ಬೆಂಗಳೂರು: ಕೃಷಿ ಕ್ಷೇತ್ರದಲ್ಲಿ ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬೆಳೆ ಸಮೀಕ್ಷೆಯ ದತ್ತಾಂಶದ ನಿಖರತೆ, ವಿಶ್ವಾಸಾರ್ಹತೆ ಹಾಗೂ ವೈಜ್ಞಾನಿಕ ಪರಿಶೀಲನೆಯನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ‘ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ’ (Composite Digital Crop Survey – CDCS) ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ.
ರಾಜ್ಯ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ, ಕಂದಾಯ, ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ ಹಾಗೂ ಐಟಿ-ಬಿಟಿ ಇಲಾಖೆಗಳ ಸಹಯೋಗದಲ್ಲಿ ಬೆಂಗಳೂರಿನ ಇನ್‌ಫಾಂಟ್ರಿ ರಸ್ತೆಯಲ್ಲಿರುವ ಸಿಎಎಸ್ ಅಧಿಕಾರಿಗಳ ಸಂಶೋಧನೆ ಮತ್ತು ತರಬೇತಿ ಕೇಂದ್ರದಲ್ಲಿ ಈ ಕುರಿತು ಮಹತ್ವದ ಪಾಲುದಾರರ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕರ್ನಾಟಕ ಸರ್ಕಾರ 2018ರಿಂದ ಜಿಐಎಸ್ ಆಧಾರಿತ ಮೊಬೈಲ್ ಆ್ಯಪ್ ಮೂಲಕ ಡಿಜಿಟಲ್ ಬೆಳೆ ಸಮೀಕ್ಷೆ (DCS) ನಡೆಸುತ್ತಿದ್ದು, ಪ್ಲಾಟ್ ಮಟ್ಟದಲ್ಲಿ ಬೆಳೆಗಳಿಗೆ ಸಂಬಂಧಿಸಿದ ದೃಢೀಕೃತ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಇದೀಗ ಈ ವ್ಯವಸ್ಥೆಯನ್ನು ಮತ್ತಷ್ಟು ಆಧುನೀಕರಿಸಲು ಉನ್ನತ ರೆಸಲ್ಯೂಶನ್ ಉಪಗ್ರಹ ಚಿತ್ರಣ, ಸಿಂಥೆಟಿಕ್ ಅಪರ್ಚರ್ ರೇಡಾರ್ (SAR), ಡ್ರೋನ್ ಸಮೀಕ್ಷೆ, ಜಿಐಎಸ್ ದತ್ತಾಂಶ, ಕೃತಕ ಬುದ್ಧಿಮತ್ತೆ (AI) ಹಾಗೂ ಮೆಷಿನ್ ಲರ್ನಿಂಗ್ (ML) ತಂತ್ರಜ್ಞಾನಗಳನ್ನು ಬಳಸಲು ಮುಂದಾಗಿದೆ.
ಈ ಎಲ್ಲಾ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಈಗಾಗಲೇ ಲಭ್ಯವಿರುವ ಬೆಳೆ ಸಮೀಕ್ಷೆಯ ದತ್ತಾಂಶದೊಂದಿಗೆ ಸಂಯೋಜಿಸಿ CDCS ಮಾದರಿ ರೂಪಿಸಲಾಗಿದೆ. ರಾಜ್ಯದ ವಿವಿಧ ಭೌಗೋಳಿಕ ಪ್ರದೇಶಗಳನ್ನು ಪ್ರತಿನಿಧಿಸುವಂತೆ ಆಯ್ಕೆ ಮಾಡಲಾದ ಐದು ಹೋಬಳಿಗಳಲ್ಲಿ ಈ ನೂತನ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸರ್ಕಾರ ನಿರ್ಧರಿಸಿದೆ.
ನೀತಿ ನಿರೂಪಕರು, ತಾಂತ್ರಿಕ ತಜ್ಞರು, ಸಂಶೋಧನಾ ಸಂಸ್ಥೆಗಳು ಹಾಗೂ ತಂತ್ರಜ್ಞಾನ ಪಾಲುದಾರರನ್ನು ಒಂದೇ ವೇದಿಕೆಗೆ ತಂದು, CDCS ಅನುಷ್ಠಾನಕ್ಕೆ ಅಗತ್ಯವಿರುವ ತಾಂತ್ರಿಕ ಚೌಕಟ್ಟು, ಮೂಲಸೌಕರ್ಯ, ಅನುಷ್ಠಾನ ಕಾರ್ಯತಂತ್ರ ಹಾಗೂ ತಂತ್ರಜ್ಞಾನಗಳ ಸಂಯೋಜನೆ ಕುರಿತು ಕಾರ್ಯಾಗಾರದಲ್ಲಿ ಚರ್ಚಿಸಲಾಯಿತು.
ಕಾರ್ಯಾಗಾರವನ್ನು ಉದ್ಘಾಟಿಸಿದ ಇ-ಆಡಳಿತ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಬೆಳೆ ಸಮೀಕ್ಷೆ ಪ್ರಕ್ರಿಯೆಯನ್ನು ಮತ್ತಷ್ಟು ಬಲಪಡಿಸಲು ಹಾಗೂ ಕೃಷಿ ದತ್ತಾಂಶದ ನಿಖರತೆಯನ್ನು ಹೆಚ್ಚಿಸಲು ಉದಯೋನ್ಮುಖ ಡಿಜಿಟಲ್ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯ ಎಂದು ಹೇಳಿದರು. ನಿಖರ ದತ್ತಾಂಶದ ಆಧಾರದ ಮೇಲೆ ಪರಿಣಾಮಕಾರಿ ನೀತಿ ರೂಪಿಸಲು ಹಾಗೂ ಸಾಕ್ಷ್ಯಾಧಾರಿತ ಆಡಳಿತಕ್ಕೆ ಇದು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.
ಇ-ಆಡಳಿತ ಇಲಾಖೆ, KSRSAC ಹಾಗೂ ISRO-NRSC ವತಿಯಿಂದ CDCS ತಾಂತ್ರಿಕ ಚೌಕಟ್ಟು, ಮೂಲಸೌಕರ್ಯ ಅಗತ್ಯತೆಗಳು ಮತ್ತು ಅನುಷ್ಠಾನ ಕಾರ್ಯತಂತ್ರದ ಕುರಿತು ವಿಸ್ತೃತ ಪ್ರಸ್ತುತಿಗಳನ್ನು ನೀಡಲಾಯಿತು. ಖಾಸಗಿ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಸ್ಟಾರ್ಟ್‌ಅಪ್‌ಗಳು ತಮ್ಮ ತಾಂತ್ರಿಕ ಸಾಮರ್ಥ್ಯ ಮತ್ತು ಅನುಷ್ಠಾನ ವಿಧಾನಗಳನ್ನು ಪ್ರದರ್ಶಿಸಿದವು.
ತಜ್ಞರು, ಸರ್ಕಾರಿ ಅಧಿಕಾರಿಗಳು ಹಾಗೂ ತಂತ್ರಜ್ಞಾನ ಪಾಲುದಾರರ ನಡುವೆ ನಡೆದ ಸಂವಾದಾತ್ಮಕ ಚರ್ಚೆಯಲ್ಲಿ ರಾಜ್ಯದಲ್ಲಿ ತಂತ್ರಜ್ಞಾನ ಆಧಾರಿತ ಹಾಗೂ ಸದೃಢ ಡಿಜಿಟಲ್ ಬೆಳೆ ಸಮೀಕ್ಷೆ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತರಲು ಮುಂದಿನ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಯಿತು.



