”ಆ ದಿನಗಳು” ಸಿನಿಮಾದ ಮೂಲಕ ಚೇತನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ, ಇವರು ಸ್ಯಾಂಡಲ್‌ವುಡ್‌ನ ಮುಂದಿನ ಭರವಸೆಯ ಹೀರೋ ಅಂದುಕೊಂಡವರೇ ಹೆಚ್ಚು. ಅಮೆರಿಕದಲ್ಲಿ ಹುಟ್ಟಿ ಬೆಳೆದ ಚೇತನ್, ಅಲ್ಲಿನ ಐಷಾರಾಮಿ ಬದುಕನ್ನು ಬಿಟ್ಟು ಇಲ್ಲಿ ಸಿನಿಮಾ ಮಾಡ್ತಾರೆ ಅಂದ್ರೆ ಎಲ್ಲರಿಗೂ ಅವರ ಬಗ್ಗೆ ಒಂದು ಗೌರವ ಇತ್ತು.
ಆದರೆ ಕಾಲ ಕ್ರಮೇಣ ಚೇತನ್ ತಮ್ಮ ಹಾದಿಯನ್ನೇ ಬದಲಿಸಿಕೊಂಡರು. ನಟನೆಯಿಂದ ದೂರ ಸರಿದು ಪ್ರಗತಿಪರ ಚಿಂತಕನ ಪಟ್ಟ ಏರಿಕೊಂಡರು. ಸರ್ಕಾರದ ವೈಫಲ್ಯಗಳನ್ನ ಪ್ರಶ್ನೆ ಮಾಡ್ತಾ ಸದಾ ಸುದ್ದಿಯಲ್ಲಿರೋ ಚೇತನ್, ಈಗ ಕನ್ನಡದ ಅಸ್ಮಿತೆ ಡಾ. ರಾಜ್‌ಕುಮಾರ್ ವಿಚಾರದಲ್ಲಿ ತಲೆಹಾಕಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಯಾವಾಗಲೂ ಏನಾದರೊಂದು ವಿವಾದಾತ್ಮಕ ಹೇಳಿಕೆ ಕೊಟ್ಟು ಪ್ರಚಾರ ಗಿಟ್ಟಿಸಿಕೊಳ್ಳೋದು ಚೇತನ್‌ಗೆ ಅಭ್ಯಾಸವಾಗಿಬಿಟ್ಟಿದೆ ಅನ್ನೋದು ಸಾರ್ವಜನಿಕರ ದೂರು. ಮೊನ್ನೆ ಮೊನ್ನೆಯಷ್ಟೇ ಅಣ್ಣಾವ್ರ ಸ್ಮಾರಕದ ಬಗ್ಗೆ ಪ್ರಶ್ನೆ ಮಾಡಿ ಅಭಿಮಾನಿಗಳ ಆಕ್ರೋಶಕ್ಕೆ ತುತ್ತಾಗಿದ್ದ ಚೇತನ್, ಈಗ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಅಣ್ಣಾವ್ರ ವಿಚಾರದಲ್ಲಿ ಚೇತನ್ ಹೇಳಿಕೆಯನ್ನು ಖಂಡಿಸಿದ್ದ ನಿಖಿಲ್ ಕುಮಾರಸ್ವಾಮಿ ವಿರುದ್ಧ ಇದೀಗ ಟ್ವಿಟರ್ (X) ಸಮರ ಶುರು ಹಚ್ಚಿಕೊಂಡಿದ್ದಾರೆ.
ಹೌದು, ಅಸಲಿಗೆ ಡಾ.ರಾಜ್‌ಕುಮಾರ್ ಸ್ಮಾರಕದ ಕುರಿತು ಚೇತನ್ ಆಡಿದ್ದ ಮಾತುಗಳಿಗೆ ನಿನ್ನೆ (ಏಪ್ರಿಲ್ 27) ಕೋಲಾರದಲ್ಲಿ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದರು. ಅಣ್ಣಾವ್ರ ಬಗ್ಗೆ ಮಾತನಾಡಲು ಚೇತನ್ ಅವರಿಗೆ ಯಾವ ಯೋಗ್ಯತೆ ಇದೆ ? ಇವರು ಕೇವಲ ಪ್ರಚಾರಕ್ಕಾಗಿ ಇಂತದ್ದನ್ನೆಲ್ಲ ಮಾಡ್ತಾರೆ. ಅಣ್ಣಾವ್ರು ಯಾವತ್ತೂ ಏನನ್ನೂ ಬಯಸದ ಮಹಾನ್ ಚೇತನ ಎಂದು ನಿಖಿಲ್ ಗುಡುಗಿದ್ದರು. ಈ ಮಾತಿನಿಂದ ಕೆರಳಿದ ಚೇತನ್, ಪ್ರಜಾಪ್ರಭುತ್ವದಲ್ಲಿ ಯಾರು ಮಾತನಾಡಲು ಯೋಗ್ಯ ಎಂದು ಪ್ರಶ್ನೆ ಮಾಡಿದರು.
ಚೇತನ್ ಇಲ್ಲಿಗೆ ನಿಲ್ಲಿಸಲಿಲ್ಲ, ನಿಖಿಲ್ ಕುಮಾರಸ್ವಾಮಿ ಅವರ ವೈಯಕ್ತಿಕ ವಿಚಾರಗಳನ್ನು ಎಳೆದು ತಂದರು. ಮೂರು ಬಾರಿ ಚುನಾವಣೆಯಲ್ಲಿ ಸೋತವರು, ಸ್ವಜನಪಕ್ಷಪಾತ ಹೊರತು ಪಡಿಸಿ ಬೇರೇನು ಸಾಧನೆ ಮಾಡದವರು, ಎಂದು ಚೇತನ್ ಕಾಲೆಳೆದಿದ್ದರು. ಈ ವೈಯಕ್ತಿಕ ಟೀಕೆಗಳಿಗೆ ಈಗ ನಿಖಿಲ್ ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದ್ದಾರೆ. ಹಾಗಿದ್ದರೆ ಚೇತನ್‌ಗೆ ನಿಖಿಲ್ ನಿಡಿದ ಉತ್ತರವೇನು..? ತಮ್ಮ ಟ್ವಿಟರ್ ಖಾತೆಯಲ್ಲಿ ಚೇತನ್ ಕುರಿತು ನಿಖಿಲ್ ಕುಮಾರಸ್ವಾಮಿ ವ್ಯಕ್ತಪಡಿಸಿರುವ ಅಭಿಪ್ರಾಯವೇನು ಎಂದು ತಿಳಿಯಲು ಮುಂದೆ ಓದಿ
ನಿಖಿಲ್ ಕುಮಾರಸ್ವಾಮಿ ಅವರ ಬರಹ
ರಾಜ್‌ಕುಮಾರ್ ಎಂದರೆ ಕೇವಲ ಒಬ್ಬ ನಟರಲ್ಲ, ಅವರು ಆರು ಕೋಟಿ ಕನ್ನಡಿಗರ ಭಾವನೆ. ಕೋಟಿ ಕನ್ನಡಿಗರ ಆರಾಧ್ಯ ದೈವ ಅಣ್ಣಾವ್ರ ಬಗ್ಗೆ ಹಗುರವಾಗಿ ಮಾತನಾಡುವುದು ನಿಮ್ಮ ಅಹಂಕಾರದ ಪರಮಾವಧಿ. ಗೋಕಾಕ್ ಚಳವಳಿಯ ಮೂಲಕ ಕನ್ನಡಕ್ಕೆ ಅಸ್ಮಿತೆ ತಂದುಕೊಟ್ಟ ಧೀಮಂತ ವ್ಯಕ್ತಿತ್ವದ ಬಗ್ಗೆ ಟೀಕಿಸುವ ಮೊದಲು ಇತಿಹಾಸ ತಿಳಿದುಕೊಳ್ಳಿ.
ಸಾರ್ವಜನಿಕ ಜೀವನದಲ್ಲಿ ಟೀಕೆಗಳು ಸಹಜ, ಆದರೆ ಅವುಗಳಿಗೆ ಒಂದು ಘನತೆ ಇರಬೇಕು. ನಮ್ಮ ಕುಟುಂಬದ ಮೇಲಿನ ವೈಯಕ್ತಿಕ ದಾಳಿ ಅಥವಾ ಸೋಲು-ಗೆಲುವಿನ ಮಾತುಗಳನ್ನು ನಾವು ಸದಾ ವಿನಮ್ರತೆಯಿಂದಲೇ ಸ್ವೀಕರಿಸುತ್ತೇವೆ.
ಪ್ರಜಾಪ್ರಭುತ್ವದಲ್ಲಿ ಅಂತಿಮ ತೀರ್ಪುಗಾರರು ಜನರೇ ಹೊರತು, ಸಮಾಜದಲ್ಲಿ ದ್ವೇಷ ಬಿತ್ತುವ ವ್ಯಕ್ತಿಗಳಲ್ಲ.ಸಂಸ್ಕಾರ ಮನೆಯಿಂದ ಬರಬೇಕು, ಟೀಕೆಗಳು ಜನರ ಪ್ರೀತಿಯ ಅಡಿಪಾಯದ ಮೇಲಿರಬೇಕು; ಕೇವಲ ಪ್ರಚಾರದ ಹಪಾಹಪಿಯಿಂದಲ್ಲ! ಹೆಸರಿನಲ್ಲಿ ಅಹಿಂಸೆ ಇರಬಹುದು, ಆದರೆ ನಿಮ್ಮ ಪ್ರತಿಯೊಂದು ಮಾತೂ ಕನ್ನಡಿಗರ ಭಾವನೆಗಳಿಗೆ ಮಾಡುವ ಹಿಂಸೆ!
ಹೀಗೆ ನಿಖಿಲ್ ಕುಮಾರಸ್ವಾಮಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚೇತನ್ ಕುರಿತು ಬರೆದುಕೊಂಡಿದ್ಧಾರೆ. ಇದಕ್ಕೆ ಚೇತನ್ ಮತ್ತೆ ಪ್ರತಿಕ್ರಿಯಿಸುತ್ತಾರಾ..? ಈ ವಿವಾದ ಎಲ್ಲಿ ಹೋಗಿ ಮುಟ್ಟುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.



