಾಖಲೆಗಳಿವೆಯೇ ಎಂಬುದರ ಕುರಿತು ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.
ಪ್ರಕರಣದಲ್ಲಿ ವಶಕ್ಕೆ ಪಡೆದಿರುವ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದ್ದು, ನಗದು ಸಾಗಾಟದ ಹಿಂದೆ ಮತ್ತಷ್ಟು ವ್ಯಕ್ತಿಗಳು ಅಥವಾ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ.



