No menu items!
12.5 C
Munich
Tuesday, April 28, 2026

ಆಡುಗೋಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಯುವತಿಯ ನಗ್ನ ಮೃತದೇಹ ಪತ್ತೆ ; ಆ ಚೀಟಿಗಳಲ್ಲಿದೆಯಾ ಸಾವಿನ ಸೀಕ್ರೆಟ್?

Must read

ತಮ್ಮ ಸುತ್ತ ಮುತ್ತ ಹಲವು ಜನ ಇದ್ದರೂ ಕೂಡ ಹಲವರು ಯಾರಲ್ಲಿಯೂ ಹೇಳಿಕೊಳ್ಳಲಾಗದ ನೋವಿಂದ ಒದ್ದಾಡುತ್ತಾರೆ. ಮಾನಸಿಕ ಖಿನ್ನತೆಗೆ ಜಾರುತ್ತಾರೆ. ಇನ್ನೂ ಬೆಂಗಳೂರಿನಂತಹ ಮಹಾನಗರದಲ್ಲಿ ಅಕ್ಕ-ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎನ್ನುವ ವಿಚಾರವೇ ಹಲವರಿಗೆ ಗೊತ್ತಿರುವುದಿಲ್ಲ. ಇನ್ನೂ ಕುಶಲೋಪರಿ ವಿಚಾರಿಸುವುದು ದೂರದ ಮಾತು.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ಪ್ರತಿ ಐವರಲ್ಲಿ ಒಬ್ಬರು ಯಾವುದಾದರೊಂದು ರೀತಿಯ ಮಾನಸಿಕ ಒತ್ತಡ ಅಥವಾ ಖಿನ್ನತೆಯಿಂದ ಬಳಲುತ್ತಿದ್ದಾರೆ. ದುರಂತವೆಂದರೆ, ಈ ಮಾನಸಿಕ ರೋಗವನ್ನು ನಮ್ಮಲ್ಲಿ ಇನ್ನೂ ಯಾರು ಗಂಭೀರ ಕಾಯಿಲೆ ಎಂದು ಪರಿಗಣಿಸಿಯೇ ಇಲ್ಲ. ಬದಲಿಗೆ ಮತ್ತೊಬ್ಬರ ಖಿನ್ನತೆಯನ್ನೇ ಅಪಹಾಸ್ಯ ಮಾಡುತ್ತಾರೆ. ತಮ್ಮ ನೋವನ್ನು ಹಲವರು ಹೇಳಿಕೊಳ್ಳದಿರಲು ಇದು ಕೂಡ ಒಂದು ಕಾರಣ. ಈ ಒಂಟಿತನ ಮತ್ತು ಖಿನ್ನತೆ ಒಬ್ಬ ಮನುಷ್ಯನನ್ನು ಯಾವ ಮಟ್ಟಕ್ಕೆ ಕರೆದುಕೊಂಡು ಹೋಗಬಹುದು ಅನ್ನೋದಕ್ಕೆ ಆಡುಗೋಡಿಯಲ್ಲಿ ನಡೆದ ಈ ಘಟನೆಯೇ ಸಾಕ್ಷಿ.

ಹೌದು, ಬೆಂಗಳೂರಿನ ಆಡುಗೋಡಿಯ ಮುನಿಕೃಷ್ಣಪ್ಪ ಲೇಔಟ್‌ನಲ್ಲಿ ಜಾರ್ಖಂಡ್ ಮೂಲದ 34 ವರ್ಷದ ಪೂಜಾ ದತ್ತಾ ಎಂಬಾಕೆಯ ಅರೆಕೊಳೆತ ಸ್ಥಿತಿಯ ಮೃತದೇಹ ಪತ್ತೆಯಾಗಿದೆ. ಇದು ಮೇಲ್ನೋಟಕ್ಕೆ ಒಂದು ಸಾಧಾರಣ ಸಾವಿನಂತೆ ಕಂಡರೂ, ಆಕೆಯ ಮನೆಯೊಳಗೆ ಪೊಲೀಸರು ಕಂಡ ದೃಶ್ಯಗಳು ಮಾತ್ರ ಕರುಳು ಹಿಂಡುವಂತಿವೆ. ವಾಸವಿದ್ದ ಮನೆಯಲ್ಲೇ ನಗ್ನ ಸ್ಥಿತಿಯಲ್ಲಿ ಬಿದ್ದಿದ್ದ ಆಕೆಯ ದೇಹ ಸಂಪೂರ್ಣವಾಗಿ ಕೊಳೆತು ನಾರುತ್ತಿತ್ತು.

ಸುಮಾರು ಮೂರು ವರ್ಷಗಳಿಂದ ಇಲ್ಲೇ ಬಾಡಿಗೆಗಿದ್ದ ಈಕೆ, ಖಾಸಗಿ ಕಂಪನಿಯ ಕೆಲಸ ಬಿಟ್ಟ ಮೇಲೆ ಸಂಪೂರ್ಣವಾಗಿ ಜಗತ್ತಿನಿಂದ ದೂರವಾಗಿದ್ದಳು ಎಂಬ ಅನುಮಾನ ಈಗ ದಟ್ಟವಾಗಿದೆ. ಪೊಲೀಸರು ಮನೆ ಬಾಗಿಲು ಒಡೆದು ಒಳಗೆ ಹೋದಾಗ ಕಂಡ ದೃಶ್ಯ ಸಿನಿಮಾದ ಹಾರರ್ ಸೀನ್‌ನಂತಿತ್ತು ಅಂದರೆ ಅದು ತಪ್ಪಾಗಲಿಕ್ಕಿಲ್ಲ. ಯಾಕೆಂದರೆ ಮನೆಯ ಗೋಡೆಗಳ ತುಂಬೆಲ್ಲಾ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಬರೆದ ಚೀಟಿಗಳು ಅಂಟಿಕೊಂಡಿದ್ದವು. ಯಾವುದೋ ರಹಸ್ಯ ಸಂದೇಶಗಳಂತೆ ಚಿತ್ರಗಳನ್ನು ಬಿಡಿಸಿ ಗೋಡೆಗೆ ಹಾಕಲಾಗಿತ್ತು.

ಇಡೀ ಕೋಣೆಯಲ್ಲಿ ಐದಾರು ಮೂಟೆಗಳಷ್ಟು ಕಸ ಮತ್ತು ಹರಿದ ಕಾಗದದ ಹಾಳೆಗಳನ್ನು ತುಂಬಿಸಿಟ್ಟುಕೊಳ್ಳಲಾಗಿತ್ತು. ಇದನ್ನೆಲ್ಲಾ ನೋಡಿದರೆ, ಆಕೆ ತೀವ್ರವಾದ ಮಾನಸಿಕ ಖಿನ್ನತೆ ಅಥವಾ ಭ್ರಮೆಯಲ್ಲಿ ಬದುಕುತ್ತಿದ್ದಳೇ ಎಂಬ ಪ್ರಶ್ನೆ ಮೂಡುವುದು ಸಹಜ.

ನೆರೆಹೊರೆಯವರು ಹೇಳುವ ಪ್ರಕಾರ, ಪೂಜಾ ಆಗಾಗ ರಸ್ತೆಯಲ್ಲಿ ಒಬ್ಬಳೇ ಬೈದಾಡಿಕೊಂಡು ಹೋಗುತ್ತಿದ್ದಳಂತೆ. ಯಾರ ಜೊತೆಗೂ ಹೆಚ್ಚಾಗಿ ಮಾತನಾಡದ ಈಕೆ, ತನ್ನದೇ ಆದ ಒಂದು ಕತ್ತಲ ಲೋಕದಲ್ಲಿ ಬಂಧಿಯಾಗಿದ್ದಳು. ಒಬ್ಬ ವ್ಯಕ್ತಿ ಮಾನಸಿಕವಾಗಿ ಕುಗ್ಗಿದಾಗ ತನ್ನ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ಪ್ರಪಂಚದ ಅರಿವನ್ನೇ ಕಳೆದುಕೊಳ್ಳುತ್ತಾನೆ ಅನ್ನೋದಕ್ಕೆ ಆ ಕೋಣೆಯಲ್ಲಿದ್ದ ಕಸದ ರಾಶಿಯೇ ಸಾಕ್ಷಿ. ಕಳೆದ ಗುರುವಾರ ದಿನಸಿ ತರಲು ಬಂದಿದ್ದೇ ಈಕೆ ಜನರಿಗೆ ಕಂಡ ಕೊನೆಯ ಕ್ಷಣ.

ಆದರೆ ಈ ಸಾವಿನ ಹಿಂದೆ ಬರೀ ಮಾನಸಿಕ ಆರೋಗ್ಯದ ಕಥೆಯಷ್ಟೇ ಇಲ್ಲ, ಈ ಕಥೆಯಲ್ಲಿ ಅನಾಮಿಕ ವ್ಯಕ್ತಿಯ ನೆರಳು ಇದೆ. ಮನೆ ಮಾಲೀಕರಾದ ಜಾನಕಮ್ಮ ಹೇಳುವಂತೆ, ಈಕೆಯನ್ನು ಭೇಟಿ ಮಾಡಲು ಒಬ್ಬ ಯುವಕ ಆಗಾಗ ಬರುತ್ತಿದ್ದ. ಬಂದಾಗಲೆಲ್ಲಾ ಅವರಿಬ್ಬರ ನಡುವೆ ದೊಡ್ಡ ಮಟ್ಟದ ಜಗಳ ನಡೆಯುತ್ತಿತ್ತು. ಆತನ ಬೈಕ್ ಸದಾ ಮನೆಯ ಮುಂದೆ ನಿಂತಿರುತ್ತಿತ್ತು. ಆತ ಯಾರು? ಪೂಜಾ ಜೊತೆ ಆತನಿಗಿದ್ದ ಸಂಬಂಧವೇನು? ಪ್ರತಿ ಸಾರಿ ಜಗಳ ನಡೆಯಲು ಕಾರಣವೇನು ಅನ್ನೋದು ಈಗ ತನಿಖೆಯ ಪ್ರಮುಖ ಹಂತವಾಗಿದೆ.

ಸದ್ಯಕ್ಕೆ ಪೂಜಾ ಸಾವಿನ ಸುತ್ತ ಸಾಲು ಸಾಲು ಪ್ರಶ್ನೆಗಳಿವೆ. ಮನೆಯೊಳಗೆ ನಗ್ನ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದು ಮತ್ತು ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಹಲವು ಅನುಮಾಗಳಿಗೆ ಕಾರಣವಾಗಿದೆ. ಇದು ತಾನೇ ಮಾಡಿಕೊಂಡ ಆತ್ಮಹತ್ಯೆಯೋ ಅಥವಾ ಆ ಯುವಕನ ಕಾಟ ತಾಳಲಾರದೆ ನಡೆದ ಅನಾಹುತವೋ ಎಂಬುದು ಇನ್ನೂ ನಿಗೂಢ. ಸದ್ಯಕ್ಕೆ ಪೂಜಾಳ ಫೋನ್ ಸ್ವಿಚ್ ಆಫ್ ಆಗಿದ್ದು, ಪೊಲೀಸರು ಆಕೆಯ ಕಾಲ್ ಡಿಟೇಲ್ಸ್ (CDR) ಮೂಲಕ ಸತ್ಯವನ್ನು ಹೊರತೆಗೆಯಲು ಹರಸಾಹಸ ಪಡುತ್ತಿದ್ದಾರೆ.

ಅಕ್ಕಪಕ್ಕದ ಮನೆಯವರಿಗೆ ಕೆಟ್ಟ ವಾಸನೆ ಬಂದಾಗಷ್ಟೇ ಪೂಜಾ ಸತ್ತು ಮಲಗಿರುವ ವಿಚಾರ ಬೆಳಕಿಗೆ ಬಂದಿದೆ. ಮನೆಯ ಮಾಲೀಕರು ಮತ್ತು ಸ್ಥಳೀಯರು ಆಕೆಯ ವಿಚಿತ್ರ ವರ್ತನೆಯನ್ನು ಮೊದಲೇ ಗಮನಿಸಿದ್ದರೂ, ಅದರ ಬಗ್ಗೆ ಹೆಚ್ಚಾಗಿ ತಲೆ ಕೆಡಿಸಿಕೊಂಡಿಲ್ಲ. ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ವರದಿ ಬಂದ ನಂತರವಷ್ಟೇ ಪೂಜಾ ದತ್ತಾ ಸಾವಿನ ಅಸಲಿ ರಹಸ್ಯ ಹೊರಬರಲಿದೆ.

- Advertisement -spot_img

More articles

- Advertisement -spot_img

Latest article