No menu items!
15.1 C
Munich
Thursday, September 17, 2026

ಪ್ರಧಾನಿ ಮೋದಿ 76ನೇ ಹುಟ್ಟುಹಬ್ಬಕ್ಕೆ ಕಾಶಿಯಿಂದ ವಡ್ನಗರ್ʼವರೆಗೆ ‘ಸೇವಾ ಸಂಕಲ್ಪ’ ಬೈಕ್ ಯಾತ್ರೆ

Must read

ಪ್ರಧಾನಿ ಮೋದಿ 76ನೇ ಹುಟ್ಟುಹಬ್ಬಕ್ಕೆ ಕಾಶಿಯಿಂದ ವಡ್ನಗರ್ʼವರೆಗೆ ‘ಸೇವಾ ಸಂಕಲ್ಪ’ ಬೈಕ್ ಯಾತ್ರೆ

ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬ ಹಾಗೂ ಸಾರ್ವಜನಿಕ ಜೀವನದ 25 ವರ್ಷಗಳನ್ನು ಗುರುತಿಸುವ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ‘ಸೇವಾ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ದೊರೆತಿದೆ. ಇದರ ಭಾಗವಾಗಿ ಪ್ರಧಾನಿ ಮೋದಿ ಅವರ ಸಂಸದೀಯ ಕ್ಷೇತ್ರ ವಾರಾಣಸಿಯಿಂದ ಹುಟ್ಟೂರು ಗುಜರಾತ್ನ ವಡ್ನಗರ್ವರೆಗೆ ‘ಸೇವಾ ಸಂಕಲ್ಪ’ ಬೈಕ್ ಯಾತ್ರೆ ಆರಂಭವಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಾರಾಣಸಿಯಲ್ಲಿ ಯಾತ್ರೆಗೆ ಹಸಿರು ನಿಶಾನೆ ತೋರಿದರು.
ಈ ಯಾತ್ರೆಯಲ್ಲಿ ಸುಮಾರು 500 ಯುವ ಬೈಕರ್ಗಳು ಭಾಗವಹಿಸುತ್ತಿದ್ದು, 20 ಮಾರ್ಗಗಳ ಮೂಲಕ 10 ರಾಜ್ಯಗಳು, 193 ಜಿಲ್ಲೆಗಳು, 773 ತಾಲೂಕುಗಳು ಹಾಗೂ 1,159 ಗ್ರಾಮಗಳನ್ನು ಸಂಪರ್ಕಿಸಲಿದ್ದಾರೆ. ಒಟ್ಟಾರೆ ಸುಮಾರು 40 ಸಾವಿರ ಕಿಲೋಮೀಟರ್ ದೂರವನ್ನು ಕ್ರಮಿಸುವ ಈ ಯಾತ್ರೆ ಅಕ್ಟೋಬರ್ 7ರಂದು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಯಾತ್ರೆ ಆರಂಭಕ್ಕೂ ಮುನ್ನ 51 ಸೇವಾ ಯಾತ್ರಿಕರು ಕಾಶಿಯ ಲಲಿತಾ ಘಾಟ್ನಲ್ಲಿ ಗಂಗಾಜಲ ಸಂಗ್ರಹಿಸಿದರು. ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಗಂಗಾಜಲದಿಂದ ಜಲಾಭಿಷೇಕ ನೆರವೇರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಆಯುರಾರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಕಾಶಿಯಿಂದ ಹೊರಟ ಬೈಕರ್ಗಳು ಗಂಗಾಜಲವನ್ನು ವಡ್ನಗರ್ನ ಹಾಟಕೇಶ್ವರ ಮಹಾದೇವ ದೇವಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆ. ಇದೇ ವೇಳೆ ವಡ್ನಗರ್ನಿಂದ ವಾರಾಣಸಿಯತ್ತ ಮತ್ತೊಂದು ಬೈಕ್ ಯಾತ್ರೆ ಕೂಡ ಆರಂಭವಾಗಿದ್ದು, ಗುಜರಾತ್ನ ನದಿಗಳ ಪವಿತ್ರ ಜಲವನ್ನು ಕಾಶಿಗೆ ಕೊಂಡೊಯ್ಯಲಾಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ವಡ್ನಗರ್ನಿಂದ ಹೊರಡುವ ಯಾತ್ರೆಗೆ ಚಾಲನೆ ನೀಡಿದರು.
ವಾರಾಣಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಹಾಗೂ ಬ್ರಜೇಶ್ ಪಾಠಕ್ ಸೇರಿದಂತೆ ಹಲವು ಎನ್ಡಿಎ ನಾಯಕರು ಭಾಗವಹಿಸಿದರು.
ಯಾತ್ರೆಯ ಮಾರ್ಗದುದ್ದಕ್ಕೂ ಕೇವಲ ಬೈಕ್ ರ್ಯಾಲಿ ನಡೆಸುವುದಷ್ಟೇ ಅಲ್ಲದೆ, ಗಿಡ ನೆಡುವುದು, ಸ್ವಚ್ಛತಾ ಅಭಿಯಾನ, ಕ್ಷಯರೋಗ ಮುಕ್ತ ಭಾರತ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸುವಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಇನ್ನು ವಾರಾಣಸಿಯ ರುದ್ರಾಕ್ಷ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನವನ್ನು ಬಿಂಬಿಸುವ ಛಾಯಾಚಿತ್ರ ಪ್ರದರ್ಶನವನ್ನೂ ಆಯೋಜಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಮಂತ್ರಿಯಾಗಿ ಅವರು ಕಳೆದ 25 ವರ್ಷಗಳಲ್ಲಿ ಸಾರ್ವಜನಿಕ ಜೀವನದಲ್ಲಿ ನಿರ್ವಹಿಸಿದ ಪಾತ್ರವನ್ನು ಬಿಂಬಿಸುವ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.
‘ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ ದೇಶಾದ್ಯಂತ ವಿವಿಧ ಸೇವಾ ಹಾಗೂ ಜನಸಂಪರ್ಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಸೆಪ್ಟೆಂಬರ್ 17ರಿಂದ ಆರಂಭವಾಗಿರುವ ಅಭಿಯಾನವು ಅಕ್ಟೋಬರ್ ತಿಂಗಳವರೆಗೆ ನಡೆಯಲಿದೆ.

- Advertisement -spot_img

More articles

- Advertisement -spot_img

Latest article