ಪತಿ-ಪತ್ನಿ ಜಗಳ ಬಿಡಿಸಲು ಬಂದ 16 ವರ್ಷದ ಮಗನನ್ನೇ ಕೊಂದ ತಂದೆ!
ತುಮಕೂರು: ಕೌಟುಂಬಿಕ ಕಲಹದ ಭೀಕರ ಪರಿಣಾಮವಾಗಿ ತಂದೆಯೇ ತನ್ನ 16 ವರ್ಷದ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಚೌಡನಾಯಕನಪಾಳ್ಯ ಗ್ರಾಮದಲ್ಲಿ ನಡೆದಿದೆ. ಪತ್ನಿಯೊಂದಿಗೆ ಜಗಳವಾಡುತ್ತಿದ್ದ ತಂದೆಯನ್ನು ತಡೆಯಲು ಮಧ್ಯಪ್ರವೇಶಿಸಿದ ಬಾಲಕನನ್ನೇ ಹಾರೆಕೋಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.
ಸುನೀಲ್ (16) ಕೊಲೆಯಾದ ದುರ್ದೈವಿ ಬಾಲಕ. ನಂಜೆಗೌಡ ಎಂಬಾತನೇ ಮಗನನ್ನು ಹತ್ಯೆ ಮಾಡಿದ ಆರೋಪಿ. ಈತ ಮದ್ಯವ್ಯಸನಿಯಾಗಿದ್ದು, ಕುಡಿದು ಮನೆಗೆ ಬಂದು ಪತ್ನಿ ರಂಜಿತಾ ಅವರೊಂದಿಗೆ ಆಗಾಗ ಜಗಳವಾಡುತ್ತಿದ್ದ ಎನ್ನಲಾಗಿದೆ.
ಪತ್ನಿಯ ಮೇಲೆ ಹಲ್ಲೆ ತಡೆಯಲು ಬಂದ ಮಗನ ಹತ್ಯೆ!
ನಂಜೆಗೌಡ ಈ ಹಿಂದೆಯೂ ಪತ್ನಿ ರಂಜಿತಾ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಈ ಪ್ರಕರಣದಲ್ಲಿ ಜೈಲು ಸೇರಿ ಬಳಿಕ ಬಿಡುಗಡೆಯಾಗಿದ್ದ. ಆದರೂ ಆತನ ವರ್ತನೆಯಲ್ಲಿ ಬದಲಾವಣೆಯಾಗಿರಲಿಲ್ಲ ಎಂದು ತಿಳಿದುಬಂದಿದೆ.
ಇಂದು ಬೆಳಗ್ಗೆ ಕೂಡ ಕುಡಿದ ಮತ್ತಿನಲ್ಲಿ ಪತ್ನಿಯೊಂದಿಗೆ ಜಗಳ ಆರಂಭಿಸಿದ್ದಾನೆ. ಮಾತಿಗೆ ಮಾತು ಬೆಳೆದು ಜಗಳ ವಿಕೋಪಕ್ಕೆ ತಿರುಗಿದ್ದು, ರಂಜಿತಾ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ. ಈ ವೇಳೆ ತಂದೆ-ತಾಯಿಯ ಜಗಳ ಬಿಡಿಸಲು ಸುನೀಲ್ ಮಧ್ಯಪ್ರವೇಶಿಸಿದ್ದಾನೆ.
ಆದರೆ, ಇದರಿಂದ ಮತ್ತಷ್ಟು ಆಕ್ರೋಶಗೊಂಡ ನಂಜೆಗೌಡ ಮೊದಲು ಪತ್ನಿಯನ್ನು ಮನೆಯಿಂದ ಹೊರಗೆ ತಳ್ಳಿ ಬಾಗಿಲು ಹಾಕಿಕೊಂಡಿದ್ದಾನೆ. ಬಳಿಕ ಮನೆಯಲ್ಲಿದ್ದ ಹಾರೆಕೋಲಿನಿಂದ ಮಗ ಸುನೀಲ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಆರೋಪಿ ತಂದೆ ಪೊಲೀಸರ ವಶಕ್ಕೆ
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಣಿಗಲ್ ಸಿಪಿಐ ಮಾಧ್ಯನಾಯಕ್ ನೇತೃತ್ವದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಬಳಿಕ ಆರೋಪಿ ನಂಜೆಗೌಡನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಂದೆ-ತಾಯಿಯ ನಡುವಿನ ಜಗಳ ಬಿಡಿಸಲು ಹೋದ ಬಾಲಕನೇ ಪ್ರಾಣ ಕಳೆದುಕೊಂಡಿರುವ ಘಟನೆ ಚೌಡನಾಯಕನಪಾಳ್ಯ ಗ್ರಾಮದಲ್ಲಿ ತೀವ್ರ ಆಘಾತ ಮೂಡಿಸಿದೆ. ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



