ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಉಚಿತ ಪಾಸ್ ಆದೇಶಕ್ಕೆ ಹೈಕೋರ್ಟ್ ದ್ವಿಸದಸ್ಯ ಪೀಠ ತಡೆ
ಬೆಂಗಳೂರು: ಕನಕಪುರ ರಸ್ತೆಯಲ್ಲಿರುವ ಸೋಮನಹಳ್ಳಿ ಟೋಲ್ ಪ್ಲಾಜಾದಲ್ಲಿ ಸ್ಥಳೀಯ ವಾಹನ ಸವಾರರಿಗೆ ಉಚಿತ ಪಾಸ್ ನೀಡುವಂತೆ ನೀಡಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶಕ್ಕೆ ವಿಭಾಗೀಯ ಪೀಠ ತಡೆ ನೀಡಿದೆ.
ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲಿಪುರ ಗ್ರಾಮಸ್ಥರು ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಹೆಚ್ಎಐ) ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ.
ಅಲ್ಲದೇ, ಸೋಮನಹಳ್ಳಿ, ನೆಲಗುಲಿ ಮತ್ತು ಕಗ್ಗಲಿಪುರ ಗ್ರಾಮಸ್ಥರಿಗೆ ನೋಟಿಸ್ ಜಾರಿ ಮಾಡಿ, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 23ಕ್ಕೆ ಮುಂದೂಡಲಾಗಿದೆ.
ವಿಚಾರಣೆ ವೇಳೆ ಎನ್‌ಹೆಚ್ಎಐ ಪರ ವಕೀಲರು, ಟೋಲ್ ಪ್ಲಾಜಾದಲ್ಲಿ ದ್ವಿಚಕ್ರ ವಾಹನಗಳು ಹಾಗೂ ಟ್ರ್ಯಾಕ್ಟರ್‌ಗಳನ್ನು ಯಾವುದೇ ಶುಲ್ಕವಿಲ್ಲದೆ ಸಂಚರಿಸಲು ಅವಕಾಶ ನೀಡಲಾಗುತ್ತಿದೆ. ಜೊತೆಗೆ ಸ್ಥಳೀಯ ನಿವಾಸಿಗಳಿಗೆ ತಿಂಗಳಿಗೆ 340 ರೂಪಾಯಿ ದರದ ಪಾಸ್ ವಿತರಿಸಲಾಗುತ್ತಿದೆ. ಆದರೆ ಸ್ಥಳೀಯ ನಿವಾಸಿಗಳ ವಾಹನಗಳಿಗೆ ಸಂಪೂರ್ಣ ಉಚಿತ ಪಾಸ್ ನೀಡುವಂತೆ ಏಕಸದಸ್ಯ ಪೀಠ ನೀಡಿರುವ ಆದೇಶವು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ ಎಂದು ಪೀಠದ ಗಮನಕ್ಕೆ ತಂದರು. ವಾದವನ್ನು ಆಲಿಸಿದ ದ್ವಿಸದಸ್ಯ ಪೀಠ, ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಿ ಆದೇಶ ಹೊರಡಿಸಿತು.
ಈ ಪ್ರಕರಣದ ಹಿನ್ನೆಲೆ ನೋಡಿದರೆ, ಕಗ್ಗಲಿಪುರ, ನೆಲಗುಲಿ ಮತ್ತು ಸೋಮನಹಳ್ಳಿ ಗ್ರಾಮ ಪಂಚಾಯತ್‌ಗಳು ಸರ್ವೀಸ್ ರಸ್ತೆಗಳನ್ನು ಒದಗಿಸುವವರೆಗೆ ಟೋಲ್ ಪ್ಲಾಜಾ ಸ್ಥಾಪಿಸಬಾರದು ಎಂದು ರಸ್ತೆ ಅಭಿವೃದ್ಧಿ ಒಪ್ಪಂದ ಮಾಡಿಕೊಂಡಿದ್ದ ಸಂಸ್ಥೆಗೆ ಸ್ಥಳೀಯರು ಮನವಿ ಮಾಡಿದ್ದರು. ಆದರೆ ಆ ಮನವಿಯನ್ನು ಪರಿಗಣಿಸದೇ ಹೊಸ ಗುತ್ತಿಗೆದಾರರು ಟೋಲ್ ಸಂಗ್ರಹಕ್ಕೆ ಮೂಲಸೌಕರ್ಯ ನಿರ್ಮಿಸಲು ಮುಂದಾಗಿದ್ದರು.
ಸರ್ವೀಸ್ ರಸ್ತೆ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸದೇ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಆರೋಪಿಸಿ ಮಂಜೇಶ್ ಕುಮಾರ್ ಸೇರಿದಂತೆ ಗ್ರಾಮಸ್ಥರು 2024ರಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅಲ್ಲದೇ, ಹೊಸದಾಗಿ ರಚನೆಯಾಗಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಗೆ ಸೋಮನಹಳ್ಳಿ ಗ್ರಾಮ ಸೇರಿದ್ದು, ಟೋಲ್ ಪ್ಲಾಜಾವೂ ಅದರ ವ್ಯಾಪ್ತಿಯಲ್ಲಿದೆ. ಸೋಮನಹಳ್ಳಿ ಟೋಲ್ ಪ್ಲಾಜಾ ಹಾಗೂ ಮುಂದಿನ ಟೋಲ್ ಪ್ಲಾಜಾ ನಡುವಿನ ಅಂತರ ಸುಮಾರು 89 ಕಿಲೋಮೀಟರ್‌ಗಳಿದ್ದು, ಇದರಿಂದ ಇಡೀ ರಸ್ತೆಗೆ ಲೆಕ್ಕ ಹಾಕಿ ಅಧಿಕ ಟೋಲ್ ಸಂಗ್ರಹಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಈ ವಾದಗಳನ್ನು ಆಲಿಸಿದ್ದ ಏಕಸದಸ್ಯ ಪೀಠ, ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಟೋಲ್ ಪ್ಲಾಜಾದಲ್ಲಿ ಬಳಕೆದಾರ ಶುಲ್ಕ ಸಂಗ್ರಹವು ನಿಯಮಬಾಹಿರ ಹಾಗೂ ರಾಷ್ಟ್ರೀಯ ಹೆದ್ದಾರಿ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟಿತ್ತು. ಮುಂದಿನ ಒಂದು ತಿಂಗಳೊಳಗೆ ಅರ್ಜಿದಾರ ಗ್ರಾಮಸ್ಥರ ವಾಹನಗಳಿಗೆ ಉಚಿತ ಪಾಸ್ ನೀಡುವಂತೆ ಹಾಗೂ ಸರ್ವೀಸ್ ರಸ್ತೆ ಒದಗಿಸದೇ ಟೋಲ್ ವಿಧಿಸುವುದು ಏಕಪಕ್ಷೀಯ ಮತ್ತು ಅಸಮಂಜಸ ಕ್ರಮವಾಗಿದೆ ಎಂದು ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಎನ್‌ಹೆಚ್ಎಐ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.






