ಕಾಂಗ್ರೆಸ್, ಡಿ.ಎಂ.ಕೆ, ಟಿ.ಎಂ.ಸಿ, ಸಮಾಜವಾದಿ ಪಕ್ಷಗಳನ್ನು ಮಹಿಳೆಯರು ಕ್ಷಮಿಸುವುದಿಲ್ಲ: ಅನುರಾಗ್ ಸಿಂಗ್ ಠಾಕೂರ್
ಬೆಂಗಳೂರು: ಮಹಿಳಾ ಮೀಸಲಾತಿ ಮಸೂದೆ ಸೋಲಲು ಕಾರಣರಾದ ಕಾಂಗ್ರೆಸ್ ಪಕ್ಷ ಹಾಗೂ ಅವರ ಮಿತ್ರ ಪಕ್ಷದವರನ್ನು ದೇಶದ ತಾಯಂದಿರು ಮತ್ತು ಸೋದರಿಯರು ಯಾವತ್ತೂ ಕ್ಷಮಿಸಲಾರರು ಎಂದು ಸಂಸದ ಮತ್ತು ಕೇಂದ್ರದ ಮಾಜಿ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ತಿಳಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ” ದಲ್ಲಿ ‘ಮಹಿಳಾ ವಿರೋಧಿ ಕಾಂಗ್ರೆಸ್ ಹಾಗೂ ಐ.ಎನ್.ಡಿ.ಐ.ಎ ಒಕ್ಕೂಟದ ವಿರುದ್ಧ’ ಇಂದು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ನಾರಿ ಶಕ್ತಿ ವಂದನ್ ಅಧಿನಿಯಮ ಮಸೂದೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ಮೋಸದ ಕುರಿತು ಅವರು ವಿವರಿಸಿದರು.
ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಸಮಾಜವಾದಿ ಪಕ್ಷಗಳು 5ನೇ ಬಾರಿ ಮಹಿಳಾ ಮೀಸಲಾತಿ ಮಸೂದೆಯನ್ನು ತಡೆದಿವೆ. ಅಲ್ಲದೇ 5 ಬಾರಿ ಮೀಸಲಾತಿಯ ರಸ್ತೆಗೆ ತಡೆ ಒಡ್ಡಿವೆ ಎಂದು ಟೀಕಿಸಿದರು. ಮಸೂದೆಗೆ ಸೋಲುಂಟಾದಾಗ ಈ ಪಕ್ಷದವರು ಸಂತಸ ಸೂಚಿಸಿದ್ದಾರೆ ಎಂದು ಆಕ್ಷೇಪಿಸಿದರು.
ಮೊನ್ನೆ ಈ ಮಸೂದೆ ಕುರಿತು 2 ದಿನ ಚರ್ಚೆ ನಡೆದಿತ್ತು. 2023ರಲ್ಲಿ ವಿಪಕ್ಷಗಳು 2024ರ ಚುನಾವಣೆ ಕಾರಣಕ್ಕಾಗಿ ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸಿದ್ದವು. ಮೊನ್ನೆ ಮಸೂದೆ ಮತಕ್ಕೆ ಹಾಕಿದಾಗ ಕಾಂಗ್ರೆಸ್ಸಿನವರು ಮಹಿಳೆಯರ ಹಿಂದಿನಿಂದ ಬಂದು ಚೂರಿಯಿಂದ ಇರಿಯುವ ಕೆಲಸ ಮಾಡಿದ್ದಾರೆ. ಈ ಪಕ್ಷಗಳು ದೇಶದ ಶೇ 50ರಷ್ಟಿರುವ ಮಹಿಳೆಯರಿಗೆ ದ್ರೋಹವೆಸಗಿದ್ದಾರೆ ಎಂದು ಟೀಕಿಸಿದರು.
‘ಇಂಡಿ’ ಒಕ್ಕೂಟದ ಪಕ್ಷಗಳ ಮಹಿಳಾ ವಿರೋಧಿ ಮಾನಸಿಕ ಸ್ಥಿತಿ ಅನಾವರಣಗೊಂಡಿದೆ ಎಂದರು. ಕುಟುಂಬ ಆಧಾರಿತ, ಕೌಟುಂಬಿಕ ನಿರ್ವಹಣೆಯ ಪಕ್ಷಗಳುÀ ದೆಹಲಿಯ ಮಹಿಳೆಯೇ ಆಗಿದ್ದರೂ ವಯನಾಡ್‍ನಿಂದ ಸ್ಪರ್ಧಿಸಲು ಅವಕಾಶ ಕೊಡುತ್ತವೆ. ಇತರ ಮಹಿಳೆಯರ ಸ್ಥಿತಿ ಹೀಗಿಲ್ಲ ಎಂದು ವಿವರಿಸಿದರು.
ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯವು ಸಹಜ ಹಕ್ಕಾಗಿದೆ. ಈ ಹಕ್ಕು ನೀಡುವಲ್ಲಿ ವಿಳಂಬವಾಗಿದ್ದು, ಇದಕ್ಕೆ ಕಾಂಗ್ರೆಸ್ ಮತ್ತಿತರ ಪಕ್ಷಗಳೇ ಕಾರಣ ಎಂದು ದೂರಿದರು.
2011 ಜನಗಣತಿಯನ್ನು ಪರಿಗಣಿಸಿದರೆ ತಮಿಳುನಾಡಿನಲ್ಲಿ ಕೇವಲ 10 ಸೀಟು ಹೆಚ್ಚಾಗಬೇಕಿತ್ತು.
ಆದರೆ, ಅದು 59 ಆಗಲಿದೆ. ಕರ್ನಾಟಕದಲ್ಲೂ 28 ಇದ್ದುದು 42 ಆಗಲಿದೆ. ಮಹಿಳೆಯರು, ಎಸ್‍ಸಿ, ಎಸ್‍ಟಿಗಳ ಪ್ರಾತಿನಿಧ್ಯ ಹೆಚ್ಚಾಗಲಿದೆ. ರಾಜ್ಯಗಳ ಪ್ರಾತಿನಿಧ್ಯವೂ ಹೆಚ್ಚಾಗುತ್ತದೆ ಎಂದು ವಿವರ ನೀಡಿದರು. ಈಗ ಕೆಲವು ಕ್ಷೇತ್ರಗಳು 39 ಲಕ್ಷದಷ್ಟು ಮತದಾರರನ್ನು ಹೊಂದಿವೆ. ಇನ್ನೂ ಕೆಲವು ಸುಮಾರು 2 ಲಕ್ಷ ಮತದಾರರನ್ನು ಹೊಂದಿವೆ ಎಂದು ತಿಳಿಸಿದರು.



