ಬೆಂಗಳೂರಿನಲ್ಲಿ ಭೀಕರ ಮಳೆ ದುರಂತ: ಗೋಡೆ ಕುಸಿತಕ್ಕೆ 7 ಮಂದಿ ಬಲಿ – ಕಾರಣವೇನು?
ಬೆಂಗಳೂರು: ದೀರ್ಘಕಾಲದ ಬಿಸಿಲಿನ ತಾಪದಿಂದ ಕಂಗೆಟ್ಟಿದ್ದ ನಗರಕ್ಕೆ ಸುರಿದ ಭಾರೀ ಮಳೆ ತಂಪು ನೀಡಿದರೂ, ಅದರ ಬೆನ್ನಲ್ಲೇ ಭೀಕರ ದುರಂತವೊಂದು ಸಂಭವಿಸಿದೆ. ಬೌರಿಂಗ್ ಆಸ್ಪತ್ರೆ ಸಮೀಪದಲ್ಲಿ ಗೋಡೆ ಕುಸಿದು ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.ನಿನ್ನೆ ಸಂಜೆ ನಗರಾದ್ಯಂತ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದ್ದು, ಮಳೆಯ ಆರ್ಭಟಕ್ಕೆ ಆಸ್ಪತ್ರೆಯ ಹಳೆಯ ಕಾಂಪೌಂಡ್ ಗೋಡೆ ಏಕಾಏಕಿ ಕುಸಿದಿದೆ. ಗೋಡೆಯ ಪಕ್ಕದಲ್ಲಿ ಆಶ್ರಯ ಪಡೆದಿದ್ದವರು ಹಾಗೂ ವ್ಯಾಪಾರ ಮಾಡುತ್ತಿದ್ದವರ ಮೇಲೆ ಅವಶೇಷಗಳು ಬಿದ್ದ ಕಾರಣ ಈ ದುರಂತ ಸಂಭವಿಸಿದೆ.ಈ ಅವಘಡಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಕುಸಿದ ಗೋಡೆ ಸುಮಾರು 30 ವರ್ಷ ಹಳೆಯದಾಗಿದ್ದು, ಬಹಳಷ್ಟು ಶಿಥಿಲಗೊಂಡಿದ್ದರೂ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.ಇದರ ಜೊತೆಗೆ, ಆಸ್ಪತ್ರೆ ಪಕ್ಕದಲ್ಲಿ ನಡೆಯುತ್ತಿದ್ದ ಕಾಮಗಾರಿಗೆ ತಂದಿದ್ದ ಮಣ್ಣನ್ನು ಗೋಡೆಯ ಸಮೀಪದಲ್ಲೇ ಹಾಕಲಾಗಿತ್ತು. ಮಳೆಯ ಪರಿಣಾಮ ಮಣ್ಣು ತೇವಾಂಶದಿಂದ ಭಾರಿಯಾಗಿದ್ದು, ಗೋಡೆ ಕುಸಿತಕ್ಕೆ ಇದು ಕಾರಣವಾಗಿರಬಹುದು ಎಂದು ಪ್ರಾಥಮಿಕವಾಗಿ ಶಂಕಿಸಲಾಗಿದೆ.ಸ್ಥಳೀಯರು ಗೋಡೆ ಅಪಾಯಕರ ಸ್ಥಿತಿಯಲ್ಲಿದೆ ಎಂದು ಮುಂಚಿತವಾಗಿ ದೂರು ನೀಡಿದ್ದರೂ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬ ಆರೋಪವೂ ಕೇಳಿಬರುತ್ತಿದೆ. ಈ ದುರಂತದಿಂದ ನಗರದ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.



