ದುರ್ನಡತೆ ಸಾಬೀತಾದರೆ ಸದಸ್ಯರ ವಜಾ ಸಾಧ್ಯ: ಹೈಕೋರ್ಟ್
ಬೆಂಗಳೂರು: ಒಂದೇ ಆರೋಪದ ಸಂಬಂಧ ಕ್ರಿಮಿನಲ್ ಪ್ರಕರಣದಲ್ಲಿ ಶಿಕ್ಷೆ ಆಗದಿದ್ದರೂ, ಆಡಳಿತಾತ್ಮಕ ನಿಟ್ಟಿನಲ್ಲಿ ದುರ್ನಡತೆ ಆರೋಪ ಸಾಬೀತಾದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ವಜಾಗೊಳಿಸಬಹುದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗದಗ–ಬೇಟಗೇರಿ ಸಿಟಿ ಮುನಿಸಿಪಾಲಿಟಿಯ ಸದಸ್ಯರಾದ ಉಷಾ ಮಹೇಶ್ ದಾಸರ, ಅನಿಲ್ ಎಂ. ಅಬ್ಬಿಗೇರಿ ಮತ್ತು ಗುಳ್ಳಪ್ಪ ಎಸ್. ಮುಷಿಗೇರಿ ಅವರನ್ನು ಸದಸ್ಯತ್ವದಿಂದ ವಜಾಗೊಳಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಸಾರ್ವಜನಿಕ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದ ವ್ಯಕ್ತಿಗಳ ಜೊತೆ ಶಾಮೀಲಾಗಿ, ಮುನಿಸಿಪಾಲಿಟಿ ಆಯುಕ್ತರ ಸಹಿಯನ್ನು ನಕಲು ಮಾಡಿ ಸುಳ್ಳು ನಿರ್ಣಯ ಸೃಷ್ಟಿಸಿ, ಒತ್ತುವರಿದಾರರಿಗೆ ಭೂ ಸ್ವಾಧೀನ ಪತ್ರ ನೀಡಿದ್ದ ಆರೋಪ ಇವರ ವಿರುದ್ಧ ಕೇಳಿಬಂದಿತ್ತು. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಮೂವರು ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ Suraj Govindaraj ಅವರ ಏಕಸದಸ್ಯ ಪೀಠ, ಸರ್ಕಾರದ ಕ್ರಮದಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದೆ.
“ಆರೋಪಿಗಳು ತಾವು ಅಮಾಯಕರು ಎಂದು ಹೇಳಿಕೊಳ್ಳಬಹುದು. ಅಂತಹ ಹೇಳಿಕೆಗಳನ್ನು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ವೇಳೆ ಪರಿಗಣಿಸಬಹುದು. ಆದರೆ ಅದು ಆಡಳಿತಾತ್ಮಕ ಕ್ರಮ ಕೈಗೊಳ್ಳುವುದಕ್ಕೆ ಅಡ್ಡಿಯಾಗುವುದಿಲ್ಲ,” ಎಂದು ಪೀಠ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಮುನಿಸಿಪಾಲಿಟಿಗಳ ಕಾಯಿದೆ, 1964ರ ಸೆಕ್ಷನ್ 41ರ ಅನ್ವಯ ಸಾಕಷ್ಟು ಸಾಕ್ಷ್ಯಾಧಾರಗಳ ಆಧಾರದಲ್ಲಿ ಸದಸ್ಯರನ್ನು ವಜಾಗೊಳಿಸಿರುವುದು ಕಾನೂನುಸಮ್ಮತ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.






