ಚೌಡೇಶ್ವರಿ ಪೂಜೆ ನೆಪದಲ್ಲಿ ₹40 ಲಕ್ಷದ ಒಡವೆ ಎಗರಿಸಿದ ನಕಲಿ ಜ್ಯೋತಿಷಿ: ನಂಬಿಸಲು ಎಐ ವಿಡಿಯೋ ಡ್ರಾಮಾ, ಖತರ್ನಾಕ್ ಗಿಮಿಕ್ ಬಯಲು!
ಬೆಂಗಳೂರು: ಚೌಡೇಶ್ವರಿ ದೇವಿಗೆ ಪೂಜೆ ಮಾಡುವ ನೆಪದಲ್ಲಿ ನಕಲಿ ಜ್ಯೋತಿಷಿಯೊಬ್ಬ ಮಹಿಳೆಯಿಂದ ಬರೋಬ್ಬರಿ ₹40 ಲಕ್ಷ ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬ್ಯಾಟರಾಯನಪುರ ನಿವಾಸಿ 62 ವರ್ಷದ ಶಾಂತಮ್ಮ ವಂಚನೆಗೊಳಗಾದ ಮಹಿಳೆಯಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಯ ಫುಟ್ಪಾತ್ನಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ವೆಂಕಟೇಶ್ ಎಂಬಾತ ವಂಚನೆ ನಡೆಸಿರುವ ಆರೋಪ ಕೇಳಿಬಂದಿದೆ.
ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ಶಾಂತಮ್ಮ ಆಗಾಗ ವಿಕ್ಟೋರಿಯಾ ಆಸ್ಪತ್ರೆಗೆ ತೆರಳುತ್ತಿದ್ದರು. ಇದೇ ವೇಳೆ ಜ್ಯೋತಿಷಿ ವೆಂಕಟೇಶ್ನನ್ನು ಭೇಟಿಯಾಗಿದ್ದರು. ತಮ್ಮ ಆರೋಗ್ಯದ ಬಗ್ಗೆ ಭವಿಷ್ಯ ಕೇಳಿದಾಗ, ಕೆಲವೇ ದಿನಗಳಲ್ಲಿ ಆರೋಗ್ಯ ಸುಧಾರಿಸಲಿದೆ ಎಂದು ವೆಂಕಟೇಶ್ ಹೇಳಿದ್ದ ಎನ್ನಲಾಗಿದೆ. ಬಳಿಕ ಶಾಂತಮ್ಮ ಅವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ಹಿನ್ನೆಲೆಯಲ್ಲಿ ಜ್ಯೋತಿಷಿಯ ಮಾತಿನ ಮೇಲೆ ನಂಬಿಕೆ ಹೆಚ್ಚಾಗಿತ್ತು.
ನಂತರ ಮಗನ ಕುಡಿತದ ಚಟ ಹಾಗೂ ಮಗಳ ಮದುವೆ ವಿಚಾರವಾಗಿ ಭವಿಷ್ಯ ಕೇಳಲು ಮತ್ತೆ ಜ್ಯೋತಿಷಿಯನ್ನು ಹುಡುಕಿಕೊಂಡು ಶಾಂತಮ್ಮ ಬಂದಿದ್ದರು. ಆದರೆ ವೆಂಕಟೇಶ್ ಸಿಗದ ಹಿನ್ನೆಲೆಯಲ್ಲಿ ಆಟೋ ಚಾಲಕನೊಬ್ಬನ ಬಳಿ ತಮ್ಮ ಮೊಬೈಲ್ ನಂಬರ್ ನೀಡಿ ಹೋಗಿದ್ದರು. ಈ ನಂಬರ್ ಪಡೆದುಕೊಂಡ ವೆಂಕಟೇಶ್, ಬಳಿಕ ಶಾಂತಮ್ಮ ಅವರಿಗೆ ಕರೆ ಮಾಡಿದ್ದಾನೆ ಎನ್ನಲಾಗಿದೆ.
ನಂತರ ಬ್ಯಾಟರಾಯನಪುರದಲ್ಲಿರುವ ಶಾಂತಮ್ಮ ಅವರ ಮನೆಗೆ ಬಂದ ವೆಂಕಟೇಶ್, ನಿಂಬೆಹಣ್ಣು ನೀಡಿ ಚೌಡೇಶ್ವರಿ ದೇವಿಗೆ ಪೂಜೆ ಮಾಡಬೇಕು ಎಂದು ಹೇಳಿದ್ದಾನೆ. ಮನೆಯಲ್ಲಿರುವ ಚಿನ್ನಾಭರಣಗಳಿಗೆ ಪೂಜೆ ಮಾಡಿದರೆ ಕುಟುಂಬಕ್ಕೆ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದಾನೆ. ಅಲ್ಲದೇ ಪ್ರತಿ ಅಮಾವಾಸ್ಯೆ ದಿನ ಮನೆಗೆ ಬಂದು ಒಡವೆಗಳನ್ನು ಪಡೆದು ಪೂಜೆ ಮಾಡುವುದಾಗಿ ಹೇಳಿದ್ದ ಎನ್ನಲಾಗಿದೆ.
ಜ್ಯೋತಿಷಿಯ ಮಾತನ್ನು ನಂಬಿದ ಶಾಂತಮ್ಮ, ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಆತನಿಗೆ ನೀಡುತ್ತಿದ್ದರು. ಹೀಗೆ ಸುಮಾರು ಒಂದು ವರ್ಷದಿಂದ ಹಂತ ಹಂತವಾಗಿ ಬರೋಬ್ಬರಿ ₹40 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವೆಂಕಟೇಶ್ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಳೆದ ಆಗಸ್ಟ್ 19ರಂದು ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಮ್ಮ ತಮ್ಮ ಒಡವೆಗಳನ್ನು ವಾಪಸ್ ನೀಡುವಂತೆ ವೆಂಕಟೇಶ್ಗೆ ಕೇಳಿದ್ದಾರೆ. ಆದರೆ ಒಡವೆಗಳನ್ನು ವಾಪಸ್ ಕೇಳಿದ ದಿನವೇ ಆತ ಹೊಸ ಕಥೆ ಕಟ್ಟಿದ್ದಾನೆ ಎನ್ನಲಾಗಿದೆ.
ತನಗೆ ಅಪಘಾತವಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಶಾಂತಮ್ಮ ಅವರನ್ನು ನಂಬಿಸಲು ಪ್ರಯತ್ನಿಸಿದ್ದ ವೆಂಕಟೇಶ್, ಅಪಘಾತ ಸಂಭವಿಸಿರುವಂತೆ ಕಾಣುವ AI ವಿಡಿಯೋವೊಂದನ್ನು ಕಳುಹಿಸಿದ್ದಾನೆ. ಬಳಿಕ ತಾನು ಬದುಕುಳಿಯುವುದೇ ಅನುಮಾನ ಎಂಬ ರೀತಿಯಲ್ಲಿ ಮಾತನಾಡಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಜ್ಯೋತಿಷಿಯ ಮಾತಿನಿಂದ ಆತಂಕಗೊಂಡ ಶಾಂತಮ್ಮ, ಈ ವಿಚಾರವನ್ನು ತಮ್ಮ ಮಗಳ ಬಳಿ ತಿಳಿಸಿದ್ದಾರೆ. ಬಳಿಕ ವಿಡಿಯೋವನ್ನು ಪರಿಶೀಲಿಸಿದಾಗ ಅದು ನೈಜ ಅಪಘಾತದ ದೃಶ್ಯವಲ್ಲ, AI ಮೂಲಕ ಸೃಷ್ಟಿಸಿರುವ ವಿಡಿಯೋ ಎಂಬುದು ಗೊತ್ತಾಗಿದೆ.
ನಂತರ ವೆಂಕಟೇಶ್ಗೆ ಕರೆ ಮಾಡಲು ಪ್ರಯತ್ನಿಸಿದರೂ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಶಾಂತಮ್ಮ, ತಾವು ವಂಚನೆಗೊಳಗಾಗಿರುವ ಬಗ್ಗೆ ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯಾಗಿರುವ ವೆಂಕಟೇಶ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.



