ಕುಡಿದ ಮತ್ತಿನಲ್ಲಿ ಪುಂಡರ ಅಟ್ಟಹಾಸ: ಲಾರಿ ಚಾಲಕನ ಮೇಲೆ ಹಲ್ಲೆ
ಬೆಂಗಳೂರು: ಕುಡಿದ ಮತ್ತಿನಲ್ಲಿ ಬಂದಿದ್ದ ಪುಂಡರು ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ, ಲಾರಿಯ ಗ್ಲಾಸ್‌ಗಳನ್ನು ಪುಡಿಗೈದಿರುವ ಘಟನೆ ಕೆ.ಆರ್.ಪುರ ಕೆರೆ ಬಳಿ ನಡೆದಿದೆ.
ಹೊಸಕೋಟೆಯಿಂದ ಕೆ.ಆರ್.ಪುರದ ಆನಂದಪುರಕ್ಕೆ ಸರಕು ತುಂಬಿಕೊಂಡು ತೆರಳುತ್ತಿದ್ದ ಲಾರಿ, ಕೆ.ಆರ್.ಪುರ ಕೆರೆ ಬಳಿ ಯುಟರ್ನ್ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ.
ಈ ವೇಳೆ ನಾಲ್ಕೈದು ದ್ವಿಚಕ್ರ ವಾಹನಗಳಲ್ಲಿ ಬಂದಿದ್ದ ಪುಂಡರು ಲಾರಿಯನ್ನು ಅಡ್ಡಗಟ್ಟಿ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಬಳಿಕ ಏಕಾಏಕಿ ಲಾರಿ ಚಾಲಕನ ಮೇಲೆ ಹಲ್ಲೆ ನಡೆಸಿ, ಲಾರಿಯ ಗ್ಲಾಸ್‌ಗಳನ್ನು ಪುಡಿಪುಡಿ ಮಾಡಿದ್ದಾರೆ.
ಆನಂದಪುರದ ಮಂಜುನಾಥ್ ಅವರಿಗೆ ಸೇರಿದ ಲಾರಿಯಾಗಿದ್ದು, ರಾತ್ರಿ ಸರಕು ತುಂಬಿಕೊಂಡು ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಪುಂಡರ ಕೃತ್ಯದಿಂದ ಲಾರಿ ಚಾಲಕ ಆತಂಕಕ್ಕೊಳಗಾಗಿದ್ದು, ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.



