ಪ್ರತಿ ದಿನ ಪಪ್ಪಾಯಿ ತಿಂದರೆ ಏನು ಲಾಭ? ಆರೋಗ್ಯಕ್ಕೆ ಅದ್ಭುತ ಪ್ರಯೋಜನಗಳು ಇಲ್ಲಿವೆ!
ನಮ್ಮ ಸುತ್ತಮುತ್ತ ಅಗ್ಗದಲ್ಲಿ ಸಿಗುವ ಪರಂಗಿ ಹಣ್ಣು (ಪಪ್ಪಾಯಿ) ಆರೋಗ್ಯಕ್ಕೆ ಅತ್ಯಂತ ಉಪಯುಕ್ತವಾದ ಹಣ್ಣುಗಳಲ್ಲಿ ಒಂದಾಗಿದೆ. “ದೇವತೆಗಳ ಹಣ್ಣು” ಎಂದೇ ಕರೆಯಲಾಗುವ ಈ ಹಣ್ಣು ಪ್ರತಿದಿನ ಸೇವಿಸಿದರೆ ಹಲವು ಆರೋಗ್ಯ ಲಾಭಗಳು ದೊರೆಯುತ್ತವೆ ಎಂದು ತಜ್ಞರು ತಿಳಿಸಿದ್ದಾರೆ.
ಪರಂಗಿ ಹಣ್ಣಿನಲ್ಲಿ ವಿಟಮಿನ್ ಎ, ಸಿ ಹಾಗೂ ನಾರಿನಾಂಶ ಸಮೃದ್ಧವಾಗಿದ್ದು, ದೇಹದ ವಿವಿಧ ವ್ಯವಸ್ಥೆಗಳ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಜೀರ್ಣಕ್ರಿಯೆ ಸುಧಾರಣೆಯಲ್ಲಿ ಪರಂಗಿ ಹಣ್ಣು ಪ್ರಮುಖ ಪಾತ್ರ ವಹಿಸುತ್ತದೆ. ಇದರಲ್ಲಿ ಇರುವ ‘ಪಪೈನ್’ ಎಂಬ ಕಿಣ್ವವು ಪ್ರೋಟೀನ್‌ಗಳನ್ನು ಸುಲಭವಾಗಿ ಜೀರ್ಣವಾಗಲು ಸಹಾಯ ಮಾಡುತ್ತದೆ. ಇದರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲಿಯೂ ಇದು ಪರಿಣಾಮಕಾರಿ. ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುವುದರಿಂದ ಶೀತ, ಕೆಮ್ಮು ಮತ್ತು ಇತರ ಸೋಂಕುಗಳಿಂದ ರಕ್ಷಣೆ ನೀಡುತ್ತದೆ.
ಕಣ್ಣಿನ ಆರೋಗ್ಯಕ್ಕೂ ಪರಂಗಿ ಹಣ್ಣು ಸಹಕಾರಿ. ವಿಟಮಿನ್ ಎ ಮತ್ತು ಪೋಷಕಾಂಶಗಳು ದೃಷ್ಟಿ ಶಕ್ತಿಯನ್ನು ಸುಧಾರಿಸಿ, ವಯೋಸಹಜ ಕಣ್ಣಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತವೆ.
ತೂಕ ಇಳಿಕೆಗೆ ಸಹ ಪರಂಗಿ ಹಣ್ಣು ಉಪಯುಕ್ತವಾಗಿದೆ. ಕಡಿಮೆ ಕ್ಯಾಲೊರಿ ಹಾಗೂ ಹೆಚ್ಚು ನಾರಿನಾಂಶ ಹೊಂದಿರುವುದರಿಂದ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ ಮತ್ತು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
ಹೃದಯದ ಆರೋಗ್ಯ ಕಾಪಾಡಲು ಸಹ ಇದು ನೆರವಾಗುತ್ತದೆ. ಆಂಟಿ-ಆಕ್ಸಿಡೆಂಟ್‌ಗಳು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡಿ ಹೃದಯಾಘಾತ ಮತ್ತು ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡುತ್ತವೆ.
ಚರ್ಮದ ಆರೈಕೆಯಲ್ಲಿಯೂ ಪಪ್ಪಾಯಿ ಮಹತ್ವದ್ದಾಗಿದೆ. ಇದು ಚರ್ಮದ ಕಾಂತಿಯನ್ನು ಹೆಚ್ಚಿಸಿ, ಕಪ್ಪು ಕಲೆಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಇದಲ್ಲದೆ, ಉರಿಯೂತ ಶಮನಕಾರಿ ಗುಣಗಳಿರುವುದರಿಂದ ಕೀಲು ನೋವು ಮತ್ತು ಸ್ನಾಯು ನೋವನ್ನು ಕಡಿಮೆ ಮಾಡಲು ಸಹಕಾರಿ ಎಂದು ತಜ್ಞರು ಹೇಳಿದ್ದಾರೆ.
ಪ್ರತಿದಿನ ಬೆಳಿಗ್ಗೆ ಅಥವಾ ಮಧ್ಯಾಹ್ನ ಒಂದು ಕಪ್ ತಾಜಾ ಪರಂಗಿ ಹಣ್ಣು ಸೇವಿಸುವುದು ಉತ್ತಮ. ಹಸಿಯಾಗಿ ಸೇವಿಸುವುದರಿಂದ ಹೆಚ್ಚಿನ ಲಾಭ ದೊರೆಯುತ್ತದೆ.
ಆದರೆ ಗರ್ಭಿಣಿಯರು ಹಸಿ ಅಥವಾ ಅರ್ಧ ಬೆಂದ ಪಪ್ಪಾಯಿಯನ್ನು ಸೇವಿಸುವುದನ್ನು ತಪ್ಪಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.



