No menu items!
3.7 C
Munich
Sunday, May 17, 2026

ಡಿವೋರ್ಸ್‌ ಸಿಗುವವರೆಗೂ ನಾನು ಸಿನಿಮಾಗಳಲ್ಲಿ ನಟಿಸಲ್ಲ ; ಕೈಕುಯ್ದುಕೊಂಡಿದ್ದೇಕೆ ? ಬಿಕ್ಕಿ ಬಿಕ್ಕಿ ಅತ್ತ ನಟ ಜಯಂ ರವಿ

Must read

ತಮಿಳು ಚಿತ್ರರಂಗದ ಸ್ಟಾರ್ ನಟ ಜಯಂ ರವಿ (ರವಿ ಮೋಹನ್) ಅವರ ವೈವಾಹಿಕ ಜೀವನದ ಕರಾಳ ಕಥೆ ಈಗ ಬೀದಿಗೆ ಬಂದಿದೆ. ನಿನ್ನೆ (ಮೇ 16) ಚೆನ್ನೈನಲ್ಲಿ ಹಮ್ಮಿಕೊಂಡಿದ್ದ ಪ್ರೆಸ್‌ಮೀಟ್‌ನಲ್ಲಿ ಜಯಂ ರವಿ ಇಡೀ ಮಾಧ್ಯಮಗಳ ಮುಂದೆಯೇ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ. ಹೆಂಡತಿ ಮತ್ತು ಆಕೆಯ ಕುಟುಂಬದಿಂದ ತಾನು ಅನುಭವಿಸಿದ ನರಕಯಾತನೆಯನ್ನು ಬಿಚ್ಚಿಟ್ಟಿರೋ ನಟ, ನನಗೆ ಅಧಿಕೃತವಾಗಿ ಡಿವೋರ್ಸ್ ಸಿಗುವವರೆಗೂ ನಾನು ಯಾವುದೇ ಸಿನಿಮಾದಲ್ಲಿ ನಟಿಸಲ್ಲ, ಡೈರೆಕ್ಷನ್ ಅಥವಾ ಪ್ರೊಡಕ್ಷನ್ ಕೂಡ ಮಾಡಲ್ಲ ಎಂದು ಬಾಂಬ್ ಸಿಡಿಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳನ್ನು ಆಘಾತಕ್ಕೀಡು ಮಾಡಿದ್ದಾರೆ.

ಜನ ನನ್ನ ತುಂಬಾ ಸಾಫ್ಟ್ ಅಂದುಕೊಂಡಿದ್ದಾರೆ, ಆದರೆ ಇನ್ಮುಂದೆ ನಾನು ಸುಮ್ಮನಿರಲ್ಲ ಎಂದು ಗುಡುಗಿರೋ ಜಯಂ ರವಿ, ಹೆಂಡತಿ ಆರತಿ ವಿರುದ್ಧ ಗಂಭೀರ ಆರೋಪಗಳ ಸುರಿಮಳೆಗೈದಿದ್ದಾರೆ. ಡಿವೋರ್ಸ್ ಕೇಸ್ ಶುರುವಾದಾಗಿನಿಂದ ನನ್ನ ಸ್ವಂತ ಮಕ್ಕಳನ್ನ ನೋಡಲು ನನಗೆ ಬಿಡುತ್ತಿಲ್ಲ. ಫೋನ್ ಮಾಡೋಕೂ ಬಿಡ್ತಿಲ್ಲ, ಶಾಲೆಗೆ ಬಾಡಿಗಾರ್ಡ್‌ಗಳನ್ನು ಕಳುಹಿಸಿ ನಾನು ಮಕ್ಕಳನ್ನು ಭೇಟಿಯಾಗದಂತೆ ತಡೆಯುತ್ತಿದ್ದಾರೆ. ಮಕ್ಕಳನ್ನು ನೋಡಲಾಗದ ಇದೇ ನೋವಿನಲ್ಲಿ ನಾನು ಇತ್ತೀಚೆಗೆ ನನ್ನ ಕೈಗಳನ್ನೇ ಕುಯ್ದುಕೊಂಡೆ ಎಂದು ಮಾಧ್ಯಮಗಳ ಮುಂದೆ ತಮ್ಮ ಗಾಯದ ಗುರುತುಗಳನ್ನು ತೋರಿಸಿ ಕಣ್ಣೀರಿಟ್ಟಿದ್ದಾರೆ.

ದಾಂಪತ್ಯದಲ್ಲಿ ತನಗೆ ಭೀಕರ ದ್ರೋಹವಾಗಿದೆ ಎಂದಿರೋ ರವಿ, ತಮ್ಮ ಹಳೆಯ ಇತಿಹಾಸವನ್ನು ನೆನೆದಿದ್ದಾರೆ. ಅವತ್ತು ಆರತಿ ತಾನು ಸಾಯುವುದಾಗಿ ಬ್ಲ್ಯಾಕ್‌ಮೇಲ್ ಮಾಡಿ, ಕೈಕುಯ್ದುಕೊಂಡು ನನ್ನನ್ನು ಮದುವೆಯಾಗಿದ್ಲು. ನನ್ನ ಹೆತ್ತವರು ಆಕೆಯನ್ನು ಮದುವೆಯಾಗಬೇಡ ಎಂದು ಕಾಲಿಗೆ ಬಿದ್ದು ಬೇಡಿಕೊಂಡಿದ್ದರು. ಆದರೆ ನಾನು ಹೆತ್ತವರ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಮದುವೆಯಾಗಿ ಇಂದು ರಕ್ತದ ಕಣ್ಣೀರು ಸುರಿಸುತ್ತಿದ್ದೇನೆ. ಅವಳಿಂದ ದೂರವಿದ್ದ ಕಳೆದ ಎರಡು ವರ್ಷ ಮಾತ್ರ ನಾನು ನೆಮ್ಮದಿಯಾಗಿ ಉಸಿರಾಡಿದ್ದೆ ಎಂದು ಅಳಲು ತೋಡಿಕೊಂಡಿದ್ದಾರೆ.

ನನಗೆ ವೈಯಕ್ತಿಕವಾಗಿ ಒಂದೇ ಒಂದು ಬ್ಯಾಂಕ್ ಅಕೌಂಟ್ ಇರಲಿಲ್ಲ. ಇದ್ದದ್ದು ಒಂದೇ ಜಾಯಿಂಟ್ ಅಕೌಂಟ್. ನಾನೇ ಕೋಟಿ ಕೋಟಿ ಸಂಪಾದನೆ ಮಾಡಿದರೂ ಅದರಲ್ಲಿ ಕೇವಲ ಸ್ವಲ್ಪ ಹಣ ಡ್ರಾ ಮಾಡಿದರೂ ತಕ್ಷಣ ಫೋನ್ ಬಂದು ಯಾಕೆ ಅಂತ ತನಿಖೆ ಮಾಡ್ತಿದ್ರು. ನನ್ನನ್ನು ಕೇವಲ ದುಡ್ಡು ತಂದುಕೊಡುವ ಮಿಷನ್ ಮಾಡಿಕೊಂಡಿದ್ದರು, ನನ್ನ ಮೇಲೆ ದೊಡ್ಡ ಮೊತ್ತದ ಸಾಲದ ಹೊರೆ ಹೊರಿಸಿದ್ದಾರೆ ಎಂದು ಶಾಕಿಂಗ್ ವಿಷಯಗಳನ್ನು ಜಯಂ ರವಿ ಹೊರಹಾಕಿದ್ದಾರೆ.

ಇದೇ ವೇಳೆ ತಮ್ಮ ಸಂಸಾರದಲ್ಲಿ ಬಿರುಕು ಮೂಡಲು ಕಾರಣವಾದ ಒಬ್ಬ ಮೂರನೇ ವ್ಯಕ್ತಿ”ಯ ಬಗ್ಗೆ ಪ್ರಸ್ತಾಪಿಸಿದ ರವಿ, ಆಕೆಯನ್ನು ಮೂರು ಅಕ್ಷರದ ನಟಿ” ಅಥವಾ “ಇಡ್ಲಿ ನಟಿ” ಎಂದು ಪರೋಕ್ಷವಾಗಿ ಕರೆದಿದ್ದಾರೆ. ಸದ್ಯ ಜಯಂ ರವಿ ಅವರ ಈ ಕಣ್ಣೀರಿನ ಪತ್ರಿಕಾಗೋಷ್ಠಿ ಮತ್ತು ನಟನೆಯಿಂದ ದೂರ ಸರಿಯುವ ನಿರ್ಧಾರ ಇಡೀ ಕಾಲಿವುಡ್ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಕೆಲವರು ಸ್ತ್ರೀವಾದದ ಹೆಸರಿನಲ್ಲಿ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅವರು ನೇರವಾಗಿಯೇ ಕಿಡಿಕಾರಿದ್ದಾರೆ.

ಇತ್ತೀಚೆಗೆ ಜಯಂ ರವಿ ಅವರೊಂದಿಗೆ ಆಪ್ತರಾಗಿದ್ದ ಗಾಯಕಿ ಮತ್ತು ಆಧ್ಯಾತ್ಮಿಕ ಥೆರಪಿಸ್ಟ್ ಕೆನಿಶಾ ಫ್ರಾನ್ಸಿಸ್ ಅವರ ಹೆಸರನ್ನೂ ಈ ವಿವಾದಕ್ಕೆ ಎಳೆದು ತರಲಾಗಿತ್ತು. ಈ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಮಾಡಿ ಪ್ರತಿಕ್ರಿಯಿಸಿರುವ ಕೆನಿಶಾ, ಆನ್‌ಲೈನ್‌ನಲ್ಲಿ ನನಗೆ ವಿಪರೀತ ಟ್ರೋಲ್ ಮಾಡಿ, ಬೆದರಿಕೆ ಹಾಕಿ ಕಿರುಕುಳ ನೀಡುತ್ತಿದ್ದಾರೆ. ಈ ಸೈಬರ್ ನಿಂದನೆ ತಡೆಯಲಾಗದೆ ನಾನು ಚೆನ್ನೈ ತೊರೆಯುತ್ತಿದ್ದೇನೆ. ಜಯಂ ರವಿ ಅವರ ಕುಟುಂಬದ ಸಮಸ್ಯೆಗೆ ನಾನಂತೂ ಕಾರಣವಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಹಿನ್ನೆಲೆ ಪ್ರೆಸ್‌ಮೀಟ್‌ನಲ್ಲಿ ಕೆನಿಶಾ ಬಗ್ಗೆ ಮಾತನಾಡಿದ ರವಿ, ಅವಳನ್ನು ಬಲವಂತವಾಗಿ ದೂರ ಹೋಗುವಂತೆ ಮಾಡಿದರು, ಅವಳು ಎಲ್ಲಿದ್ದರೂ ಚೆನ್ನಾಗಿರಲಿ ಎಂದಿದ್ದಾರೆ.

ನಾನು ಸಿನಿಮಾ ಬಿಟ್ಟು ಹೋಗ್ತೀನಿ, ಆದ್ರೆ ನನ್ನ ಜೀವನ ಹಾಳು ಮಾಡಿದವರ ಎಲ್ಲರ ಕಥೆ ಮುಗಿಸಿ, ನನಗೆ ಆದ ಅವಮಾನಕ್ಕೆ ನ್ಯಾಯ ಸಿಕ್ಕ ಮೇಲಷ್ಟೇ ಮತ್ತೆ ಬಣ್ಣ ಹಚ್ಚುತ್ತೇನೆ ಎಂದು ರವಿ ಖಡಕ್ ಆಗಿ ಹೇಳಿದ್ದಾರೆ. ಸದ್ಯಕ್ಕೆ ಅವರು ತಮ್ಮ ಕಚೇರಿಯಲ್ಲೇ ಇರಲಿದ್ದು, ಯಾರಾದರೂ ಮಾತನಾಡಬೇಕಿದ್ದರೆ ನೇರವಾಗಿ ಬರಬಹುದು ಎಂದು ಸವಾಲು ಹಾಕಿದ್ದಾರೆ. ಒಬ್ಬ ಸ್ಟಾರ್ ನಟನ ಕೌಟುಂಬಿಕ ಕಲಹ, ಕೈ ಕುಯ್ದುಕೊಂಡ ರಹಸ್ಯ ಹಾಗೂ ಸಿನಿಮಾಗೆ ಗುಡ್‌ಬೈ ಹೇಳಿರುವ ಈ ಹೈಡ್ರಾಮಾ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.

- Advertisement -spot_img

More articles

- Advertisement -spot_img

Latest article