No menu items!
9.4 C
Munich
Saturday, September 26, 2026

ಸೌಜನ್ಯ ಪ್ರಕರಣ; ಮರುತನಿಖೆಗೆ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳ SIT ರಚನೆ

Must read

ಸೌಜನ್ಯ ಪ್ರಕರಣ; ಮರುತನಿಖೆಗೆ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐವರು ಅಧಿಕಾರಿಗಳ SIT ರಚನೆ

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ 14 ವರ್ಷಗಳ ಬಳಿಕ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದ ಬೆನ್ನಲ್ಲೇ ಕರ್ನಾಟಕ ಸರ್ಕಾರ ಐವರು ಹಿರಿಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ.
ಐಜಿಪಿ ಎನ್. ಶಶಿಕುಮಾರ್ ಅವರನ್ನು SIT ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಹಾಗೂ ಡಿಐಜಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ, ಗುಪ್ತಚರ ವಿಭಾಗದ ಎಸ್ಪಿ ನಿಶಾ ಜೇಮ್ಸ್, ಸಿಐಡಿ ಎಸ್ಪಿ ಲೋಕೇಶ್ ಜಗಲಸಾರ್ ಹಾಗೂ ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್ಪಿ ವೆಂಕಟೇಶ್ ಪ್ರಸನ್ನ ತಂಡದ ಸದಸ್ಯರಾಗಿದ್ದಾರೆ.
ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ಸೂಚನೆ
ನ್ಯಾಯಮೂರ್ತಿಗಳಾದ ಸಂಜಯ್ ಕುಮಾರ್ ಮತ್ತು ಸಂಜೀವ್ ಸಚ್ದೇವ ಅವರಿದ್ದ ಸುಪ್ರೀಂ ಕೋರ್ಟ್ ಪೀಠ ಸೆಪ್ಟೆಂಬರ್ 21ರಂದು ಪ್ರಕರಣದ ಮರುತನಿಖೆಗೆ ಆದೇಶ ನೀಡಿದೆ. ಮೂರು ತಿಂಗಳೊಳಗೆ ಹೊಸ ತನಿಖೆ ಪೂರ್ಣಗೊಳಿಸಿ, ಕಾನೂನಿನ ಪ್ರಕಾರ ಸಂಬಂಧಪಟ್ಟ ನ್ಯಾಯಾಲಯಕ್ಕೆ ಪೊಲೀಸ್ ವರದಿ ಸಲ್ಲಿಸುವಂತೆ ಸೂಚಿಸಿದೆ.
ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಬೆಳ್ತಂಗಡಿ ಪೊಲೀಸರು, ಸಿಐಡಿ ಅಥವಾ ಸಿಬಿಐ ಅಧಿಕಾರಿಗಳನ್ನು ಹೊಸ SITಗೆ ಸೇರಿಸಬಾರದು ಎಂದೂ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಹಿಂದಿನ ತನಿಖೆಗಳಲ್ಲಿನ ಗಂಭೀರ ಲೋಪಗಳನ್ನು ಗಮನಿಸಿದ ನ್ಯಾಯಾಲಯ ಹೊಸ ತಂಡದಿಂದ ತನಿಖೆ ನಡೆಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದೆ.
2012ರಲ್ಲಿ ಏನಾಗಿತ್ತು?
ಉಜಿರೆಯ ಎಸ್ಡಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ಸೌಜನ್ಯ 2012ರ ಅಕ್ಟೋಬರ್ 9ರಂದು ಕಾಲೇಜಿನಿಂದ ಮನೆಗೆ ಮರಳುತ್ತಿದ್ದಾಗ ನಾಪತ್ತೆಯಾಗಿದ್ದರು. ಮರುದಿನ ಧರ್ಮಸ್ಥಳ ಸಮೀಪ ಅವರ ಮೃತದೇಹ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ರಾವ್ ಅವರನ್ನು ಬಂಧಿಸಲಾಗಿತ್ತು. ನಂತರ ಪ್ರಕರಣದ ತನಿಖೆ ಸ್ಥಳೀಯ ಪೊಲೀಸರಿಂದ ಸಿಐಡಿಗೆ ಮತ್ತು ಬಳಿಕ ಸಿಬಿಐಗೆ ವರ್ಗಾವಣೆಯಾಗಿತ್ತು. ಸಿಬಿಐ ಸಂತೋಷ್ ರಾವ್ ಅವರನ್ನು ಏಕೈಕ ಆರೋಪಿಯನ್ನಾಗಿ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
2023ರಲ್ಲಿ ಸಂತೋಷ್ ರಾವ್ ಖುಲಾಸೆ
ಸುಮಾರು 11 ವರ್ಷಗಳ ಕಾನೂನು ಪ್ರಕ್ರಿಯೆಯ ಬಳಿಕ 2023ರ ಜೂನ್ 16ರಂದು ಬೆಂಗಳೂರಿನ ವಿಶೇಷ ಸಿಬಿಐ ನ್ಯಾಯಾಲಯವು ಸಾಕ್ಷ್ಯಾಧಾರಗಳ ಕೊರತೆಯಿಂದ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು. ಪ್ರಕರಣವನ್ನು ಸಂಶಯಾತೀತವಾಗಿ ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಇದಾದ ಬಳಿಕ ಸೌಜನ್ಯ ಅವರ ಕುಟುಂಬ ಹೊಸ ತನಿಖೆಗೆ ಒತ್ತಾಯಿಸಿತ್ತು. ಕರ್ನಾಟಕ ಹೈಕೋರ್ಟ್ ಮರುತನಿಖೆಯ ಮನವಿಯನ್ನು ತಿರಸ್ಕರಿಸಿದ ನಂತರ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಹೊಸ SIT ಮೂಲಕ ಮರುತನಿಖೆಗೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಮತ್ತೊಂದು ಮಹತ್ವದ ಅಂಶವನ್ನೂ ಸ್ಪಷ್ಟಪಡಿಸಿದ್ದು, ಕುಟುಂಬ ಈ ಹಿಂದೆ ಅನುಮಾನ ವ್ಯಕ್ತಪಡಿಸಿದ್ದ ವ್ಯಕ್ತಿಗಳ ಪಾತ್ರದ ಬಗ್ಗೆ ತನ್ನ ಆದೇಶದಲ್ಲಿ ಯಾವುದೇ ಪ್ರಾಥಮಿಕ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಅಲ್ಲದೆ ಈಗಾಗಲೇ ಖುಲಾಸೆಯಾಗಿರುವ ಸಂತೋಷ್ ರಾವ್ ಅವರನ್ನು ಮತ್ತೆ ತನಿಖೆ ಅಥವಾ ವಿಚಾರಣೆಗೆ ಒಳಪಡಿಸಬಾರದು ಎಂದು ತಿಳಿಸಿದೆ.
ಹೀಗಾಗಿ 14 ವರ್ಷಗಳಿಂದ ಉತ್ತರ ಸಿಗದಿರುವ ಸೌಜನ್ಯ ಪ್ರಕರಣದಲ್ಲಿ ಹೊಸ SIT ತನಿಖೆ ಯಾವ ಅಂಶಗಳನ್ನು ಹೊರತರುತ್ತದೆ ಎಂಬುದು ಈಗ ಮಹತ್ವ ಪಡೆದುಕೊಂಡಿದೆ.

- Advertisement -spot_img

More articles

- Advertisement -spot_img

Latest article