ಮಕ್ಕಳಾಗದ ಸಮಸ್ಯೆಗೆ ಟೆಸ್ಟ್ ಮಾಡಿಸಲು ಹೋದ ವ್ಯಕ್ತಿಯ ದೇಹದಲ್ಲಿ ಗರ್ಭಕೋಶ ಪತ್ತೆ!
ನವದೆಹಲಿ: ಮಕ್ಕಳಾಗದ ಕಾರಣ ಸಂತಾನೋತ್ಪತ್ತಿ ಪರೀಕ್ಷೆಗೆ ತೆರಳಿದ್ದ 24 ವರ್ಷದ ಯುವಕನ ದೇಹದಲ್ಲಿ ಸಂಪೂರ್ಣವಾಗಿ ಬೆಳೆದ ಹಾಗೂ ಆರೋಗ್ಯಕರ ಗರ್ಭಕೋಶ ಪತ್ತೆಯಾಗಿರುವ ಅಪರೂಪದ ಪ್ರಕರಣವೊಂದು ದೆಹಲಿಯಲ್ಲಿ ಬೆಳಕಿಗೆ ಬಂದಿದೆ.
ವೈದ್ಯಕೀಯ ತಪಾಸಣೆ ವೇಳೆ ಯುವಕನ ದೇಹದ ಒಳಭಾಗದಲ್ಲಿ ಗರ್ಭಕೋಶ ಇರುವುದಲ್ಲದೆ, ಎರಡೂ ವೃಷಣಗಳು ಹೊಟ್ಟೆಯೊಳಗೇ ಇರುವುದೂ ಪತ್ತೆಯಾಗಿದೆ. ಹೊರನೋಟಕ್ಕೆ ಯುವಕ ಸಾಮಾನ್ಯ ಪುರುಷನ ದೈಹಿಕ ಲಕ್ಷಣಗಳನ್ನು ಹೊಂದಿದ್ದರೂ, ಸಂತಾನೋತ್ಪತ್ತಿ ಸಮಸ್ಯೆ ಹಿನ್ನೆಲೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈ ಅಪರೂಪದ ಸ್ಥಿತಿ ಪತ್ತೆಯಾಗಿದೆ.
ತಪಾಸಣೆ ವೇಳೆ ವೃಷಣಕೋಶದಲ್ಲಿ ಎರಡೂ ವೃಷಣಗಳು ಇರಲಿಲ್ಲ. ವೀರ್ಯ ಪರೀಕ್ಷೆ ನಡೆಸಿದಾಗಲೂ ವೀರ್ಯಾಣುಗಳು ಪತ್ತೆಯಾಗಿರಲಿಲ್ಲ. ಹೀಗಾಗಿ ವೈದ್ಯರು ಕ್ರೋಮೋಸೋಮ್ ಪರೀಕ್ಷೆ, ಹಾರ್ಮೋನ್ ಪರೀಕ್ಷೆ ಹಾಗೂ ಸ್ಕ್ಯಾನಿಂಗ್ಗೆ ಸೂಚಿಸಿದ್ದರು.
ಕ್ರೋಮೋಸೋಮ್ ಪರೀಕ್ಷೆಯಲ್ಲಿ ಯುವಕನಿಗೆ ಸಾಮಾನ್ಯ XY ಪುರುಷ ಕ್ರೋಮೋಸೋಮ್ಗಳು ಇರುವುದು ದೃಢಪಟ್ಟಿದೆ. ಆದರೆ ಅಲ್ಟ್ರಾಸೌಂಡ್ ಮತ್ತು MRI ಸ್ಕ್ಯಾನ್ನಲ್ಲಿ ದೇಹದೊಳಗೆ ಸಂಪೂರ್ಣವಾಗಿ ಬೆಳೆದ ಗರ್ಭಕೋಶ ಇರುವುದು ಪತ್ತೆಯಾಗಿದೆ. ಜೊತೆಗೆ ಎರಡೂ ವೃಷಣಗಳು ಹೊಟ್ಟೆಯೊಳಗೇ ಇದ್ದವು ಎಂದು ವೈದ್ಯರು ತಿಳಿಸಿದ್ದಾರೆ.
ಪುರುಷ ಸಂತಾನೋತ್ಪತ್ತಿ ಆರೋಗ್ಯ ತಜ್ಞರ ಪ್ರಕಾರ, ಈ ಸ್ಥಿತಿಯನ್ನು ‘ಪರ್ಸಿಸ್ಟಂಟ್ ಮುಲ್ಲೇರಿಯನ್ ಡಕ್ಟ್ ಸಿಂಡ್ರೋಮ್’ (Persistent Müllerian Duct Syndrome) ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಅಪರೂಪದ ಲೈಂಗಿಕ ಬೆಳವಣಿಗೆಗೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು, ಪುರುಷ ಕ್ರೋಮೋಸೋಮ್ಗಳು ಹಾಗೂ ಬಾಹ್ಯ ಪುರುಷ ಜನನಾಂಗಗಳಿದ್ದರೂ ದೇಹದೊಳಗೆ ಗರ್ಭಕೋಶ ಮತ್ತು ಕೆಲವೊಮ್ಮೆ ಫಾಲೋಪಿಯನ್ ಟ್ಯೂಬ್ಗಳಂತಹ ರಚನೆಗಳು ಉಳಿದುಕೊಳ್ಳುತ್ತವೆ.



