ಹೆದ್ದಾರಿಯಲ್ಲಿ ಭೀಕರ ಅಪಘಾತ: ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಬೆಂಗಳೂರು ಗ್ರಾಮಾಂತರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ಚಪ್ಪರಕಲ್ಲು ಗ್ರಾಮದ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓರ್ವ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೊಸಕೋಟೆ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ 648ರಲ್ಲಿ ಈ ಅಪಘಾತ ಸಂಭವಿಸಿದೆ. ಒಂದು ರಸ್ತೆಯಲ್ಲಿ ಬರುತ್ತಿದ್ದ ಹೋಂಡಾ ಸಿಟಿ ಕಾರು ನಿಯಂತ್ರಣ ತಪ್ಪಿ ಡಿವೈಡರ್ ದಾಟಿ, ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಆಲ್ಟೋ ಕಾರಿನಲ್ಲಿದ್ದ ವೆಂಕಟೇಶಪ್ಪ (75) ಮೃತಪಟ್ಟಿದ್ದಾರೆ. ಮೃತರು ಶಿಡ್ಲಘಟ್ಟ ಮೂಲದವರು ಎಂದು ತಿಳಿದುಬಂದಿದೆ.
ಇನ್ನು ಮುನಿಅಕ್ಕಯಮ್ಮ, ಮಾಲಾ ಹಾಗೂ ಪವನ್ ಕುಮಾರ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಗಾಯಾಳುಗಳನ್ನು ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.



