ನಟ ದರ್ಶನ್ಗೆ ಬಿಗ್ ಶಾಕ್: ಪ್ರದೋಷ್ ಮಾಫಿ ಸಾಕ್ಷಿಗೆ ಕೋರ್ಟ್ ಅಸ್ತು; ರೇಣುಕಾಸ್ವಾಮಿ ಹತ್ಯೆಯ ಎಳೆಎಳೆ ಮಾಹಿತಿ ಬಿಚ್ಚಿಡಲಿರುವ ಎ14 ಆರೋಪಿ!
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Murder Case) ಪ್ರಮುಖ ಆರೋಪಿ ನಟ ದರ್ಶನ್ಗೆ (Darshan) ಇಂದು ಬಹುದೊಡ್ಡ ದಿನವಾಗಿದೆ. ಪ್ರಕರಣದ 14ನೇ ಆರೋಪಿ (A14) ಹಾಗೂ ದಾಸನ ಆಪ್ತ ಪ್ರದೋಷ್ (Pradosh) ಇಂದು ಸಿಸಿಎಚ್ 59ನೇ ಕೋರ್ಟ್ನಲ್ಲಿ ‘ಮಾಫಿ ಸಾಕ್ಷಿ’ಯಾಗಿ (Prosecution Witness) ತನ್ನ ಪ್ರಮುಖ ಹೇಳಿಕೆಯನ್ನು ದಾಖಲಿಸಲಿದ್ದಾನೆ.
ಪ್ರದೋಷ್ ಇನ್ಮುಂದೆ ಪ್ರಾಸಿಕ್ಯೂಷನ್ ಸಾಕ್ಷಿ: ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿ ನುಡಿಯುವುದಾಗಿ ಮುಂದೆ ಬಂದಿದ್ದ ಪ್ರದೋಷ್ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿದೆ. ಇಷ್ಟು ದಿನ ಆರೋಪಿಯಾಗಿದ್ದ ಪ್ರದೋಷ್ ಇದೀಗ ಪ್ರಾಸಿಕ್ಯೂಷನ್ ವಿಟ್ನೆಸ್ ಆಗಿ ಬದಲಾಗಿದ್ದು, ಈ ಪ್ರಕರಣದಲ್ಲಿ ಇನ್ಮುಂದೆ 16 ಆರೋಪಿಗಳು ಮಾತ್ರ ಇರಲಿದ್ದಾರೆ. ಜೊತೆಯಲ್ಲಿದ್ದ ಅತ್ಯಾಪ್ತನೇ ದರ್ಶನ್ ವಿರುದ್ಧ ಸಾಕ್ಷಿ ಹೇಳಲು ಮುಂದೆ ಬಂದಿರುವುದು ದರ್ಶನ್ ಹಾಗೂ ಪವಿತ್ರಾಗೌಡಗೆ (Pavitra Gowda) ಕಾನೂನಾತ್ಮಕವಾಗಿ ಬಹುದೊಡ್ಡ ಆತಂಕ ತಂದೊಡ್ಡಿದೆ.
ಹೇಳಿಕೆ ತಡೆಯಲು ದರ್ಶನ್ ನಡೆಸಿದ್ದ ಯತ್ನ ವಿಫಲ: ಇನ್ನೊಂದೆಡೆ, ಆಪ್ತ ಪ್ರದೋಷ್ ಮಾಫಿ ಸಾಕ್ಷಿ ಹೇಳಿಕೆ ದಾಖಲಿಸುವುದನ್ನು ತಡೆಯಲು ಹಾಗೂ ವಿಚಾರಣೆಯನ್ನು ಮುಂದೂಡುವಂತೆ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಆಘಾತ ನೀಡಿತ್ತು. ಹೀಗಾಗಿ ಇಂದಿನ ಹೇಳಿಕೆ ದಾಖಲಾತಿ ದರ್ಶನ್ ಪಾಲಿಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಸಂಕಷ್ಟ ಸೃಷ್ಟಿಸಲಿದೆ.
ಕೊಲೆಯ ಪ್ರತಿಯೊಂದು ರಹಸ್ಯ ಬಿಚ್ಚಿಡಲಿರುವ ಪ್ರದೋಷ್: ಇಂದು ಕೋರ್ಟ್ನಲ್ಲಿ ಪ್ರದೋಷ್ಗೆ ಹಲವು ಪ್ರಶ್ನಾವಳಿಗಳನ್ನು ಕೇಳಲಾಗುತ್ತದೆ. ರೇಣುಕಾಸ್ವಾಮಿ ಕೊಲೆಗೆ ಕಾರಣವೇನು? ಪ್ಲಾನ್ ಹೇಗೆ ರೂಪಿಸಲಾಯ್ತು? ಇದರ ಹಿಂದಿನ ಮಾಸ್ಟರ್ ಮೈಂಡ್ ಯಾರು? ಎಂಬಿತ್ಯಾದಿ ಇಂಚಿಂಚು ವಿವರಣೆಯನ್ನು ಪ್ರದೋಷ್ ನೀಡಬೇಕಾಗಿದೆ. ಪ್ರಾಸಿಕ್ಯೂಷನ್ ವಿಚಾರಣೆ ಬಳಿಕ ಆರೋಪಿಗಳ ಪರ ವಕೀಲರು ಪ್ರದೋಷ್ನನ್ನು ಕ್ರಾಸ್ ಎಕ್ಸಾಮಿನೇಷನ್ಗೆ (Cross-Examination) ಒಳಪಡಿಸಲಿದ್ದಾರೆ. ಪ್ರದೋಷ್ ಹೇಳಿಕೆಯು ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಬಲವಾದ ತಿರುವು ನೀಡುವ ಸಾಧ್ಯತೆಯಿದೆ.



