No menu items!
12 C
Munich
Saturday, April 25, 2026

ಬಿಜೆಪಿ ಸಚಿವರಿಗೆ ಇಲ್ಲಿಂದ ತೊಲಗಿ ಎಂದ ತಪ್ಪಿಗೆ ಮಹಿಳೆ ವಿರುದ್ಧ ದಾಖಲಾಯ್ತ ದೂರು 

Must read

ನಮ್ಮ ದೇಶದಲ್ಲಿ ಚುನಾವಣೆ‌ ಇರಲಿ, ಇಲ್ಲದಿರಲಿ, ರಸ್ತೆಗಳು ಮಾತ್ರ ಯಾವಾಗಲೂ ರಾಜಕೀಯದವರ ಸ್ವತ್ತು. ಜನಸಾಮಾನ್ಯರು ಆಫೀಸ್ ಗೆ ತಲುಪಲಿ ಬಿಡಲಿ ಅಥವಾ ಮನೆಗೆ ಹೋಗಲು ಸಾಧ್ಯವಾಗದೇ ರಸ್ತೆಯಲ್ಲಿ ನರಳಲಿ, ಸ್ಕೂಲ್ ವ್ಯಾನ್ ಟೈಮಿಗೆ ಸರಿಯಾಗಿ ಬರಲಿ, ಬಿಡಲಿ, ಆಂಬುಲೆನ್ಸ್ ಗೆ ದಾರಿ ಸಿಗಲಿ ಸಿಗದಿರಲಿ, ವಿಐಪಿ ಮೆರವಣಿಗೆ ಮಾತ್ರ ನಿರಾತಂಕವಾಗಿ ಸಾಗುತ್ತಿರುತ್ತೆ.

ಟ್ಯಾಕ್ಸ್ ಕಟ್ಟಿ ಜನ ಸಾಮಾನ್ಯರು ಟ್ರಾಫಿಕ್ ನಲ್ಲಿ ಒದ್ದಾಡುತ್ತಿದ್ದರೂ ರಾಜಕೀಯ ನಾಯಕರು ಮಾತ್ರ ಕ್ಯಾರೇ ಎನ್ನಲ್ಲ. ಒಂದರ್ಥದಲ್ಲಿ
ಈ ವಿಐಪಿ ಕಲ್ಚರ್ ನಮ್ಮ ದೇಶಕ್ಕೆ ಶಾಪ‌. ಆದರೆ ಈ ಸಂಸ್ಕ್ರತಿಯನ್ನು ನಮ್ಮ ಸತ್ಪಜ್ರೆಗಳು ಪ್ರಶ್ನೆ ಮಾಡಲ್ಲ. ಅಲ್ಲೊಬ್ಬರು ಇಲ್ಲೊಬ್ಬರು ಪ್ರಶ್ನೆ ಮಾಡುತ್ತಾರಾದರೂ ಅಲ್ಲಿಯೂ ನಮ್ಮ ನಡುವೆ ಇರುವ ಸಾರ್ವಜನಿಕರು ಚಕಾರ ಎತ್ತುತ್ತಾರೆ. ದೂರು ಸಲ್ಲಿಸುತ್ತಾರೆ. ಉದಾಹರಣೆಗೆ ಮುಂಬೈನಲ್ಲಿ ನಡೆದ ಪ್ರಕರಣವನ್ನೇ ತೆಗೆದುಕೊಳ್ಳಿ.

ಹೌದು, ಎಲ್ಲರಿಗೆ ಗೊತ್ತಿರುವಂತೆ ಮೊನ್ನೆ ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಎಲ್ಲರೂ ಅವರ ಪಾಡಿಗೆ ಅವರಿದ್ದರು. ಆದರೆ ಒಬ್ಬ ಮಹಿಳೆ ಮಾತ್ರ ಸಿಡಿದೆದ್ದರು. ಆಕ್ರೋಶಗೊಂಡ ಮಹಿಳೆಯೊಬ್ಬರು ರಸ್ತೆಯಲ್ಲಿ ರ್ಯಾಲಿ ನಡೆಸುತ್ತಿದ್ದ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ವಿಪರ್ಯಾಸ ಅಂದರೆ ಈಗ ಮಹಿಳೆಯ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ‌.

ವಕೀಲ ಗುಣರತ್ನ ಸಡಾವರ್ತೆ ಅವರ ಪುತ್ರಿ ಝನ್ ಸಡಾವರ್ತೆ ಬುಧವಾರ ವರ್ಲಿ ಪೊಲೀಸ್ ಠಾಣೆಯಲ್ಲಿ ಈ ದೂರನ್ನು ದಾಖಲಿಸಿದ್ದಾರೆ ಎಂದು ಪೊಲೀಸರು ಶುಕ್ರವಾರ (ಏಪ್ರಿಲ್ 24) ತಿಳಿಸಿದ್ದಾರೆ. ಸಾರ್ವಜನಿಕ ನೆಮ್ಮದಿಗೆ ಭಂಗ ಆಗಿದೆ ಎಂದು ಶ್ರೀಯುತರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಏನಿದು ಪ್ರಕರಣ…?

ಏಪ್ರಿಲ್ 21 ರಂದು ಮುಂಬೈನ ವರ್ಲಿ ಪ್ರದೇಶದಲ್ಲಿ ಮಹಿಳಾ ಮೀಸಲಾತಿ ಮಸೂದೆ ವಿಚಾರವಾಗಿ ಬಿಜೆಪಿ ಪ್ರತಿಭಟನಾ ಕ್ಯಾಲಿ ಹಮ್ಮಿಕೊಂಡಿತ್ತು. ಈ ವೇಳೆ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದೇ ಸಮಯದಲ್ಲಿ ತನ್ನ ಮಗುವನ್ನು ಕರೆತರಲು ಹೋಗುತ್ತಿದ್ದ ಮಹಿಳೆಯೊಬ್ಬರು ಈ ಟ್ರಾಫಿಕ್‌ನಿಂದಾಗಿ ರಸ್ತೆಯಲ್ಲೇ ಸಿಲುಕಿಕೊಂಡಿದ್ದರು.

ಇದರಿಂದ ಸಿಟ್ಟಿಗೆದ್ದ ಮಹಿಳೆ ಕಾರಿನಿಂದ ಇಳಿದು ನೇರವಾಗಿ ಮಹಾರಾಷ್ಟ್ರ ಸಚಿವ ಗಿರೀಶ್ ಮಹಾಜನ್ ಅವರ ಬಳಿ ಬಂದು, ಇಲ್ಲಿಂದ ಹೊರಡಿ, ನಿಮ್ಮಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದೆ. ಪಕ್ಕದಲ್ಲೇ ಮೈದಾನವಿದ್ದರೂ ರಸ್ತೆಯಲ್ಲಿ ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಾ ಎಂದು ಕಿಡಿ ಕಾರಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.

ಸದ್ಯ ಸಚಿವರ ವಿರುದ್ದ ಗುಡುಗಿದ್ದ ಮಹಿಳೆಯ ವಿರುದ್ದ ದೂರು ಸಲ್ಲಿಕೆಯಾಗಿದ್ದರೂ, ಈವರೆಗೆ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಮುಂಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

- Advertisement -spot_img

More articles

- Advertisement -spot_img

Latest article