ಸಿದ್ದರಾಮಯ್ಯ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಭೇಟಿ; ಪತ್ನಿ ಉಷಾ, ಡಿ.ಕೆ. ಸುರೇಶ್ ಸಾಥ್, ದೆಹಲಿ ಪ್ರವಾಸಕ್ಕೆ ಸಿದ್ಧತೆ

0
97

ಸಿದ್ದರಾಮಯ್ಯ ನಿವಾಸದಲ್ಲಿ ಡಿ.ಕೆ. ಶಿವಕುಮಾರ್ ಭೇಟಿ; ಪತ್ನಿ ಉಷಾ, ಡಿ.ಕೆ. ಸುರೇಶ್ ಸಾಥ್, ದೆಹಲಿ ಪ್ರವಾಸಕ್ಕೆ ಸಿದ್ಧತೆ

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚಟುವಟಿಕೆಗಳು ಚುರುಕುಗೊಂಡಿರುವ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶುಕ್ರವಾರ ಬೆಳಿಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅವರ ಕಾವೇರಿ ನಿವಾಸದಲ್ಲಿ ಭೇಟಿ ಮಾಡಿ ಮಹತ್ವದ ಮಾತುಕತೆ ನಡೆಸಿದರು. ಕನಕಪುರಕ್ಕೆ ತೆರಳುವ ಮುನ್ನ ನಡೆದ ಈ ಭೇಟಿ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪತ್ನಿ ಉಷಾ ಹಾಗೂ ಸಹೋದರ ಡಿಕೆ ಸುರೇಶ್ ಅವರೊಂದಿಗೆ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದರು. ಈ ವೇಳೆ ಉಭಯ ನಾಯಕರು ಉಪಾಹಾರ ಸೇವಿಸುತ್ತಲೇ ರಾಜ್ಯದ ಪ್ರಸ್ತುತ ರಾಜಕೀಯ ಬೆಳವಣಿಗೆಗಳು ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಿದರೆಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ಸಚಿವ ಸಂಪುಟ ವಿಸ್ತರಣೆ ಪ್ರಕ್ರಿಯೆಯಲ್ಲಿ ಯಾವುದೇ ಅಡಚಣೆ ಉಂಟಾಗದಂತೆ ಎಚ್ಚರಿಕೆ ವಹಿಸುವ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆದಿದೆ. ಅಲ್ಲದೆ, ಎರಡನೇ ಹಂತದ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ವಿಚಾರವೂ ಗಂಭೀರವಾಗಿ ಚರ್ಚೆಗೆ ಬಂದಿರುವ ಸಾಧ್ಯತೆಯಿದೆ.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಜತೆ ಸಮಾಲೋಚನೆ ನಡೆಸಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ದೆಹಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಈ ದೆಹಲಿ ಪ್ರವಾಸಕ್ಕೂ ಮುನ್ನ ಉಭಯ ನಾಯಕರು ಪರಸ್ಪರ ಭೇಟಿಯಾಗಿ ಮುಂದಿನ ರಾಜಕೀಯ ಬೆಳವಣಿಗೆಗಳು ಹಾಗೂ ಸಚಿವ ಸಂಪುಟ ರಚನೆಗೆ ಸಂಬಂಧಿಸಿದ ಪ್ರಾಥಮಿಕ ಚರ್ಚೆ ನಡೆಸಿರುವುದು ಮಹತ್ವ ಪಡೆದುಕೊಂಡಿದೆ.