ಪತ್ರಕರ್ತರು ಸಂವಿಧಾನದ ಆಶಯಗಳನ್ನು ಜಾರಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

tnit editors
1 Min Read

ಪತ್ರಕರ್ತರು ಸಂವಿಧಾನದ ಆಶಯಗಳನ್ನು ಜಾರಿಗೊಳಿಸಬೇಕು: ಸಿಎಂ ಸಿದ್ದರಾಮಯ್ಯ

ಬೀದರ್: ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವಲ್ಲಿ ಪತ್ರಕರ್ತರು ತಮ್ಮ ಪಾತ್ರವನ್ನು ಆತ್ಮಪರಿಶೀಲನೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬೀದರ್ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಊಹಾಪೋಹ ಆಧಾರಿತ ಪತ್ರಿಕೋದ್ಯಮ ಅತ್ಯಂತ ಅಪಾಯಕಾರಿಯಾಗಿದೆ. ಕ್ಷುಲ್ಲಕ ವಿಚಾರಗಳನ್ನು ದಿನವಿಡೀ ಪ್ರಸಾರ ಮಾಡುವವರು ಅದರ ಪರಿಣಾಮಗಳ ಬಗ್ಗೆ ಯೋಚಿಸಬೇಕು. ಗಂಡ-ಹೆಂಡತಿ ಜಗಳವನ್ನು ದಿನವಿಡೀ ತೋರಿಸುವುದರಿಂದ ಸಮಾಜಕ್ಕೆ ಏನು ಪ್ರಯೋಜನ?” ಎಂದು ಅವರು ಪ್ರಶ್ನಿಸಿದರು.
ಸಂವಿಧಾನದ ಮೌಲ್ಯಗಳನ್ನು ಜಾರಿಗೊಳಿಸುವ ದಿಕ್ಕಿನಲ್ಲಿ ಪತ್ರಕರ್ತರು ತಮ್ಮನ್ನು ತಾವು ಪರಿಶೀಲಿಸಿಕೊಳ್ಳಬೇಕು ಎಂದ ಅವರು, “ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿ ಇಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು,” ಎಂದು ಹೇಳಿದರು.
ಸಮಾಜದಲ್ಲಿನ ಅಸಮಾನತೆಯನ್ನು ನಿವಾರಿಸುವಲ್ಲಿ ಬಸವಣ್ಣ ಸೇರಿದಂತೆ ಶರಣರ ಪಾತ್ರವನ್ನು ಉಲ್ಲೇಖಿಸಿದ ಅವರು, “ಸಮಸಮಾಜ ನಿರ್ಮಾಣವಾಗದಿದ್ದರೆ ಅಸಮಾನತೆ ಮುಂದುವರೆಯುತ್ತದೆ. ಇದು ಕೆಲವರ ಹಿತಾಸಕ್ತಿಗೆ ಅನುಕೂಲಕರ,” ಎಂದು ಅಭಿಪ್ರಾಯಪಟ್ಟರು.
ಇಂದಿಗೂ ಕರ್ಮಸಿದ್ಧಾಂತವನ್ನು ಅಂಧವಾಗಿ ನಂಬುವ ಪ್ರವೃತ್ತಿ ಹೆಚ್ಚುತ್ತಿದೆ. “ಈ ಮೌಢ್ಯಾಚರಣೆಗಳಲ್ಲಿ ತೊಡಗಿರುವವರು ವಿದ್ಯಾವಂತರೇ ಆಗಿರುವುದು ವಿಷಾದನೀಯ,” ಎಂದು ಅವರು ಹೇಳಿದರು.
ವೈಚಾರಿಕತೆ ಬೆಳೆಸುವ ವೈಜ್ಞಾನಿಕ ಶಿಕ್ಷಣದ ಅಗತ್ಯವಿದೆ ಎಂದು ಒತ್ತಿಹೇಳಿದ ಅವರು, “ಯಾವ ದೇವರೂ ಯಾರನ್ನೂ ಅಜ್ಞಾನಿಯಾಗಿಯೇ ಅಥವಾ ಕೆಳ ಜಾತಿಯಲ್ಲಿ ಹುಟ್ಟಲೆಂದು ಬಯಸುವುದಿಲ್ಲ. ಈ ಅರಿವು ಸಮಾಜದಲ್ಲಿ ಮೂಡಿಸುವ ಜವಾಬ್ದಾರಿ ಪತ್ರಕರ್ತರ ಮೇಲಿದೆ,” ಎಂದರು.
ಪತ್ರಕರ್ತರು ಕೇವಲ ಮಾಹಿತಿ ನೀಡುವುದಲ್ಲದೆ, ಸಮಾಜ ಸುಧಾರಣೆಯಲ್ಲಿಯೂ ಪ್ರಮುಖ ಪಾತ್ರವಹಿಸಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

Share This Article