‘ಮತ್ತೊಮ್ಮೆ ಆಶೀರ್ವಾದ ಸಿಕ್ಕಿದೆ’; ಎರಡನೇ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ ಕಿಯಾರಾ ಅಡ್ವಾಣಿ
‘ಟಾಕ್ಸಿಕ್’ ಸಿನಿಮಾ ಮೂಲಕ ಕನ್ನಡ ಸಿನಿಪ್ರೇಕ್ಷಕರಿಗೂ ಮತ್ತಷ್ಟು ಹತ್ತಿರವಾಗಿರುವ ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಮೊದಲ ಮಗಳು ಸರಾಯಾ ಆಗಮನದ ಬಳಿಕ ಇದೀಗ ಕಿಯಾರಾ ಹಾಗೂ ಪತಿ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಅಕ್ಟೋಬರ್ 7ರಂದು ಕಿಯಾರಾ ಮತ್ತು ಸಿದ್ಧಾರ್ಥ್ ಜಂಟಿಯಾಗಿ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಫೋಟೋ ಹಂಚಿಕೊಳ್ಳುವ ಮೂಲಕ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಕಿಯಾರಾ-ಸಿದ್ಧಾರ್ಥ್ ಹಂಚಿಕೊಂಡಿರುವ ಫೋಟೋದಲ್ಲಿ ಪುಟ್ಟ ಮಗುವಿನ ಸಾಕ್ಸ್ ಕಾಣಿಸಿಕೊಂಡಿದ್ದು, ಮಗಳು ಸರಾಯಾಳ ಪುಟ್ಟ ಕೈಯೂ ಫ್ರೇಮ್ನಲ್ಲಿದೆ. ಮತ್ತೊಮ್ಮೆ ತಮ್ಮ ಜೀವನಕ್ಕೆ ದೊಡ್ಡ ಉಡುಗೊರೆ ಸಿಕ್ಕಿದೆ ಹಾಗೂ ತಮ್ಮ ಹೃದಯ ಪ್ರೀತಿ ಮತ್ತು ಕೃತಜ್ಞತೆಯಿಂದ ತುಂಬಿದೆ ಎಂದು ದಂಪತಿ ಸಂತಸ ಹಂಚಿಕೊಂಡಿದ್ದಾರೆ.
ಪೋಸ್ಟ್ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಹಾಗೂ ಚಿತ್ರರಂಗದ ಹಲವು ಮಂದಿ ಸ್ಟಾರ್ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ವಿಶೇಷವೆಂದರೆ ಇತ್ತೀಚೆಗೆ ಸಿದ್ಧಾರ್ಥ್ ಮಲ್ಹೋತ್ರಾ ‘ಬಿಗ್ ಬಾಸ್ 20’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ತಂದೆಯಾದ ಅನುಭವದ ಕುರಿತು ಮಾತನಾಡಿದ್ದರು. ಇದೇ ವೇಳೆ ಸಲ್ಮಾನ್ ಖಾನ್ ಮತ್ತೊಂದು ಮಗುವಿನ ಕುರಿತು ಸಿದ್ಧಾರ್ಥ್ ಅವರನ್ನು ತಮಾಷೆಯಾಗಿ ಕಾಲೆಳೆದಿದ್ದರು.
ಇದಾದ ಕೆಲವೇ ವಾರಗಳಲ್ಲಿ ಕಿಯಾರಾ-ಸಿದ್ಧಾರ್ಥ್ ತಮ್ಮ ಎರಡನೇ ಮಗುವಿನ ಆಗಮನದ ಸುದ್ದಿಯನ್ನು ಅಧಿಕೃತವಾಗಿ ಪ್ರಕಟಿಸಿರುವುದು ಅಭಿಮಾನಿಗಳ ಗಮನ ಸೆಳೆದಿದೆ.
ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ 2023ರ ಫೆಬ್ರವರಿ 7ರಂದು ರಾಜಸ್ಥಾನದ ಜೈಸಲ್ಮೇರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
2025ರ ಜುಲೈನಲ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಬಳಿಕ ಮಗಳಿಗೆ ಸರಾಯಾ ಎಂದು ಹೆಸರಿಟ್ಟಿದ್ದರು. ಇದೀಗ ಸರಾಯಾ ಆಗಮನದ ಸುಮಾರು 15 ತಿಂಗಳ ಬಳಿಕ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.



