No menu items!
24.4 C
Munich
Thursday, August 6, 2026

ಬೆಂಗಳೂರು ಜನರಿಗೆ ಮತ್ತೊಂದು ಗುಡ್ ನ್ಯೂಸ್.. ಲಾಲ್ ಬಾಗ್ ಮಾದರಿಯ 3 ಉದ್ಯಾನ ನಿರ್ಮಾಣಕ್ಕೆ ರಕ್ಷಣಾ ಇಲಾಖೆಗೆ ಅನುಮತಿ ಕೋರಿದ ರಾಜ್ಯ ಸರ್ಕಾರ!

Must read

ಬೆಂಗಳೂರು ಜನರಿಗೆ ಮತ್ತೊಂದು ಗುಡ್ ನ್ಯೂಸ್.. ಲಾಲ್ ಬಾಗ್ ಮಾದರಿಯ 3 ಉದ್ಯಾನ ನಿರ್ಮಾಣಕ್ಕೆ ರಕ್ಷಣಾ ಇಲಾಖೆಗೆ ಅನುಮತಿ ಕೋರಿದ ರಾಜ್ಯ ಸರ್ಕಾರ!

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಲಾಲ್ಬಾಗ್ ಮಾದರಿಯ ಮೂರು ಹೊಸ ಉದ್ಯಾನಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಯೋಜನೆ ರೂಪಿಸುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್ಬಾಗ್ನಲ್ಲಿ ‘ಗಂಗ ಸಾಮ್ರಾಜ್ಯ ವೈಭವ’ ಪರಿಕಲ್ಪನೆಯಲ್ಲಿ ಆಯೋಜಿಸಿರುವ 220ನೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಈ ಮಾಹಿತಿ ನೀಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಬೆಂಗಳೂರಿನಲ್ಲಿರುವ ರಕ್ಷಣಾ ಇಲಾಖೆಯ ಜಾಗದಲ್ಲಿ ಒಂದು ಉದ್ಯಾನ ನಿರ್ಮಿಸುವ ಉದ್ದೇಶವಿದ್ದು, ಈ ಕುರಿತು ರಕ್ಷಣಾ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಭೂಮಿ ರಕ್ಷಣಾ ಇಲಾಖೆಯ ವಶದಲ್ಲೇ ಉಳಿಯಲಿದ್ದು, ಉದ್ಯಾನ ನಿರ್ಮಾಣಕ್ಕೆ ಮಾತ್ರ ಅನುಮತಿ ಕೋರಲಾಗಿದೆ. ಶೀಘ್ರದಲ್ಲೇ ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಈ ಕುರಿತು ಚರ್ಚೆ ನಡೆಸುವುದಾಗಿ ತಿಳಿಸಿದರು.
ಇದರ ಜೊತೆಗೆ, ನಗರದೊಳಗಿನ ಅರಣ್ಯ ಇಲಾಖೆಯ ಜಾಗದಲ್ಲಿಯೂ ಮತ್ತೊಂದು ಉದ್ಯಾನ ನಿರ್ಮಿಸುವ ಬಗ್ಗೆ ಚರ್ಚೆ ನಡೆದಿದ್ದು, ಜಿಬಿಎ, ಬಿಡಿಎ, ತೋಟಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಿದರು. ನಗರದ ಹಸಿರು ಪ್ರದೇಶಗಳನ್ನು ಸಂರಕ್ಷಿಸಿ, ಸಾರ್ವಜನಿಕರಿಗೆ ಉತ್ತಮ ಪರಿಸರ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದರು.
ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಆಹ್ವಾನ
ಲಾಲ್ಬಾಗ್ ಕೇವಲ ಉದ್ಯಾನವನವಲ್ಲ, ಅದು ಇತಿಹಾಸದ ಸಂಕೇತವಾಗಿದೆ ಎಂದು ಹೇಳಿದ ಸಿಎಂ, ಈ ಬಾರಿಯ ಫಲಪುಷ್ಪ ಪ್ರದರ್ಶನವನ್ನು ‘ಗಂಗ ಸಾಮ್ರಾಜ್ಯ ವೈಭವ’ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ ಎಂದರು.
ಗಂಗರ ಕಾಲದ ಕೃಷಿ, ಕೆರೆಗಳ ನಿರ್ಮಾಣ, ರೈತರ ಜೀವನ, ಸಮಾನತೆ ಹಾಗೂ ಸಂಸ್ಕೃತಿಯನ್ನು ಪುಷ್ಪಗಳ ಮೂಲಕ ಅನಾವರಣಗೊಳಿಸಲಾಗಿದ್ದು, ಇದು ಕರ್ನಾಟಕದ ಐತಿಹಾಸಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಯುವಕರು, ಮಹಿಳೆಯರು, ಹಿರಿಯರು ಸೇರಿದಂತೆ ರಾಜ್ಯದ ಜನರು ಈ ಪ್ರದರ್ಶನವನ್ನು ವೀಕ್ಷಿಸಿ ಅದರ ಸೊಬಗನ್ನು ಸವಿಯಬೇಕು ಎಂದು ಮನವಿ ಮಾಡಿದರು.
ಲಾಲ್ಬಾಗ್ ಅನ್ನು ಹೈದರಾಲಿ ಸ್ಥಾಪಿಸಿದ್ದು, ಬ್ರಿಟಿಷರು ಅಭಿವೃದ್ಧಿಪಡಿಸಿದ್ದರು. ಇದೀಗ ಕರ್ನಾಟಕ ಸರ್ಕಾರ ಅದರ ಪರಂಪರೆಯನ್ನು ಮುಂದುವರಿಸುತ್ತಿದೆ ಎಂದು ಅವರು ತಿಳಿಸಿದರು. ಈ ವರ್ಷದ ಫಲಪುಷ್ಪ ಪ್ರದರ್ಶನವು 10 ದಿನಗಳ ಕಾಲ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ.
ಆಗಸ್ಟ್ 15ರಂದು ರೈತರಿಗೆ ಹೊಸ ಯೋಜನೆ
ರೈತರ ಬದುಕು ಬಲಪಡಿಸುವ ಉದ್ದೇಶದಿಂದ ಸರ್ಕಾರ ಹೊಸ ಪಾಲುದಾರಿಕೆ ಕಾರ್ಯಕ್ರಮ ರೂಪಿಸುತ್ತಿದ್ದು, ಇದರ ಅಧಿಕೃತ ಘೋಷಣೆಯನ್ನು ಆಗಸ್ಟ್ 15ರಂದು ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.
ಹಸಿರು ಪ್ರದೇಶಗಳ ವಿಸ್ತರಣೆ, ರೈತರ ಅಭಿವೃದ್ಧಿ ಹಾಗೂ ಸರ್ಕಾರದ ಸಹಭಾಗಿತ್ವದ ಮೂಲಕ ಕೃಷಿ ಕ್ಷೇತ್ರಕ್ಕೆ ಹೊಸ ಶಕ್ತಿ ತುಂಬುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದರು.
ಸಚಿವ ಸ್ಥಾನ ಕುರಿತು ಪ್ರತಿಕ್ರಿಯೆ
ಕಾಂಗ್ರೆಸ್ ಹಿರಿಯ ನಾಯಕರ ನಿವಾಸಗಳಿಗೆ ಭೇಟಿ ಹಾಗೂ ಸಚಿವ ಸ್ಥಾನ ಕುರಿತ ಅಸಮಾಧಾನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಪಕ್ಷದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.
“ನಮ್ಮ ಪಕ್ಷದಲ್ಲಿ 140 ಶಾಸಕರು ಹಾಗೂ 40 ವಿಧಾನ ಪರಿಷತ್ ಸದಸ್ಯರಿದ್ದಾರೆ. ಆದರೆ ಸಂವಿಧಾನಾತ್ಮಕವಾಗಿ ಕೇವಲ 33 ಮಂದಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದೆ. ನಮ್ಮ ಪಕ್ಷದ ಎಲ್ಲ ಶಾಸಕರೂ ಸಚಿವರಾಗುವ ಅರ್ಹತೆ ಹೊಂದಿದ್ದಾರೆ. ಎಲ್ಲರೂ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ್ದಾರೆ. ಆದ್ದರಿಂದ ಅವರ ಭಾವನೆಗಳಿಗೆ ಗೌರವ ನೀಡುತ್ತೇವೆ ಮತ್ತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ” ಎಂದು ಡಿ.ಕೆ. ಶಿವಕುಮಾರ್ ಹೇಳಿದರು.

- Advertisement -spot_img

More articles

- Advertisement -spot_img

Latest article