9 ಕಿಮೀ ಕ್ರಮಿಸೋಕೆ ಬರೋಬ್ಬರಿ 1 ಗಂಟೆ; ಮಳೆಯ ಅಬ್ಬರಕ್ಕೆ ಬೆಂಗಳೂರಿನ ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದಾಗಿ ನಗರದ ವಿವಿಧ ಭಾಗಗಳಲ್ಲಿ ರಸ್ತೆಗಳು ಜಲಾವೃತಗೊಂಡು ಭಾರಿ ಸಂಚಾರ ದಟ್ಟಣೆ (Traffic Jam) ಉಂಟಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಟ ನಡೆಸಿದ್ದಾರೆ.
ಔಟರ್ ರಿಂಗ್ ರೋಡ್, ಹೆಚ್‌ಎಸ್‌ಆರ್ ಲೇಔಟ್, ಅಗರ ಲೇಕ್, ಕಾಡುಬೀಸನಹಳ್ಳಿ, ವೈಟ್‌ಫೀಲ್ಡ್ ಹಾಗೂ ಮಾರತಹಳ್ಳಿ ಸುತ್ತಮುತ್ತಲಿನ ರಸ್ತೆಗಳಲ್ಲಿ ನೀರು ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ರಸ್ತೆಗುಂಡಿ ಹಾಗೂ ನೀರಿನಿಂದಾಗಿ ಕೇವಲ 9 ಕಿಲೋಮೀಟರ್ ಕ್ರಮಿಸಲು ವಾಹನ ಸವಾರರು 1 ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್‌ನಲ್ಲಿ ಸಿಲುಕಬೇಕಾಯಿತು.
ವೈಟ್‌ಫೀಲ್ಡ್ ಮತ್ತು ಹೆಚ್‌ಎಎಲ್ ಭಾಗಗಳಲ್ಲಿ ಟ್ರಾಫಿಕ್ ಪೊಲೀಸರು ಮಳೆ ನೀರಲ್ಲೇ ನಿಂತು ಸಂಚಾರ ನಿಯಂತ್ರಿಸುವ ಜೊತೆಗೆ, ಚರಂಡಿ ಮುಚ್ಚಿದ್ದ ಕಸ ತೆರವುಗೊಳಿಸಿ ನೀರು ಹರಿಯುವಂತೆ ಮಾಡಲು ಹರಸಾಹಸ ಪಟ್ಟರು.
ನೆಲಮಂಗಲದ ಮಾದನಾಯಕನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಂಬೆಳಗ್ಗೆ ಸುರಿದ ರಭಸದ ಮಳೆಯಿಂದಾಗಿ ರಸ್ತೆ ಸರಿಯಾಗಿ ಕಾಣಿಸದೇ ಈಚರ್ ಲಾರಿಯೊಂದು 108 ಆಂಬುಲೆನ್ಸ್‌ಗೆ ಡಿಕ್ಕಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಚಿಕ್ಕಬಾಣಾವಾರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಮುಂದಿನ ಮೂರು ದಿನಗಳ ಕಾಲ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಬೆಳಿಗ್ಗೆಯಿಂದಲೂ ಮಳೆ ಮುಂದುವರಿದಿದ್ದು, ಬೆಳಗಿನ ವೇಳೆಯಲ್ಲೇ ಕೆಲಸ ಕಾರ್ಯಗಳಿಗೆ ತೆರಳುವವರಿಗೆ ತೊಂದರೆ ಉಂಟಾಗಿದೆ.



