17 ವರ್ಷಗಳ ದೇಶಸೇವೆ ಬಳಿಕ ಹುಟ್ಟೂರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ
ಗದಗ: ಭಾರತೀಯ ಸೈನ್ಯದಲ್ಲಿ ಸುದೀರ್ಘ 17 ವರ್ಷಗಳ ಕಾಲ ದೇಶಸೇವೆ ಸಲ್ಲಿಸಿ ನಿವೃತ್ತರಾದ ಯೋಧ ರಹಿಮಾನ ಎಂ. ಹೆಬ್ಬಳ್ಳಿ ಅವರು ಹುಟ್ಟೂರಿಗೆ ಮರಳಿದ ಹಿನ್ನೆಲೆಯಲ್ಲಿ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಯೋಧ ರಹಿಮಾನ ಎಂ. ಹೆಬ್ಬಳ್ಳಿ ಆಗಮಿಸುತ್ತಿದ್ದಂತೆ ಶಾಲಾ ಮಕ್ಕಳು, ಗ್ರಾಮದ ಹಿರಿಯರು ಹಾಗೂ ಸ್ನೇಹಿತರ ಬಳಗ ಹೂಮಳೆ ಸುರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಬರಮಾಡಿಕೊಂಡರು. ಬಳಿಕ ಯೋಧನನ್ನು ತೆರೆದ ಜೀಪಿನಲ್ಲಿ ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯ ಮಾರ್ಗಮಧ್ಯೆ ಯೋಧ ರಹಿಮಾನ ಅವರು ನಾಡಕವಿ ಹುಯಿಲಗೋಳ ನಾರಾಯಣರಾವ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿಗಳಿಗೆ ಮಾಲಾರ್ಪಣೆ ಮಾಡಿದರು. ನಂತರ ಗ್ರಾಮದ ಸೂಗೀರೇಶ್ವರ, ದುರ್ಗಾದೇವಿ ಹಾಗೂ ಶ್ರೀ ಮಾರುತಿ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.
17 ವರ್ಷಗಳ ಕಾಲ ದೇಶದ ಗಡಿಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ಹುಟ್ಟೂರಿಗೆ ಮರಳಿದ ಯೋಧನನ್ನು ಗ್ರಾಮಸ್ಥರು ಆತ್ಮೀಯವಾಗಿ ಬರಮಾಡಿಕೊಂಡ ಹಿನ್ನೆಲೆಯಲ್ಲಿ ಹುಯಿಲಗೋಳ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಯೋಧನಿಗೆ ಗೌರವ ಸಲ್ಲಿಸಿದ ಗ್ರಾಮಸ್ಥರ ಸಂಭ್ರಮ ಗಮನ ಸೆಳೆಯಿತು.



