ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ; ಅಧಿಕಾರಿಗಳಿಗೆ ನೋಟಿಸ್ ನೀಡಲು ಸಿಎಂ ಆದೇಶ
ಬೆಂಗಳೂರು: ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಏಳು ಜನರು ಸಾವನ್ನಪ್ಪಿದ ದುರಂತಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅವರನ್ನು ಅಮಾನತುಗೊಳಿಸಿ, ಹೊಣೆಗಾರ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಭಾರಿ ಮಳೆಯಿಂದ ಸಂಭವಿಸಿದ ಬೌರಿಂಗ್ ಆಸ್ಪತ್ರೆ ದುರಂತದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಬಿಎ ಆಯುಕ್ತರ ಸಭೆ ನಡೆಯಿತು. ಸಭೆಯಲ್ಲಿ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾದ ಹಾನಿ ಹಾಗೂ ಬೌರಿಂಗ್ ಆಸ್ಪತ್ರೆ ಗೋಡೆ ಕುಸಿತದ ಬಗ್ಗೆ ಸವಿಸ್ತಾರ ಚರ್ಚೆ ನಡೆಯಿತು.
ಗೋಡೆಗೆ ಹಾನಿಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಇದ್ದರೂ ಕಾಮಗಾರಿ ವೇಳೆ ಅದರ ಪಕ್ಕದಲ್ಲಿ ಮಣ್ಣು ಸುರಿದದ್ದು ಏಕೆ ಎಂದು ಮುಖ್ಯಮಂತ್ರಿ ಅಧಿಕಾರಿಗಳನ್ನು ತೀವ್ರವಾಗಿ ಪ್ರಶ್ನಿಸಿದರು. ವಿಶೇಷವಾಗಿ ಆಸ್ಪತ್ರೆ ಮುಖ್ಯಸ್ಥರನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಈ ಬಗ್ಗೆ ಸಮರ್ಪಕ ನಿಗಾ ವಹಿಸದಿರುವುದಕ್ಕೆ ಕಾರಣ ಕೇಳಿದರು.
ಬೌರಿಂಗ್ ಆಸ್ಪತ್ರೆ ಮುಖ್ಯಸ್ಥರಿಗೆ ನೋಟಿಸ್ ನೀಡುವಂತೆ ಸೂಚಿಸಿದ ಮುಖ್ಯಮಂತ್ರಿಗಳು, ನಗರದಲ್ಲಿರುವ ರಸ್ತೆ ಗುಂಡಿಗಳನ್ನು ತಕ್ಷಣ ಮುಚ್ಚುವ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನಿನ್ನೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭಾರೀ ಹಾನಿ ಸಂಭವಿಸಿದೆ. 250ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಹಲವು ಪ್ರದೇಶಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದೆ. ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಕುಸಿತ ದುರಂತದಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ.
ಈಗಾಗಲೇ ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಗಾಯಾಳುಗಳಿಗೆ ಉಚಿತ ಚಿಕಿತ್ಸೆ ನೀಡುವಂತೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.



