ಮತದಾನದ ಮಹತ್ವ ಅರಿತು ಕಡ್ಡಾಯವಾಗಿ ಮತದಾನ ಮಾಡಬೇಕು. ಅದು ಪ್ರತಿಯೊಬ್ಬ ಭಾರತೀಯರ ಕರ್ತವ್ಯ. ಪ್ರಜಾ ಪ್ರಭುತ್ವದ ಗೆಲುವು ಅಡಗಿರುವುದು ಪ್ರಜೆಗಳು ನೀಡುವ ಈ ತೀರ್ಪಿನಲ್ಲೇ. ಮತದಾನದ ಮೂಲಕ ಸಮರ್ಥ ನಾಯಕನನ್ನು ಆರಿಸಿದಾಗಲೇ ಆಡಳಿತದಲ್ಲಿ ಸುಧಾರಣೆ ಮತ್ತು ಅಭಿವೃದ್ದಿ ಕಾಣಲು ಸಾಧ್ಯ.
ಯಾವುದೇ ಆಮಿಷಕ್ಕೆ ಒಳಗಾಗದೆ, ಜವಾಬ್ದಾರಿಯುತವಾಗಿ ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಲಕ್ಷಣ. ಸದ್ಯ ಈ ಪ್ರಜಾಪ್ರಭುತ್ವದ ಹಬ್ಬದಲ್ಲಿ ಕೇವಲ ಜನ ಸಾಮಾನ್ಯರು ಮಾತ್ರವಲ್ಲದೇ ಸೂಪರ್ ಸ್ಟಾರ್ ಗಳು ಕೂಡ ಭಾಗವಹಿಸಿದ್ದಾರೆ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಇಂದು ತಮಿಳುನಾಡಿನಲ್ಲಿ ಮತದಾನ ಪ್ರಕ್ರಿಯೆ ಶುರುವಾಗಿದೆ, ಈ ಹಿನ್ನೆಲೆ ಬೆಳಗ್ಗೆ 9 ಗಂಟೆ ಗೆ ಚೆನ್ನೈನ ಸ್ಟೆಲಾ ಮೇರಿಸ್ ಕಾಲೇಜ್ ಮತಗಟ್ಟೆಯಲ್ಲಿ ರಜನಿಕಾಂತ್ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತದಾನದ ಹಕ್ಕು ಇರುವ ಪ್ರತಿಯೊಬ್ಬರು ತಪ್ಪದೇ ಮತ ಚಲಾಯಿಸಿ ಎಂದು ಮಾಧ್ಯಮಗಳ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ.
ಇನ್ನು ಬೆಳ್ಳಂ ಬೆಳಗ್ಗೆ 7ಕ್ಕೆ ತಮಿಳು ನಟ ಅಜಿತ್ ಬಂದು ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷ. ಈ ಮೂಲಕ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸಿದ ಮೊದಲ ಮತದಾರ ಎಂಬ ಹೆಗ್ಗಳಿಕೆಗೆ ಅಜಿತ್ ಪಾತ್ರರಾಗಿದ್ದಾರೆ. ಚೆನ್ನೈನ ತಿರುವನ್ಮಿಯೂರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮತಗಟ್ಟೆಯಲ್ಲಿ ಅಜಿತ್ ಮತದಾನ ಮಾಡಿದ್ಧಾರೆ.

ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ಸಿ ಜೋಸೆಫ್ ವಿಜಯ್ ಚೆನ್ನೈನ ನೀಲಂಗರೈನಲ್ಲಿರುವ ಶಾಲೆಯಲ್ಲಿ ಸ್ಥಾಪಿಸಲಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ.
ನಟ ಮತ್ತು ರಾಜ್ಯಸಭಾ ಸಂಸದ ಕಮಲ್ ಹಾಸನ್ ತಮ್ಮ ಪುತ್ರಿ ಶ್ರುತಿ ಹಾಸನ್ ಅವರೊಂದಿಗೆ ತೇನಾಂಪೇಟೆಯ ಎಲ್ಡಮ್ಸ್ ರಸ್ತೆಯಲ್ಲಿರುವ ಚೆನ್ನೈ ಹೈಸ್ಕೂಲ್‌ನಲ್ಲಿ ಮತದಾನ ಮಾಡಿದ್ದಾರೆ. ರಜಿನಿಕಾಂತ್ ಮಾಜಿ ಅಳಿಯ ಮತ್ತು ನಟ ಧನುಷ್ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ.



