ಪಕ್ಷ ವಿರೋಧಿ ಚಟುವಟಿಕೆಯ ಆರೋಪ: ಕಾಂಗ್ರೆಸ್ ಸದಸ್ಯತ್ವದಿಂದ ಅಬ್ದುಲ್ ಜಬ್ಬಾರ್ ಅಮಾನತು
ಬೆಂಗಳೂರು: ದಾವಣಗೆರೆ ಉಪಚುನಾವಣೆ ಬಳಿಕ ಕಾಂಗ್ರೆಸ್‌ನಲ್ಲಿ ಉಂಟಾದ ಗೊಂದಲ ಇನ್ನೂ ಶಮನವಾಗುವ ಲಕ್ಷಣ ಕಾಣುತ್ತಿಲ್ಲ. ಅಲ್ಪಸಂಖ್ಯಾತರ ಅಸಮಾಧಾನ ಮತ್ತು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆ ಮೂವರು ಮುಸ್ಲಿಂ ನಾಯಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಇಬ್ಬರ ಮೇಲೆ ಗಂಭೀರ ಶಿಕ್ಷೆ ವಿಧಿಸಲಾಗಿದೆ.
ಮೊದಲಿಗೆ, ಅಬ್ದುಲ್ ಜಬ್ಬಾರ್ ಅವರನ್ನು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಬಳಿಕ ನಸೀರ್ ಅಹ್ಮದ್ ಅವರನ್ನು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ. ಜೊತೆಗೆ, ಸಚಿವ ಜಮೀರ್ ಅಹ್ಮದ್ ಅವರಿಗೆ ಸಿಎಂ ಸಿದ್ದರಾಮಯ್ಯ ಖುದ್ದು ತರಾಟೆ ತೆಗೆದುಕೊಂಡಿದ್ದಾರೆ.
ಇದೀಗ, ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಅಬ್ದುಲ್ ಜಬ್ಬಾರ್ ಅವರಿಗೆ ಮತ್ತೊಂದು ದೊಡ್ಡ ಶಾಕ್ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶದಂತೆ, ಜಬ್ಬಾರ್ ಅವರನ್ನು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಲಾಗಿದೆ.
ಪಕ್ಷದ ಶಿಸ್ತು ಉಲ್ಲಂಘನೆ ಮತ್ತು ಬಂಡಾಯ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದ ಆರೋಪಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ವೇಳೆ ಜಬ್ಬಾರ್ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ ಬಗ್ಗೆ ದೃಢವಾದ ಸಾಕ್ಷ್ಯಗಳು ಕೆಪಿಸಿಸಿಗೆ ಲಭ್ಯವಾಗಿವೆ ಎಂದು ಹೇಳಲಾಗಿದೆ.
ಈ ಬೆಳವಣಿಗೆಗಳು ಕಾಂಗ್ರೆಸ್‌ನಲ್ಲಿ ಅಂತರ ಕಲಹವನ್ನು ಮತ್ತಷ್ಟು ತೀವ್ರಗೊಳಿಸಿದ್ದು, ವಿಶೇಷವಾಗಿ ಮುಸ್ಲಿಂ ನಾಯಕರ ನಡುವಿನ ಸಂಘರ್ಷ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.



