No menu items!
14.8 C
Munich
Thursday, April 30, 2026

ಸಿದ್ದರಾಮಯ್ಯ ಇನ್ನೂ ಬರೀ 15 ದಿನಗಳ ಸರದಾರ ಮಾತ್ರ ; ಕಾಳು ತಿನ್ನೋ ಕೋಳಿಗಳು- ಕಾರಜೋಳ ವ್ಯಂಗ್ಯ

Must read

ಜನಸಾಮಾನ್ಯರ ಕಷ್ಟ-ನಷ್ಟ ಏನೇ ಇರಲಿ. ಕುರ್ಚಿ ಮಾತ್ರ ನನ್ನದಾಗಿರಲಿ ಅನ್ನೋದು ಸದ್ಯದ ಹಲವು ರಾಜಕಾರಣಿಗಳ ಮನಸ್ಥಿತಿ. ಪ್ರಜಾ ಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು ಎಂದು ಇವರು ಬಾಯಿ ಮಾತಿಗೆ ಹೇಳುತ್ತಾರಾದರೂ ಆ ಪ್ರಜೆಯ ದುಗುಡ-ದುಮ್ಮಾನಕ್ಕೊಂದು ಪರಿಹಾರ ಹುಡುಕುವ ಗೋಜಿಗೆ ಇವರು ಯಾರು ಹೋಗಲ್ಲ.

ಯಾಕೆಂದರೆ ರಾಜಕಾರಣ ಅನ್ನೋದು ಹಣ ಮತ್ತು ಅಧಿಕಾರದ ದಾಹದ ಮೇಲೆ ನಿಂತ ಸ್ತಂಭವೇ ಹೊರತು. ಅದು ಜನಸಾಮಾನ್ಯರ ಕಷ್ಟಕ್ಕಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಇಲ್ಲಿಯವರೆಗೆ ಹಲವಾರು ರಾಜಕಾರಣಿಗಳು ಕುರ್ಚಿಗಾಗಿ ಕಿತ್ತಾಡಿದ್ದಾರೆ. ಅನ್ನ ನೀಡಿದ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ. ಗದ್ದುಗೆ ಏರಲು ನಾನಾ ತರಹದ ಸರ್ಕಸ್ ಮಾಡಿದ್ದಾರೆ.

ಸದ್ಯ ಇಂತಹದ್ದೇ ಒಂದು ಸರ್ಕಸ್ ಕರುನಾಡಿನಲ್ಲಿ ನಡೆಯುತ್ತಿದೆ. ಅದರೆ ಹೆಸರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಿರುವ ಕುರ್ಚಿ ಕಿತ್ತಾಟ. ಕಳೆದ ಹಲವಾರು ದಿನಗಳಿಂದ ಅಲ್ಲ ತಿಂಗಳಿಂದ ಇಬ್ಬರು ಸಿಎಂ ಕುರ್ಚಿಯ ಮೇಲೆ ಟವೆಲ್ ಹಾಕಿದ್ದಾರೆ. ಇಬ್ಬರ ಪರ ಬೆಂಬಲಿಗರು ಹಾದಿ ಬೀದಿಯಲ್ಲಿ ಬಡಿದಾಡಿಕೊಳ್ಳುತ್ತಿದ್ದಾರೆ. ಫಲಿತಾಂಶವೇನು..? ಎನ್ನುವುದು ಮುಂಬರುವ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ 15 ದಿನಗಳ ಸುಲ್ತಾನ ಎಂಬ ಬಾಂಬ್‌ನ್ನು ಬಿಜೆಪಿಯ ನಾಯಕ ಕಾರಜೋಳ ಸಿಡಿಸಿದ್ದಾರೆ.

ಕಾರಜೋಳ ಅವರ ಪ್ರಕಾರ, ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿ ಕೂರೋದು ಇನ್ನು ಕೇವಲ 15 ದಿನ ಮಾತ್ರವಂತೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಕೇವಲ 15 ದಿನಗಳ ಸರದಾರ ಮಾತ್ರ ಎಂದು ಹೇಳುವ ಮೂಲಕ ಕಾರಜೋಳ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದಾರೆ. ಕಾರಜೋಳ ಅವರ ಪ್ರಕಾರ ಮೇ 4ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದ್ದು, ಅಂದೇ ಸಿದ್ದರಾಮಯ್ಯ ಅವರ ಕುರ್ಚಿಯ ಕಾಲು ಎಷ್ಟು ಗಟ್ಟಿ ಇದೆ ಎನ್ನುವ ಸತ್ಯ ಕೂಡ ಹೊರ ಬರಲಿದೆ.

ಕಾಂಗ್ರೆಸ್ ಪಾಳಯದ ಒಳಗಿನ ಗುಟ್ಟನ್ನು ರಟ್ಟು ಮಾಡ್ತಾ ಸಂಸದ ಕಾರಜೋಳ ಹೈಕಮಾಂಡ್ ಮಟ್ಟದಲ್ಲಿ ದೊಡ್ಡ ಮಟ್ಟದ ಲಾಬಿ ನಡೀತಿದೆ ಅಂದಿದ್ದಾರೆ. ಅವರ ಮಾಹಿತಿ ಪ್ರಕಾರ, ಸಿದ್ದರಾಮಯ್ಯ ಅವರನ್ನೇ ಮುಂದುವರಿಸಬೇಕು ಅಂತ 40 ಶಾಸಕರು ಹಠ ಹಿಡಿದಿದ್ರೆ, ಡಿ.ಕೆ. ಶಿವಕುಮಾರ್ ಅವರಿಗೆ ಪಟ್ಟ ಕಟ್ಟಬೇಕು ಅಂತ 50 ಶಾಸಕರು ದೆಹಲಿಗೆ ದೌಡಾಯಿಸಿದ್ದಾರಂತೆ. ಇಷ್ಟೇ ಅಲ್ಲ ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಲು ಈಗಾಗಲೇ ಶಾಲು ಹೊತ್ತುಕೊಂಡು ರೆಡಿಯಾಗಿ ಕುಳಿತಿದ್ದಾರೆ ಅನ್ನೋದು ಕಾರಜೋಳ ಅವರ ಅಭಿಮತ.

ಈ ಕುರ್ಚಿ ಕಚ್ಚಾಟದಿಂದಾಗಿ ವಿಧಾನಸೌಧದಲ್ಲಿ ಆಡಳಿತವೇ ಇಲ್ಲದಂತಾಗಿದೆ ಅನ್ನೋದು ವಿರೋಧ ಪಕ್ಷಗಳು ಈಗಾಗಲೇ ಗಂಭೀರ ಆರೋಪವನ್ನು ಮಾಡುತ್ತಿವೆ. ಈ ಸಮಯದಲ್ಲಿ ಎಲ್ಲರೂ ತಮ್ಮ ಕುರ್ಚಿ ಉಳಿಸಿಕೊಳ್ಳುವ ಆತುರದಲ್ಲಿದ್ದಾರೆಯೇ ಹೊರತು ಅಭಿವೃದ್ಧಿಯ ಬಗ್ಗೆ ಯಾರಿಗೂ ಚಿಂತೆ ಇಲ್ಲ. ರಾಜ್ಯ ಸರ್ಕಾರದಲ್ಲಿ ಕುರ್ಚಿ ಕಚ್ಚಾಟದಿಂದಾಗಿ ಅಡ್ಮಿನಿಸ್ಟ್ರೇಷನ್ ಸಂಪೂರ್ಣ ಕುಸಿದು ಹೋಗಿದೆ. ಮೇ 4ಕ್ಕೆ ಐದು ರಾಜ್ಯಗಳ ಜೊತೆ ದಾವಣಗೆರೆ ಮತ್ತು ಬಾಗಲಕೋಟೆ ರಿಸಲ್ಟ್ ಕೂಡ ಬರಲಿದ್ದು, ಅಂದೇ ಸಿದ್ದರಾಮಯ್ಯ ಗಂಟುಮೂಟೆ ಕಟ್ಟಲಿದ್ದಾರೆ ಎಂದು ಕಾರಜೋಳ ಭವಿಷ್ಯ ನುಡಿದಿದ್ದಾರೆ.

ಇನ್ನೂ ಇದೇ ಸಮಯದಲ್ಲಿ ರಾಜ್ಯದ ಕಡುಬೇಸಿಗೆಯ ಕಷ್ಟಗಳ ಬಗ್ಗೆಯೂ ಕಾರಜೋಳ ದನಿ ಎತ್ತಿದ್ದಾರೆ. ಅನೇಕ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಅಧಿಕಾರ ಉಳಿಸಿಕೊಳ್ಳುವ ಗಡಿಬಿಡಿಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಪ್ರತಿ ಜಿಲ್ಲೆಗೆ ಕನಿಷ್ಠ 50 ಕೋಟಿ ರೂಪಾಯಿ ಅನುದಾನ ಕೊಡಬೇಕು ಎಂದು ಒತ್ತಾಯಿಸಿರುವ ಕಾರಜೋಳ ಜನರ ಬಾಯಾರಿಕೆಗಿಂತ ಸರ್ಕಾರಕ್ಕೆ ಕುರ್ಚಿ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಒಳಮೀಸಲಾತಿ ವಿಚಾರದಲ್ಲಿ ಕೂಡ ಸಿದ್ದರಾಮಯ್ಯ ಸರ್ಕಾರಕ್ಕೆ ಕಾರಜೋಳ ತಿರುಗೇಟು ನೀಡಿದ್ದಾರೆ. ಈಗ ಸಿದ್ದರಾಮಯ್ಯ ಮಾಡಿರೋದು ಒಳಮೀಸಲಾತಿಯೇ ಅಲ್ಲ. ನಾಗಮೋಹನದಾಸ್, ಮಾಧುಸ್ವಾಮಿ ಅವರ ವರದಿಗಳನ್ನೆಲ್ಲಾ ಅವೈಜ್ಞಾನಿಕ ಅಂತ ಹೇಳಿ ಈಗ ಶಾಲಿನಿ ರಜನೀಶ್ ಅವರಿಂದ ಹೊಸ ವರದಿ ತರಿಸಿಕೊಳ್ಳುವ ಅವಶ್ಯಕತೆ ಏನಿತ್ತು? ಸರ್ವೆ ಹೆಸರಲ್ಲಿ ಸಾವಿರಾರು ಕೋಟಿ ಸುರಿದು ಏನು ಪ್ರಯೋಜನ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಒಳಮೀಸಲಾತಿ ಹೆಸರಲ್ಲಿ ದಲಿತರಿಗೆ ದ್ರೋಹ ಮಾಡಲಾಗುತ್ತಿದೆ ಎಂಬುದು ಅವರ ಗಂಭೀರ ಆರೋಪ.

ಕಾಂಗ್ರೆಸ್‌ನ ದಲಿತ ನಾಯಕರು ಒಳಮೀಸಲಾತಿ ಘೋಷಣೆಯಾದಾಗ ಸಂಭ್ರಮಾಚರಣೆ ಮಾಡಿದ್ದನ್ನ ಕಾರಜೋಳ ಲೇವಡಿ ಮಾಡಿದ್ದಾರೆ. ಕೆಲವು ನಾಯಕರಿಗೆ ತವರು ಮನೆ ಯಾವುದು, ಗಂಡನ ಮನೆ ಯಾವುದು ಅಂತಲೇ ಗೊತ್ತಿಲ್ಲ. ಅಂತಹವರಿಗೆ ಏನು ಹೇಳೋದು? ಕೆಲವು ಕೋಳಿಗಳಿಗೆ ಕಾಳು ಹಾಕಿದ್ರೆ ಸಾಕು, ಅವು ಹೇಗೆ ಸಂಭ್ರಮ ಪಡುತ್ತವೆ ಎಂದು ಅತ್ಯಂತ ತೀಕ್ಷ್ಣವಾಗಿ ತಿವಿದಿದ್ದಾರೆ. ಕಾಂಗ್ರೆಸ್ ನಾಯಕರ ಸಂಭ್ರಮ ಕೇವಲ ತೋರಿಕೆಯದು ಎಂದಿದ್ದಾರೆ.

ಒಟ್ಟಿನಲ್ಲಿ, ಮೇ 4ರ ಫಲಿತಾಂಶಕ್ಕೂ ಮೊದಲೇ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾರಜೋಳ ಹೇಳಿದಂತೆ ಸಿದ್ದರಾಮಯ್ಯ ಅವರ ’15 ದಿನಗಳ ಪರ್ವ’ ಮುಗಿಯುತ್ತಾ? ಅಥವಾ ಡಿ.ಕೆ. ಶಿವಕುಮಾರ್ ಅವರ ಹುಟ್ಟುಹಬ್ಬಕ್ಕೆ ಸಿಎಂ ಪಟ್ಟದ ಉಡುಗೊರೆ ಸಿಗುತ್ತಾ? ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ. ಸದ್ಯಕ್ಕಂತೂ ವಿಧಾನಸೌಧದ ಅಂಗಳದಲ್ಲಿ ಕುರ್ಚಿ ಕದನ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ.

- Advertisement -spot_img

More articles

- Advertisement -spot_img

Latest article