No menu items!
14.4 C
Munich
Sunday, May 3, 2026

‘ಸಿಲಿಂಡರ್’ದಿಂದ ‘ಹಣ’ ಸೋರಿಕೆ ; ಕಂಗಾಲಾದ ಹೋಟೆಲ್ ಮಾಲೀಕರಿಂದ ಸರ್ಕಾರಕ್ಕೆ ಒತ್ತಾಯ

Must read

ಹೋಟೆಲ್ ಅಂದ್ರೆ ಅಲ್ಲಿ ಬರೀ ರುಚಿಯಾದ ಊಟ, ತಿಂಡಿ ಅಷ್ಟೇ ಇರಲ್ಲ. ಆ ರುಚಿಯ ಹಿಂದೆ ಬೆಂಕಿಯಂತೆ ಉರಿಯುವ ಬೆಲೆ ಏರಿಕೆಯ ಕಥೆಯೂ ಇರುತ್ತೆ.

ಇವತ್ತು ಮಧ್ಯಮ ವರ್ಗದ ಮನುಷ್ಯ ನೆಮ್ಮದಿಯಿಂದ ಹೊರಗಡೆ ಹೋಗಿ ಒಂದು ಮಸಾಲೆ ದೋಸೆ ತಿನ್ನೋಣ ಅಂದ್ರೂ ಕೈ ಸುಡುವಂತಾಗಿದೆ. ಇದಕ್ಕೆ ಕಾರಣ ಹೋಟೆಲ್ ಮಾಲೀಕರಲ್ಲ, ಬದಲಾಗಿ ಗಗನಕ್ಕೇರುತ್ತಿರುವ ವಾಣಿಜ್ಯ ಸಿಲಿಂಡರ್ ಬೆಲೆ.

ಅಡುಗೆ ಅನಿಲದ ದರ ಏರಿಕೆಯು ಇವತ್ತು ಹೋಟೆಲ್ ಉದ್ಯಮವನ್ನೇ ಬುಡಮೇಲು ಮಾಡುತ್ತಿದ್ದು, ಸಾಮಾನ್ಯ ಜನರ ಹೊಟ್ಟೆ ಮೇಲೆ ನೇರವಾಗಿ ಹೊಡೆತ ಬೀಳ್ತಿದೆ. ಈ ಬೆಲೆ ಏರಿಕೆಯ ಬಿಸಿಯಿಂದ ಕಂಗೆಟ್ಟಿರುವ ಹೋಟೆಲ್ ಮಾಲೀಕರು ಈಗ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಹೌದು, ವಾಣಿಜ್ಯ ಬಳಕೆಯ 19 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ದಿಢೀರ್ ಅಂತ ಭಾರಿ ಏರಿಕೆಯಾಗಿರೋದು ಹೋಟೆಲ್ ಉದ್ಯಮಕ್ಕೆ ಶಾಕ್ ನೀಡಿದೆ.

ಶುಕ್ರವಾರ(ಮೇ1) ಒಂದೇ ದಿನ ದಾಖಲೆಯ 993 ರೂಪಾಯಿಗಳಷ್ಟು ದರ ಏರಿಕೆ ಮಾಡಲಾಗಿದ್ದು, ಇದು ಹೋಟೆಲ್ ಮಾಲೀಕರ ನಿದ್ದೆ ಗೆಡಿಸಿದೆ. ಇದನ್ನ ಖಂಡಿಸಿರುವ ‘ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘ’ (KSHA), ಸಿಲಿಂಡರ್ ಮೇಲಿನ ಜಿಎಸ್‌ಟಿ (GST) ಪ್ರಮಾಣವನ್ನು ತಕ್ಷಣವೇ ಶೇಕಡಾ 18 ರಿಂದ ಶೇಕಡಾ 5 ಕ್ಕೆ ಇಳಿಸಬೇಕು ಅಂತ ಸರ್ಕಾರಕ್ಕೆ ಖಡಕ್ ಆಗಿ ಆಗ್ರಹಿಸಿದೆ.

ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರು ನೀಡಿರುವ ಲೆಕ್ಕಾಚಾರ ಕೇಳಿದ್ರೆ ಯಾರೇ ಆದ್ರೂ ಬೆಚ್ಚಿಬೀಳೋದು ಗ್ಯಾರಂಟಿ. ಕಳೆದ ಕೇವಲ 60 ದಿನಗಳಲ್ಲಿ ಸರ್ಕಾರ ಬರೋಬ್ಬರಿ 1,308 ರೂಪಾಯಿಗಳಷ್ಟು ಬೆಲೆ ಏರಿಕೆ ಮಾಡಿದೆ. ಅಂದ್ರೆ ಮಾರ್ಚ್ ತಿಂಗಳಲ್ಲಿ ಸುಮಾರು 1,800 ರೂಪಾಯಿ ಆಸುಪಾಸಿನಲ್ಲಿದ್ದ ಸಿಲಿಂಡರ್ ಬೆಲೆ ಇವತ್ತು 3,100 ರೂಪಾಯಿ ಗಡಿ ದಾಟಿದೆ. ಕೇವಲ ಎರಡು ತಿಂಗಳ ಅವಧಿಯಲ್ಲಿ ಶೇಕಡಾ 70 ರಷ್ಟು ದರ ಹೆಚ್ಚಳವಾಗಿದೆ ಅಂದ್ರೆ ಹೋಟೆಲ್‌ಗಳು ಬಾಗಿಲು ಹಾಕದೆ ಇನ್ನೇನು ಮಾಡಬೇಕು ಅನ್ನೋದು ಮಾಲೀಕರ ಅಳಲು.

ಈ ಬೆಲೆ ಏರಿಕೆಗೆ ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಜಾಗತಿಕ ಇಂಧನ ಬೆಲೆಗಳ ಏರಿಕೆಯೇ ಕಾರಣ ಅಂತ ಹೇಳಲಾಗ್ತಿದೆ.

ಆದರೆ ಇದರ ನೇರ ಪರಿಣಾಮ ಬೀರೋದು ಮಾತ್ರ ಗ್ರಾಹಕರ ಮೇಲೆ. ಸರ್ಕಾರ ತಕ್ಷಣವೇ ಜಿಎಸ್‌ಟಿ ಇಳಿಸಿ ಪರಿಹಾರ ನೀಡದಿದ್ದರೆ, ನಾವು ಅನಿವಾರ್ಯವಾಗಿ ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕಬೇಕಾಗುತ್ತೆ. ಇದರಿಂದ ಹೊರಗಡೆ ಊಟ ಮಾಡುವುದು ದುಬಾರಿಯಾಗಲಿದೆ ಎಂದು ಶೆಟ್ಟಿ ಅವರು ಎಚ್ಚರಿಸಿದ್ದಾರೆ.
ಇದರರ್ಥ ಹೋಟೆಲ್ ತಿಂಡಿ-ತಿನಿಸುಗಳ ದರ ಶೀಘ್ರದಲ್ಲೇ ಏರಿಕೆಯಾಗೋದು ಬಹುತೇಕ ಪಕ್ಕಾ ಆದಂತಿದೆ.

ಹೋಟೆಲ್ ಉದ್ಯಮವು ಈಗಾಗಲೇ ಹತ್ತಾರು ಸಂಕಷ್ಟಗಳನ್ನ ಎದುರಿಸುತ್ತಿದೆ. ಕೋವಿಡ್‌ನಿಂದಾದ ನಷ್ಟದಿಂದ ಈಗಷ್ಟೇ ಉದ್ಯಮ ಚೇತರಿಸಿಕೊಳ್ಳುತ್ತಿದೆ. ಇಂತಹ ಸಮಯದಲ್ಲಿ ಇಂಧನ ವೆಚ್ಚದ ಜೊತೆಗೆ ಬೆಂಗಳೂರಿನಲ್ಲಿ ಕಸ ವಿಲೇವಾರಿ ಶುಲ್ಕ ಮತ್ತು ಸ್ಥಳೀಯ ತೆರಿಗೆಗಳ ಹೊರೆ ಹೋಟೆಲ್ ಮಾಲೀಕರನ್ನ ಹೈರಾಣಾಗಿಸಿದೆ.

ಈಗಾಗಲೇ ರಾಜ್ಯದಾದ್ಯಂತ ನೂರಾರು ಸಣ್ಣ ಮತ್ತು ಮಧ್ಯಮ ಗಾತ್ರದ ಹೋಟೆಲ್‌ಗಳು ಆರ್ಥಿಕ ನಷ್ಟ ತಾಳಲಾರದೆ ಬಾಗಿಲು ಹಾಕುತ್ತಿವೆ. ಸರ್ಕಾರ ಕಣ್ಣು ಮುಚ್ಚಿ ಕುಳಿತರೆ ಇಡೀ ಹೋಟೆಲ್ ವಲಯವೇ ಬಿಕ್ಕಟ್ಟಿಗೆ ಸಿಲುಕಲಿದೆ.

ವಾಣಿಜ್ಯ ಎಲ್‌ಪಿಜಿ ಮೇಲಿನ ಜಿಎಸ್‌ಟಿಯನ್ನು ಶೇ.18ರಿಂದ ಶೇ.5ಕ್ಕೆ ಇಳಿಸುವುದು ಈಗ ಇರುವ ಏಕೈಕ ದಾರಿ. ಟ್ಯಾಕ್ಸ್ ಕಡಿತ ಮಾಡಿದರೆ ಉದ್ಯಮಕ್ಕೆ ತಕ್ಷಣದ ರಿಲೀಫ್ ಸಿಗುತ್ತೆ ಮತ್ತು ಬೆಲೆಗಳನ್ನ ಹತೋಟಿಯಲ್ಲಿಡಬಹುದು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಬಿಟ್ಟು ಉದ್ಯಮದ ಉಳಿವಿಗಾಗಿ ತುರ್ತು ಕ್ರಮ ಕೈಗೊಳ್ಳಬೇಕು ಅಂತ ಸಂಘ ಮನವಿ ಮಾಡಿದೆ. ಊಟದ ದರ ಸ್ಥಿರವಾಗಿರಬೇಕು ಅಂದ್ರೆ ಮೊದಲು ಸಿಲಿಂಡರ್ ಬೆಲೆ ನಿಯಂತ್ರಣಕ್ಕೆ ಬರಬೇಕಿದೆ.

ಹೋಟೆಲ್ ಉದ್ಯಮ ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿದೆ. ಇಂತಹ ಕಷ್ಟದ ಸಮಯದಲ್ಲಿ ನಮ್ಮನ್ನ ಬೆಂಬಲಿಸುವುದು ಸರ್ಕಾರದ ಜವಾಬ್ದಾರಿ ಅಂತ ಜಿ.ಕೆ. ಶೆಟ್ಟಿ ಸ್ಪಷ್ಟವಾಗಿ ಹೇಳಿದ್ದಾರೆ. ಸಿಲಿಂಡರ್ ಬೆಲೆ ಗಗನಕ್ಕೇರಿರೋದು ಬರೀ ಹೋಟೆಲ್ ಮಾಲೀಕರಿಗಷ್ಟೇ ಅಲ್ಲ, ದಿನನಿತ್ಯ ಹೋಟೆಲ್ ಮೇಲೆ ಅವಲಂಬಿತವಾಗಿರುವ ಬ್ಯಾಚುಲರ್ಸ್, ಕಾರ್ಮಿಕರು ಮತ್ತು ಜನಸಾಮಾನ್ಯರಿಗೂ ತಲೆನೋವಾಗಿ ಪರಿಣಮಿಸಿದೆ.

ಒಟ್ಟಿನಲ್ಲಿ, ಸಿಲಿಂಡರ್ ಬೆಲೆ ಏರಿಕೆ ಎಂಬ ಬೆಂಕಿ ಹೋಟೆಲ್‌ಗಳನ್ನ ಸುಡುತ್ತಿದೆ. ಜಿಎಸ್‌ಟಿ ಕಡಿತವಾಗದಿದ್ರೆ ಮುಂದಿನ ದಿನಗಳಲ್ಲಿ ಹೋಟೆಲ್‌ಗಳಲ್ಲಿ ಕೇವಲ ಶ್ರೀಮಂತರು ಮಾತ್ರ ಕಾಣಸಿಗ್ತಾರೆ‌.


ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಈ ದರ ಏರಿಕೆಯ ಬಗ್ಗೆ ಗಂಭೀರ ಚಿಂತನೆ ಮಾಡುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ.
ಸದ್ಯಕ್ಕಂತೂ ಹೋಟೆಲ್ ಅಂಗಳದಲ್ಲಿ ಸಿಲಿಂಡರ್ ಸಂಕಟ ಮನೆ ಮಾಡಿದೆ.

- Advertisement -spot_img

More articles

- Advertisement -spot_img

Latest article