ಸಿದ್ದರಾಮಯ್ಯ ನಮಗೆ ಆರ್ಮಿ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್: ಸಿಎಂ ಪಡೆ ಛಿದ್ರವಾಗಿಲ್ಲ ಎಂದ ಸಚಿವ ಸತೀಶ್ ಜಾರಕಿಹೊಳಿ!
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಡೆ ಛಿದ್ರವಾಗಿದೆ ಎಂಬ ವದಂತಿಗಳಿಗೆ ತೆರೆ ಎಳೆದಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, “ಸಿದ್ದರಾಮಯ್ಯ ಅವರ ಆರ್ಮಿ ಛಿದ್ರವಾಗಿಲ್ಲ. ಈಗಲೂ ಅವರೇ ನಮಗೆ ಆರ್ಮಿ ಕ್ಯಾಪ್ಟನ್, ನಾನು ವೈಸ್ ಕ್ಯಾಪ್ಟನ್” ಎಂದು ಮೈಸೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ನಮ್ಮಿಬ್ಬರ ನಡುವೆ ಯಾವುದೇ ಅನುಮಾನ ಬೇಡ. ನಾನು ಮತ್ತು ಸಿದ್ದರಾಮಯ್ಯ ಚೆನ್ನಾಗಿಯೇ ಇದ್ದೇವೆ. ಪ್ರತಿ ಬಾರಿಯೂ ಜೊತೆಯಲ್ಲೇ ಇರಬೇಕೆಂದಿಲ್ಲ, ಅವಶ್ಯಕತೆ ಇದ್ದಾಗ ಭೇಟಿಯಾಗುತ್ತೇವೆ. ಇಡಿ ದಾಳಿಯ ನಂತರ ಯತೀಂದ್ರ ಸಿದ್ದರಾಮಯ್ಯ ಅವರು ನನ್ನನ್ನು ಭೇಟಿಯಾಗಿ ಮನೆಯಲ್ಲಿ ಸಾಂತ್ವನ ಹೇಳಿದ್ದಾರೆ” ಎಂದು ತಿಳಿಸಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ಕುರಿತು ಪ್ರತಿಕ್ರಿಯಿಸಿ, “ಅದು ಅಹಿಂದ ಸಮಾವೇಶ ಅಲ್ಲ, ಕೇವಲ ಹಿಂದುಳಿದವರ ಸಮಾವೇಶ. ಆಯೋಜಕರು ನನ್ನನ್ನು ಕರೆದಿಲ್ಲ, ಹಾಗಂತ ಏಕೆ ಕರೆದಿಲ್ಲ ಎಂದು ಕೇಳಲಾಗುವುದಿಲ್ಲ. ಆದರೆ ಅಹಿಂದ ಸಂಘಟನೆ ಈಗಲೂ ಭದ್ರವಾಗಿದೆ” ಎಂದರು.
ಆರ್ಥಿಕ ಇಲಾಖೆಯ ಪತ್ರದ ವಿಚಾರಕ್ಕೆ ತಿರುಗೇಟು ನೀಡಿದ ಸಚಿವರು, “ಆರ್ಥಿಕ ಇಲಾಖೆಯು ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಎಲ್ಲೂ ಹೇಳಿಲ್ಲ. ಬಜೆಟ್‌ನಲ್ಲಿ ಘೋಷಿಸಿದ ಕಾರ್ಯಕ್ರಮಗಳಿಗೆ ಮಾತ್ರ ಹಣವಿದೆ, ಹೊಸ ಘೋಷಣೆಗಳಿಗೆ ಹಣ ಹೊಂದಿಸುವುದು ಕಷ್ಟ ಎಂದು ತಿಳಿಸಿದೆ. ಇದು ಎಲ್ಲಾ ಸರ್ಕಾರಗಳ ಅವಧಿಯಲ್ಲೂ ನಡೆಯುವ ಪ್ರಕ್ರಿಯೆ. ಕೆಲವು ಇಲಾಖೆಗಳಲ್ಲಿ ಉಳಿಯುವ ಹಣವನ್ನು ಹೊಸ ಯೋಜನೆಗಳಿಗೆ ಬಳಸಲಾಗುತ್ತದೆ” ಎಂದು ಸಮರ್ಥಿಸಿಕೊಂಡರು.
ತಮ್ಮ ಮೇಲಿನ ಇಡಿ (ED) ದಾಳಿ ವಿಚಾರವಾಗಿ ಮಾತನಾಡಿ, “ಯಾವುದೇ ಕ್ಷಣದಲ್ಲಿ ಇಡಿಯಿಂದ ನನಗೆ ನೋಟಿಸ್ ಬರಬಹುದು. ನೋಟಿಸ್ ಬಂದಾಗ ನೇರವಾಗಿ ಹೋಗಿ ಉತ್ತರ ನೀಡುತ್ತೇನೆ. ವಿದೇಶಿ ಹೂಡಿಕೆ ಅಥವಾ ಕಮಿಷನ್ ವಿಚಾರವಾಗಿ ನಾನು ಮಾಧ್ಯಮಗಳಲ್ಲಿ ಮಾತನಾಡುವುದಿಲ್ಲ, ಏನು ಹೇಳಬೇಕೋ ಅದನ್ನು ಇಡಿ ಅಧಿಕಾರಿಯ ಮುಂದೆಯೇ ಹೇಳುತ್ತೇನೆ” ಎಂದು ತಿಳಿಸಿದರು.



