ಚಿಕ್ಕಮಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಹೊಸ ಬುಲೆಟ್ ಬೈಕ್ʼನಲ್ಲಿ ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಚಿಕ್ಕಮಗಳೂರು: ನಗರದ ನರಿ ಗುಡ್ಡನಹಳ್ಳಿ ಸರ್ಕಲ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಅಪಘಾತದ ಸಂಪೂರ್ಣ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಘಟನೆ ಬೆಚ್ಚಿಬೀಳಿಸುವಂತಿದೆ.
ಮೃತ ವಿದ್ಯಾರ್ಥಿಯನ್ನು ಚರಣ್ (19) ಎಂದು ಗುರುತಿಸಲಾಗಿದೆ. ಸ್ನೇಹಿತನನ್ನು ಕರೆತರಲು ಹೊಸದಾಗಿ ಖರೀದಿಸಿದ್ದ ಬುಲೆಟ್ ಬೈಕ್ನಲ್ಲಿ ತೆರಳುತ್ತಿದ್ದ ವೇಳೆ, ರಸ್ತೆ ತಿರುವಿನಲ್ಲಿ ಎದುರಿನಿಂದ ಬಂದ ಮತ್ತೊಂದು ಬೈಕ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಡಿಕ್ಕಿಯ ತೀವ್ರತೆಗೆ ಚರಣ್ ಬೈಕ್ನಿಂದ ಎಸೆಯಲ್ಪಟ್ಟು ರಸ್ತೆಗೆ ಬಿದ್ದಿದ್ದಾರೆ. ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ, ಅಪಘಾತ ಸಂಭವಿಸಿದ ವೇಳೆ ಚರಣ್ ಹೆಲ್ಮೆಟ್ ಧರಿಸಿರಲಿಲ್ಲ ಎಂಬುದು ಬೆಳಕಿಗೆ ಬಂದಿದೆ. ಅಪಘಾತದ ರಭಸಕ್ಕೆ ಹೊಸದಾಗಿ ಖರೀದಿಸಿದ್ದ ಬುಲೆಟ್ ಬೈಕ್ ಕೂಡ ಸಂಪೂರ್ಣ ನಜ್ಜುಗುಜ್ಜಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ಟ್ರಾಫಿಕ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರು ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



