ಪುಟ್ಪಾತ್ ತೆರವು ಹೆಸರಿನಲ್ಲಿ ದೇವಸ್ಥಾನ ಕೆಡವಿದ ಜಿಬಿಎ: ಸ್ಥಳೀಯರ ಆಕ್ರೋಶ
ಬೆಂಗಳೂರು: ಪುಟ್ಪಾತ್ ತೆರವು ಕಾರ್ಯಾಚರಣೆ ಹೆಸರಿನಲ್ಲಿ ಹತ್ತಾರು ವರ್ಷಗಳ ಹಳೆಯ ದೇವಸ್ಥಾನವನ್ನು ಏಕಾಏಕಿ ತೆರವುಗೊಳಿಸಿರುವ ಘಟನೆ ನಗರದ ಮಾರತ್ಹಳ್ಳಿ ಸಮೀಪದ AECS ಲೇಔಟ್ನಲ್ಲಿ ನಡೆದಿದೆ.ನಿನ್ನೆ ಮಧ್ಯಾಹ್ನ ಜಿಬಿಎ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಜೆಸಿಬಿ ಮೂಲಕ ದೇವಸ್ಥಾನವನ್ನು ತೆರವುಗೊಳಿಸಿದ್ದಾರೆ. ದೇವಸ್ಥಾನ ತೆರವುಗೊಳಿಸುವ ಮುನ್ನ ಸ್ಥಳೀಯರಿಗೆ ಸೂಕ್ತ ಕಾಲಾವಕಾಶ ನೀಡಬೇಕು ಎಂದು ನಿವಾಸಿಗಳು ಮನವಿ ಮಾಡಿದ್ದರೂ, ಅಧಿಕಾರಿಗಳು ಮನವಿಗೆ ಸ್ಪಂದಿಸದೆ ತೆರವು ಕಾರ್ಯಾಚರಣೆ ನಡೆಸಿದ್ದಾರೆ ಎನ್ನಲಾಗಿದೆ.ಹತ್ತಾರು ವರ್ಷಗಳಿಂದ ಸ್ಥಳೀಯರ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ್ದ ದೇವಸ್ಥಾನವನ್ನು ಏಕಾಏಕಿ ಕೆಡವಿರುವುದಕ್ಕೆ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಧಾರ್ಮಿಕ ಭಾವನೆಗೆ ಧಕ್ಕೆ?ಪುಟ್ಪಾತ್ ತೆರವು ಮಾಡುವುದು ಅಗತ್ಯವಾಗಿದ್ದರೂ, ಧಾರ್ಮಿಕ ಸ್ಥಳವನ್ನು ತೆರವುಗೊಳಿಸುವ ಮುನ್ನ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಬಿಎ ಅಧಿಕಾರಿಗಳ ಈ ನಡೆಗೆ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ದೇವಸ್ಥಾನ ತೆರವು ಕಾರ್ಯಾಚರಣೆ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.



