ಹಾಡಿನ ಜಾಡು ಹಿಡಿದು….
||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…! ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||
ಭಾಗ-4
ಪರಸಂಗದ ಗೆಂಡೆತಿಮ್ಮ
‘ತೇರಾ ಏರಿ ಅಂಬರದಾಗೆ ನೇಸರ ನಗುತಾನೆ….’ ದೊಡ್ಡರಂಗೇಗೌಡ್ರು ಬರೆದಿರೋ ಅದ್ಭುತವಾದ ಹಾಡು. ಅಷ್ಟಕ್ಕೂ ರಂಗೇಗೌಡ್ರು ಇದಕ್ಕೂ ಮೊದ್ಲು ಪಡುವಾರಳ್ಳಿ ಪಾಂಡವರು ಚಿತ್ರಕ್ಕೆ, ‘ಏಸು ವರ್ಸ ಆಯ್ತೆ ನಿಂಗೆ ನನ್ನ ಬಂಗಾರಿ’ ಹಾಗೂ ‘ಜನ್ಮ ನೀಡಿದ ಭೂಮಿ ತಾಯಿಯ ಹೇಗೆ ಮರೆಯಲಿ’ ಅನ್ನೋ ಸೂಪರ್ ಹಿಟ್ ಹಾಡುಗಳನ್ನ ನೀಡಿದ್ರು. ಆದ್ರು ಕೂಡ ಅವ್ರನ್ನ ಕನ್ನಡ ಇಂಡಸ್ಟ್ರಿ ಅಷ್ಟು ಸೀರಿಯಸ್ಸಾಗಿ ತಗೊಂಡಿರ್ಲಿಲ್ಲ. ಪರಸಂಗದ ಗೆಂಡೆತಿಮ್ಮ ಚಿತ್ರವನ್ನ ಒಪ್ಕೊಂಡಾಗ, `ರಂಗೇಗೌಡ್ರು ಹಚ್ಕೊಂಡ್ರು ಪೌಡ್ರು’ ಅಂತ ಜನ ತಮಾಷೆ ಮಾಡಿದ್ರಂತೆ. ಇಷ್ಟೆಲ್ಲಾ ಇದ್ರೂ ಗೆಂಡೆತಿಮ್ಮನ ನಿರ್ದೇಶಕ ಶಿವರಾಂ ಹಾಡಿನ ರಚನೆಗಾಗಿ ಆಯ್ಕೆ ಮಾಡಿದ್ದು ದೊಡ್ಡರಂಗೇಗೌಡ್ರನ್ನೇ…!
ಸಂಗೀತ ನಿರ್ದೇಶಕರಾದ ರಾಜನ್-ನಾಗೇಂದ್ರ ಮುಂದೆ ರಂಗೇಗೌಡ್ರನ್ನ ಕರ್ಕೊಂಡ್ ಬಂದು. ಇವ್ರೇ ನಮ್ಮ ಗೀತರಚನೆಕಾರರು ಅದ್ರಂತೆ. ಇವ್ರ ಪರಿಚಯದ ನಂತ್ರ ಹಾಡಿನ ರಚನೆ ಶುರು. ಮೊದಲೆ ಹಳ್ಳಿಯವರಾಗಿದ್ದ ದೊಡ್ಡ ರಂಗೇಗೌಡ್ರ ತಲೆಗೆ ಬಂದಿದ್ದು, ಗೆಂಡೆತಿಮ್ಮನೂ ಹಳ್ಳಿ ಹೈದನೇ. ಹಳ್ಳಿಯವರು ಮೊದಲು ಎದ್ದು ಸೂರ್ಯದೇವನಿಗೆ ನಮಸ್ಕಾರ ಮಾಡ್ತಾರೆ. ಅದಕ್ಕಾಗಿ `ತೇರಾ ಏರಿ ಅಂಬರದಾಗೇ ನೇಸರ ನಗುತಾನೆ’ ಅನ್ನೋ ಸಾಲನ್ನೇ ಮೊದಲಿಗೆ ಬರೆದು ಹಾಡಿಗೆ ನಾಂದಿ ಹಾಡಿದ್ರು. ಹಳ್ಳಿಯ ಬೆಟ್ಟ ಗುಡ್ಡಗಳ ನೆನಪೇ, ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೇದಾವೆ ಅನ್ನೋ ಪದಗಳ ಜೋಡಣೆ ಮಾಡಿದ್ರು. ಹೀಗೆ ಪ್ರತಿಯೊಂದು ಪದದಲ್ಲೂ ಜಾನಪದ ಮಿಶ್ರಿತ ಕಂಪನ್ನ ತುಂಬಿದ್ರು. ರೀ ರೆಕಾರ್ಡಿಂಗ್ ಮುಗಿಯೊ ವೇಳೆಗೆ ಅಲ್ಲಿದ್ದವರೆಲ್ಲಾ ಹಾಡನ್ನ ಗುನುಗಲು ಶುರುಮಾಡಿದ್ರು. ಆಗಲೇ ದೊಡ್ಡರಂಗೇಗೌಡ್ರು ಗೆಂಡೆತಿಮ್ಮನಾಗಿ ಗೆದ್ದುಬಿಟ್ರು.
-ಅಕ್ಷತಾ